ಮೂಡಿಗೆರೆಯ ತಳವಾರ ಗ್ರಾಮದಲ್ಲಿ ಕಾಡಾನೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಚಿಕ್ಕಮಗಳೂರು, ಡಿಸೆಂಬರ್ 4: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಾಡಾನೆ ಸೆರೆಯಿಂದ ಸದ್ಯ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ತಳವಾರ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಆರು ಸಾಕಾನೆಗಳೊಂದಿಗೆ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಪುಂಡಾನೆಯನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮ
ಈ ಕಾಡಾನೆಯ ಸೆರೆಯಿಂದ ಇದರ ಜೊತೆಗಿದ್ದ ಮತ್ತೊಂದು ಕಾಡಾನೆ ತಪ್ಪಿಸಿಕೊಂಡು ಗಾಬರಿಯಿಂದ ಓಡಾಡುತ್ತಿರುವ ಬಗ್ಗೆ ಮಾಹಿತಿಯಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಈ ಕಾಡಾನೆ ಸೆರೆಯಿಂದಾಗಿ ಒಟ್ಟು ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಂತಾಗಿದೆ. ಈ ಹಿಂದೆ ಕಾಡಾನೆ ಸೆರೆಗೆ ಡ್ರೋಣ್ ಬಳಸಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತಲೆಕೆಡಿಸಿಕೊಂಡಿದ್ದ ಅರಣ್ಯ ಇಲಾಖೆ ಮತ್ತೆ ಹುಡುಕಾಟ ಆರಂಭಿಸಿದಾಗ ಕಾಡಾನೆ ಸೆರೆಯಾಗಿದೆ.
ತಳವಾರ ಗ್ರಾಮದ ಅಂಚಿನಲ್ಲಿರುವ ಅರಣ್ಯದಲ್ಲಿ ಪುಂಡಾನೆಯನ್ನು ಅರೆವಳಿಕೆ ಮದ್ದು ನೀಡಿ ಖೆಡ್ಡಾಗೆ ಕೆಡವಲಾಗಿತ್ತು. ಆದರೆ ಪುಂಡಾನೆ ಎಚ್ಚರಗೊಂಡಾಗ ಸಾಕಾನೆ ಜೊತೆ ಕಾದಾಟಕ್ಕೆ ಮುಂದಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಸಾಕಾನೆಗಳ ಜೊತೆಗೆ ಕಾಡಾನೆ ಕಾದಾಟ ನಡೆಸಿದೆ. ಕೊನೆಯಲ್ಲಿ ಕಾಡಾನೆ ಕಾಲುಗಳಿಗೆ ಕಟ್ಟಿರುವ ಹಗ್ಗಗಳಿಂದ ಬಂಧಿಸಿ, ಸಾಕಾನೆಗಳು ಹರಸಾಹಸ ಪಟ್ಟು ಸೆರೆ ಹಿಡಿದ ಕಾಡಾನೆಯನ್ನು ಕಾಡಿನಿಂದ ಹೊರಕ್ಕೆ ತರಲಾಯಿತು.
ಈ ವೇಳೆ ಸೆರೆಯಾದ ಕಾಡಾನೆಯನ್ನು ನೋಡಲು ಜನರು ಬರಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು. ಆದರೂ ಕೂಡ ನೂರಾರು ಸಂಖ್ಯೆಯಲ್ಲಿ ಜನರು ಕಾಡಿಗೆ ದೌಡಾಯಿಸಿದ್ದರು. ಇನ್ನು ಸೆರೆಯಾದ ಆನೆ ಜೊತೆಗೆ ಜನರಿಗೆ ಉಪಟಳ ನೀಡುತ್ತಿರುವ ಮತ್ತೊಂದು ಪುಂಡಾನೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.