ಚಾರ್ಮಾಡಿ ಘಾಟಿಯಲ್ಲಿ ದಿನನಿತ್ಯ ಕಾಡಾನೆ ಸಂಚಾರ: ವಾಹನ ಸವಾರರ ಎದೆಯಲ್ಲಿ ಢವಢವ!
ಚಿಕ್ಕಮಗಳೂರು, ಮೇ 23: ಕಳೆದ 15 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಹಾವಾಳಿ ಮಿತಿಮೀರಿದೆ. 22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿಯಲ್ಲಿ ಒಂದೇ ಆನೆ ಇದ್ಯೋ ಅಥವಾ ಹಲವು ಇದ್ದಾವೋ ಗೊತ್ತಿಲ್ಲ. ಈ ಮಾರ್ಗದಲ್ಲಿ ಓಡಾಡೋ ಜನ ನಿತ್ಯ ಒಂದೊಂದು ಜಾಗದಲ್ಲಿ ಆನೆ ಕಂಡು ಆತಂಕಕ್ಕೀಡಾಗಿದ್ದಾರೆ.
ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತೆ. ಎರಡು ಮೂರು ದಿನದ ಹಿಂದೆ ರಸ್ತೆ ಮಧ್ಯೆ ನಿಂತಿದ್ದ ಆನೆ ಕಂಡು ಸರ್ಕಾರಿ ಬಸ್ ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು. ಬೈಕ್ ಹಾಗೂ ಕಾರು ಸವಾರರು ಕೂಡ ನಿಂತಲ್ಲೇ ನಿಂತಿದ್ದರು. ಗಾಡಿ ರಿವರ್ಸ್ ತೆಗೆದು ವಾಪಸ್ ಹೋಗೋದಕ್ಕೂ ಈ ಹಾವು ಬಳುಕಿನ ಮೈಕಟ್ಟಿನ ಚಾರ್ಮಾಡಿ ರಸ್ತೆಯಲ್ಲಿ ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.
ಚಾರ್ಮಾಡಿ ಘಾಟಿಯಲ್ಲಿ ಕಾಡಾನೆಯಿಂದ ನಾಳೆ ಅನಾಹುತವಾದ ಬಳಿಕ ಪರಿಹಾರ ಎಂದು ಎಚ್ಚೆತ್ತುಕೊಳ್ಳುವ ಬದಲು ಶೀಘ್ರವೇ ಆನೆಯನ್ನೇ ಸ್ಥಳಾಂತರ ಮಾಡುವುಡು ಒಳ್ಳೆಯದು ಎಂದು ಜನ ಆಗ್ರಹಿಸಿದ್ದಾರೆ.

ಚಾರ್ಮಾಡಿ ಘಾಟಿಯ ಈ ರಸ್ತೆ ಕೇವಲ ರಸ್ತೆಯಾಗಿಲ್ಲ. ಜೀವ ಉಳಿಸೋ ಸಂಜೀವಿನಿ ಕೂಡ. ರಾಜ್ಯದ ಮೂಲೆ-ಮೂಲೆಗಳಿಂದ ನಿತ್ಯ ನೂರಾರು ರೋಗಿಗಳು ಇದೇ ಮಾರ್ಗದಲ್ಲಿ ಮಂಗಳೂರು-ಮಣಿಪಾಲ್ ಆಸ್ಪತ್ರೆಗಳಿಗೆ ಹೋಗುತ್ತಾರೆ. ಶಾಲಾ-ಕಾಲೇಜಿಗೆ ಓಡಾಡುವ ಮಕ್ಕಳು ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಮಂಗಳೂರಿಗೆ ಹಣ್ಣು-ತರಕಾರಿ ಕೊಂಡೊಯ್ಯುವ ನೂರಾರು ವಾಹನಗಳು ನಿತ್ಯ ಓಡಾಡುತ್ತವೆ. ದಿನಕ್ಕೆ ಸುಮಾರು 2000 ಸಾವಿರಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ.
ಬದುಕಿನ ಅನಿವಾರ್ಯತೆಗೆ ಮಧ್ಯರಾತ್ರಿಯೂ ಇಲ್ಲಿ ಹಲವು ವಾಹನಗಳು ಓಡಾಡುತ್ತವೆ. ಕಿರಿದಾದ ದಾರಿ. ಜೊತೆಗೆ ಘಾಟ್ ಸೆಕ್ಷನ್. ಟರ್ನ್ ಮಾಡಿಕೊಂಡು ವಾಪಸ್ ಬರೋದು ಕಷ್ಟ ಸಾಧ್ಯ. ಒಂದು ವೇಳೆ ಆನೆ ದಾಳಿಗೆ ಮುಂದಾದರೆ ತಪ್ಪಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಅದೃಷ್ಟವಶಾತ್ ಈವರೆಗೂ ಅಂತಹ ಯಾವುದೇ ಅಹಾಹುತ ಸಂಭವಿಸಿಲ್ಲ. ಸಂಭವಿಸೋ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಆನೆಯ ಸ್ಥಳಾಂತರಕ್ಕೆ ಸ್ಥಳಿಯರು ಆಗ್ರಹಿಸಿದ್ದಾರೆ.

ಒಟ್ಟಾರೆ, ಆನೆಯನ್ನು ಕಣ್ಣಾರೆ ಕಂಡರೂ ಜನಸಾಮಾನ್ಯರು ಅಗತ್ಯ ಹಾಗೂ ಅನಿವಾರ್ಯತೆಯಿಂದ ಇಂದಿಗೂ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಭಯದಿಂದಲೇ ವಾಹನ ಸವಾರರು ಜನರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಇನ್ನು ಕಾಡಾನೆ ದಾಳಿಯಿಂದ ಮೂಡಿಗೆರೆಯಲ್ಲಿ ಆರೇ ತಿಂಗಳಲ್ಲಿ ನಾಲ್ಕೈದು ಜನ ಪ್ರಾಣ ಕಳೆದುಕೊಂಡಿದ್ದರು. ಇದೀಗ ಚಾರ್ಮಾಡಿ ಘಾಟ್‌ನಲ್ಲೂ ಕಾಡಾನೆಗಳು ಸಂಚರಿಸುತ್ತಿದ್ದು, ಅರಣ್ಯ ಇಲಾಖೆ ಹಾಗೂ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.
ಕಾಡಾನೆ ದಾಳಿಯಿಂದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುವುದು ಅನಾಹುತವಾದ ಬಳಿಕ ಸರ್ಕಾರ ಪರಿಹಾರ ನೀಡುತ್ತೇವೆ ಎನ್ನುವುದಕ್ಕಿಂತ ಮೊದಲೇ ಕಾಡಾನೆ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಂಡರೆ ಮುಂದಾಗುವ ಅನಾಹುತವನ್ನು ತಪ್ಪಿಸಿದಂತಾಗುತ್ತದೆ. ಆದರೆ ಈಗಾಗಲೇ ವಿಚಾರ ತಿಳಿದಿರುವ ಅರಣ್ಯ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications