ಮೊದಲು ಕೆಲಸ ಮಾಡಿ, ವೋಟ್ ಪಡೆಯಿರಿ, ಇಲ್ಲದಿದ್ದರೆ ಚುನಾವಣಾ ಬಹಿಷ್ಕಾರ: ಚಿಕ್ಕಮಗಳೂರಿನಲ್ಲಿ ಜನಾಕ್ರೋಶ
ಚಿಕ್ಕಮಗಳೂರು, ಮಾರ್ಚ್, 03: ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ. ಆದ್ದರಿಂದ ನಾವು ಚುನಾವಣಾ ಬಹಿಷ್ಕಾರ ಹಾಕಲು ಮುಂದಾಗಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಗೆ ಮೂರು ಪಕ್ಷಗಳಿಂದಲೂ ಭಾರಿ ತಯಾರಿ ನಡೆಸುತ್ತಿದ್ದಾರೆ. ಆದರೆ ಅಭಿವೃದ್ಧಿ ಕೆಸಲಗಳು ಮಾತ್ರ ಆಗುತ್ತಿಲ್ಲ ಎಂದು ಇಲ್ಲಿನ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರು ಹೀಗೆ ನೂರು ಕಾರಣಗಳನ್ನಿಟ್ಟುಕೊಂಡು ಎಲೆಕ್ಷನ್ ಬಾಯ್‌ಕಟ್‍ಗೆ ಮುಂದಾಗಿದ್ದಾರೆ. ಹಾಗಾದರೆ ಸರ್ಕಾರ ಹಾಗೂ ಅಧಿಕಾರಿಗಳು ಈವರೆಗೂ ಮಾಡಿದ್ದೇನು ಎನ್ನುವ ಪ್ರಶ್ನೆ ಎದ್ದಿದೆ. ನೀರು, ರಸ್ತೆ, ಸೂರಿಗಾಗಿಯೇ ಹೆಚ್ಚಾಗಿ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ. ಇದರುವರೆಗೂ ಸರ್ಕಾರ ಮಾತ್ರ ಜನರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಲೇ ಬಂದಿದೆ. ಇದೀಗ ರೊಚ್ಚಿಗೆದ್ದ ಜನ ಚುನಾವಣೆ ಬಹಿಷ್ಕಾರದ ಹಾದಿಯನ್ನು ಹಿಡಿದಿದ್ದಾರೆ. ನೋವಿನ ಮೇಲೆ ನೋವುಗಳು ಆಗುತ್ತಿದ್ದರೂ ಇಷ್ಟು ದಿನ ಜನರು ಸುಮ್ಮನೆ ಇದ್ದರು. ಆದರೆ ಇದೀಗ ದೃಢ ನಿರ್ಧಾರವನ್ನು ಮಾಡಿ ರಾಜಕೀಯ ನಾಯಕರುಗಳ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಚಿಕ್ಕಮಗಳೂರಲ್ಲಿ ಚುನಾವಣೆ ಬಹಿಷ್ಕಾರದ ಕೂಗು
ರಸ್ತೆ, ನೀರು, ಸೂರು ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿಯೇ ಮಲೆನಾಡು ಭಾಗದಲ್ಲಿನ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳಿಬಂದಿದೆ. ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ ಹಾಗೂ ಕೊಪ್ಪ ಇಲ್ಲಿನ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಇಲ್ಲಿ ಜನವಸತಿಗಿಂತ ಅರಣ್ಯ-ಕಾಫಿತೋಟವೇ ಹೆಚ್ಚಿದೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಬಿದಿರುತಳ, ಮಧುಗುಂಡಿ, ದಿಣ್ಣೆಕೆರೆಯಲ್ಲಿ ಸಮಸ್ಯೆಗಳ ಆಗರವೇ ಇದೆ. ಸರ್ಕಾರ ಮಾತ್ರ ಇದರತ್ತ ತಲೆ ಹಾಕುತ್ತಿಲ್ಲ ಎನ್ನುವುದು ಜನರ ಆಕ್ರೋಶವಾಗಿದೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ
ಇನ್ನು ಕಳಸ ತಾಲೂಕಿನ ಶಂಕರಕೂಡಿಗೆ, ಸಂಸೆ, ಬಸ್ತಿಗದ್ದೆ, ಕೊಪ್ಪ ತಾಲೂಕಿನಲ್ಲಿ ಹಾಡುಗಾರ ಗ್ರಾಮ, ಶೃಂಗೇರಿಯಲ್ಲಿನ ಚಿತ್ರವಳ್ಳಿನ ಜನರು ಕೂಡ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರೆಲ್ಲರ ಬೇಡಿಕೆಯೂ ರಸ್ತೆ, ನೀರು, ಸೂರು ಕಲ್ಪಿಸಬೇಕು ಎನ್ನುವುದಾಗಿದೆ. ಇದನ್ನೆಲ್ಲ ಗಮನಿಸಿದರೆ ಸರ್ಕಾರ-ಅಧಿಕಾರಿಗಳು ಇಷ್ಟು ದಿನ ಏನು ಮಾಡಿದರು ಅನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಕೆಲಸ ಮಾಡಿ, ವೋಟ್ ತೆಗೆದುಕೊಳ್ಳಿ
ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಬಿದಿರುತಳ, ಮಧುಗುಂಡಿ ಜನ 2019ರಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿ ಹೋಗಿದ್ದರು. ಆಗ ಇಲ್ಲಿ ರಸ್ತೆ, ಚರಂಡಿ, ನೀರು, ವಿದ್ಯುತ್ ಸಮಸ್ಯೆಯೂ ಉಂಟಾಯಿತು. ಆಗಿನಿಂದಲೂ ಸಮಸ್ಯೆಗಳಿಗೆ ಸ್ಪಂದಿಸದೇ ಜಾಣಮೌನ ವಹಿಸಿರುವುದು ಕೂಡ ಜನಾಕ್ರೋಶಕ್ಕೆ ಕಾರಣವಾಗಿದೆ. ಮಲೆನಾಡು ತಾಲೂಕುಗಳ ಒಂದೊಂದು ಹಳ್ಳಿಯಲ್ಲಿ ಒಂದೊಂದು ಸಮಸ್ಯೆ ಇದೆ. ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ ಬೇಸತ್ತ ಜನ ಈಗ ಕೆಲಸ ಮಾಡಿ, ವೋಟ್ ತೆಗೆದುಕೊಳ್ಳಿ ಅಂತಾ ಗ್ರಾಮಗಳ ಮುಂದೆಯೇ ಬಹಿಷ್ಕಾರದ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲಭೂತ ಸೌಲಭ್ಯಗಳನ್ನು ಒದಗಿಸಿ
ಇನ್ನು ಊರಿಗೆ ಟವರ್, ಮೊಬೈಲ್‍ಗೆ ಓಟಿಪಿ ಬರಲಿ. ಆಗ ನಾವು ಬೂತಿಗೆ ಬರುತ್ತೇವೆ ಅಂತಾ ಕಳಸ ತಾಲೂಕಿನ ಬಲಿಗೆ, ಮೆಣಸಿನಹಾಡ್ಯ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ ಎಲೆಕ್ಷನ್ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ಈ ಕುಗ್ರಾಮದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಬಿಎಸ್‌ಎನ್ಎಲ್‌ಗೆ ಸರ್ಕಾರ ಹಾಲು-ತುಪ್ಪ ಬಿಟ್ಟ ಮೇಲೆ ಇಲ್ಲಿನ ಜನ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ. ಇಲ್ಲಿನ ಜನರಿಗೆ ಮೊಬೈಲ್ ಟವರ್ ಕೂಡ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ.
ಬ್ಯಾಂಕ್, ಪಡಿತರ ಸೇರಿದಂತೆ ಎಲ್ಲಿಗೆ ಹೋದರೂ ಓಟಿಪಿ ಕೇಳುತ್ತಾರೆ. ಆದರೆ ಟವರ್ ಇಲ್ಲದೇ ಇವರಿಗೆ ಓಟಿಪಿ ಬರುತ್ತಿರಲಿಲ್ಲ. ಹಾಗಾಗಿ, ಇಲ್ಲಿನ ಜನ ನಾವು ಯಾವುದೇ ಕಾರಣಕ್ಕೂ ಮತಕೇಂದ್ರಕ್ಕೆ ಹೋಗುವುದಿಲ್ಲ. ಟವರ್ ಬಂದರೆ ಹೋಗುತ್ತೇವೆ ಅಂತಿದ್ದಾರೆ. ಈ ಭಾಗದಲ್ಲಿ ಕಳ್ಳತನ ಕೂಡ ಹೆಚ್ಚಾಗುತ್ತಿದೆ. ಹಾಗೆಯೇ ಈ ಮಧ್ಯೆ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಐದು ಕಿ.ಮೀ.ದೂರ ಹೋಗಿ ಫೋನ್ ಮಾಡಿ ಗಾಡಿ ತರಬೇಕು. ಹಾಗಾಗಿ, ನಮಗೆ ಟವರ್ ಅತ್ಯಗತ್ಯವಾಗಿದೆ. ಟವರ್ ಇಲ್ಲದೆ ವೋಟ್ ನೀಡಲ್ಲ ಅಂತಾ ಜನರು ಪಣತೊಟ್ಟು ನಿಂತಿದ್ದಾರೆ. ಈ ಮಧ್ಯೆಯೇ ಚಿಕ್ಕಮಗಳೂರು ತಾಲೂಕಿನ ಜನ ಕೂಡ ಹಕ್ಕುಪತ್ರ ನೀಡದೆ ವೋಟು ಹಾಕಲ್ಲ ಅಂತಿದ್ದಾರೆ.
ಒಟ್ಟಾರೆ, ಕಾಫಿನಾಡಿನ ಮಲೆನಾಡು ಭಾಗದ ಹಳ್ಳಿಗಳಲ್ಲಿ ನೂರಾರು ಸಮಸ್ಯೆಗಳಿವೆ. ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಿ ಎಂದು ಜನರು ಮನವಿ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ಕ್ಯಾರೆ ಅನ್ನದೇ ಧ್ವಂದ್ವ ನಿಲುವನ್ನು ತೋರಿಸುತ್ತಿದೆ. ಆದ್ದರಿಂದ ಇಲ್ಲಿನ ಜನರು ಯಾವುದೇ ಪರ್ಯಾಯ ದಾರಿಯಿಲ್ಲದೇ ಅನಿವಾರ್ಯವಾಗಿ ಬಹಿಷ್ಕಾರದ ಮೊರೆ ಹೋಗಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳನ್ನು ಈಡೇರಿಸುತ್ತಾ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications