ರಾಮನಿಗೂ ಕನ್ನಡಕ್ಕೂ ಏನು ನಂಟು: ಚಿಕ್ಕಮಗಳೂರಿನ ಈ ಶ್ರೀರಾಮನ ದೇವಸ್ಥಾನದ ವಿಶೇಷತೆ ಏನು ಗೊತ್ತಾ?
ಚಿಕ್ಕಮಗಳೂರು, ಜನವರಿ 20: ಅಯ್ಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆಗೆ ಕೋಟ್ಯಂತರ ಭಕ್ತ ಸಮೂಹವೇ ಕಾಯುತ್ತಿದೆ. ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ರಾಮನ ಬಂಟ ಹನುಮನ ನಾಡಿನವರು ನಾವು ಎನ್ನುವ ಹೆಮ್ಮೆ ಕನ್ನಡಿಗರದಲ್ಲಿದೆ. ಹೀಗಾಗಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲು ಲಕ್ಷಾಂತರ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ.
ರಾಮ ಬಂಟ ಹನುಮನ ನಾಡು ಕರ್ನಾಟಕದಲ್ಲಿಯೂ ನೂರಾರು ರಾಮನ ದೇವಾಲಯಗಳಿದ್ದು, ಕಾಫಿನಾಡಿನ ಈ ದೇವಾಲಯ ಬಹಳ ವಿಶೇಷವಾಗಿದೆ. ಅಯೋಧ್ಯೆಗೆ ಭೇಟಿ ನೀಡಬೇಕು ಎಂದುಕೊಂಡವರು ಒಮ್ಮೆ ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರು ಕೋದಂಡ ರಾಮ ದೇವಾಲಯಕ್ಕೂ ಮಿಸ್ ಮಾಡದೇ ಭೇಟಿ ನೀಡಿ.

ಶ್ರೀರಾಮನ ಭಕ್ತರು ಅದರಲ್ಲೂ ಕನ್ನಡಿಗರು ಹಿರೇಮಗಳೂರು ಕೋದಂಡ ರಾಮ ದೇವಸ್ಥಾನಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು. ಯಾಕೆಂದರೆ ಇಲ್ಲಿನ ವಿಶೇಷತೆಯೆ ಕನ್ನಡ. ಇಲ್ಲಿ ಕನ್ನಡದ ಕಂಪು, ದೇವಾಲಯದ ತಂಪು, ಕನ್ನಡ ಮಂತ್ರಗಳ ಇಂಪು ನಿಮ್ಮ ಮನಸ್ಸಿಗೆ ಖುಷಿಕೊಡುತ್ತದೆ. ನಮ್ಮ ರಾಜ್ಯದ ಕಾಫಿನಾಡಿನಲ್ಲಿರು ಈ ಕನ್ನಡ ಶ್ರೀರಾಮನ ದೇವಾಲಯದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ವಿವರ
ಈ ದೇವಾಲಯವನ್ನು ಹಲವಾರು ಹಂತಗಳಲ್ಲಿ ನಿರ್ಮಿಸಲಾಗಿದೆ ಎಂದು ತೋರುತ್ತದೆ. 14, 16 ಹಾಗೂ 17ನೇ ಶತಮಾನದಲ್ಲಿ ಹಂತಹಂತವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗುಡಿ ಮತ್ತು ಸುಖನಾಸಿಯನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇತರ ನಿರ್ಮಾಣಗಳು ದ್ರಾವಿಡ ಶೈಲಿಯಲ್ಲಿವೆ.

ದೇವಾಲಯದ 1.5 ಅಡಿ ಎತ್ತರದ ಹನುಮಾನ್ ಪೀಠದ ಮೇಲಿನ ಗರ್ಭಗುಡಿಯಲ್ಲಿ ಕೋದಂಡರಾಮನ ವಿಗ್ರಹವಿದ್ದು, ಬಲಕ್ಕೆ ಸೀತೆ ಮತ್ತು ಎಡಕ್ಕೆ ಲಕ್ಷ್ಮಣನ ವಿಗ್ರಹಗಳಿವೆ . ದೇವಾಲಯದ ಆವರಣದಲ್ಲಿ ಯೋಗನರಸಿಂಹ , ಸುಗ್ರೀವ , ಕಳಿಂಗ , ಮರ್ಧನ , ರಾಮಾನುಜಾಚಾರ್ಯ , ಮಧ್ವಾಚಾರ್ಯ , ವೇದಾಂತ ದೇಶಿಕ ಮತ್ತು ಕೆಲವು ಆಳ್ವಾರರ ಪ್ರತಿಮೆಗಳನ್ನು ಹೊಂದಿರುವ ಸಣ್ಣ ದೇವಾಲಯಗಳಿವೆ. ಹಾಗೂ ಹೊರಗೋಡೆಗಳಲ್ಲಿ ಹಯಗ್ರೀವ, ನರಸಿಂಹ, ಮತ್ತು ಕೃಷ್ಣ ಮುಂತಾದ ವಿಷ್ಣುವಿನ ವಿವಿಧ ರೂಪಗಳ ಆಕೃತಿಗಳನ್ನು ಕೆತ್ತಲಾಗಿದೆ. ಲಕ್ಷ್ಮಿ, ಹನುಮಾನ್, ಗರುಡ ಮತ್ತು ಗಣಪತಿಯನ್ನು ಸಹ ಇಲ್ಲಿ ಪೂಜಿಸಲಾಗುತ್ತದೆ.
ಹಿರೇಮಗಳೂರು ಕೋದಂಡ ರಾಮ ದೇವಸ್ಥಾನದ ಪುರಾಣ ಉಲ್ಲೇಖವೇನು?
ವಿಷ್ಣುವಿನ ಅವತಾರವಾದ ಪರಶುರಾಮ ಇಲ್ಲಿ ವಾಸಿಸುತ್ತಿದ್ದರೆಂದು ನಂಬಲಾಗಿದೆ. ಒಂಬತ್ತು ಸಿದ್ಧರು ಇಲ್ಲಿ ತಪಸ್ಸು ಮಾಡಿದರು ಎಂದು ನಂಬಲಾಗಿದೆ, ಆದ್ದರಿಂದ ಗ್ರಾಮದ ಕೊಳವನ್ನು ಸಿದ್ಧ ಪುಷ್ಕರಿಣಿ ಎಂದು ಕರೆಯಲಾಗುತ್ತದೆ.

ಭಕ್ತ ಪುರೋಷೋತ್ತಮನು ರಾಮ ಮತ್ತು ಸೀತೆಯ ಮದುವೆಯನ್ನು ನೋಡಲು ಇಚ್ಛೆಸಿದನಂತೆ. ಹೀಗಾಗಿ ಅವರ ಆಸೆಯನ್ನು ಇಲ್ಲಿ ಪೂರೈಸಲಾಗಿದೆ ಎಂದು ನಂಬಲಾಗಿದ್ದು, ಸಾಂಪ್ರದಾಯಿಕ ಹಿಂದೂ ವಿವಾಹದಲ್ಲಿ ವಧು ವರನ ಬಲಭಾಗದಲ್ಲಿ ಕುಳಿತುಕೊಳ್ಳುವಂತೆ ರಾಮನ ಬಲಕ್ಕೆ ಸೀತೆಯ ವಿಗ್ರಹ ಈ ದೇವಾಲಯದಲ್ಲಿದೆ. ಈ ದೇವಾಲಯದಲ್ಲಿ ರಾಮ, ಲಕ್ಷ್ಮಣರು ತಮ್ಮ ಬಿಲ್ಲು ಮತ್ತು ಬಾಣಗಳಿಂದ ಅಲಂಕೃತಗೊಂಡಿದ್ದಾರೆ. ರಾಮನ ಧನುಸ್ಸನ್ನು ಕೋದಂಡ ಎಂದು ಕರೆಯುವುದರಿಂದ ಈ ದೇವಾಲಯವನ್ನು ಕೋದಂಡರಾಮ ದೇವಾಲಯ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ.
ರಾಜ್ಯದ ಏಕೈಕ ಶ್ರೀರಾಮನ ಕನ್ನಡ ದೇವಾಲಯ
ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜೆ-ಕೈಂಕರ್ಯಗಳನ್ನು ನೆರವೇರಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಈ ದೇವಾಲಯದಲ್ಲಿ ನಿತ್ಯವೂ ಕನ್ನಡದಲ್ಲೇ ಮಂತ್ರ ಪಠಣ, ಹೋಮ, ಹವನ ಕೂಡ ಕನ್ನಡದಲ್ಲೇ ನಡೆಯುತ್ತದೆ. ಅಲ್ಲದೇ ಇಲ್ಲಿ ಉಪನಯನ ಮದುವೆಯನ್ನು ಕನ್ನಡದಲ್ಲೇ ಮಾಡಲಾಗುತ್ತದೆ. ಈ ದೇವಾಲಯದ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್ ಹಾಗೂ ಇತರರು, ಕನ್ನಡದಲ್ಲೇ ಪೂಜೆ ಮಾಡುವುದನ್ನ ರೂಢಿಸಿಕೊಂಡಿದ್ದಾರೆ. ಇನ್ನು ದೇವಾಲಯದೊಳಗಿನ ಎಲ್ಲಾ ಗೋಡೆಗಳ ಮೇಲೆ ಕನ್ನಡ ಹಾಗೂ ಜೀವನದ ಪಾಠಗಳ ಸಂದೇಶವುಳ್ಳ ಬರಹಗಳು, ನುಡಿ ಮುತ್ತುಗಳನ್ನು ಕಾಣಬಹುದು.
ಹಿರೇಮಗಳೂರು ಕೋದಂಡ ರಾಮ ದೇವಸ್ಥಾನ ತಲುಪುದು ಹೇಗೆ..?
ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರು ಎಂಬಲ್ಲಿ ಇರುವ ಈ ಕೋದಂಡ ರಾಮ ದೇವಸ್ಥಾನಕ್ಕೆ ನೀವು ಸರಳ ಮಾರ್ಗವಾಗಿ ತೆರಳಬಹುದು. ಚಿಕ್ಕಮಗಳೂರು ಬೆಂಗಳೂರಿನಿಂದ ಸುಮಾರು ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿದೆ. ಬಸ್‌ಗಳ ಮೂಲಕ ಚಿಕ್ಕಮಗಳೂಳಿಗೆ ತೆರಳಿ ಅಲ್ಲಿಂದ ಸ್ಥಳೀಯ ಬಸ್‌ಗಳಲ್ಲಿ ಈ ದೇವಾಲಯದ ಸಮೀಪ ತಲುಪಬಹುದು. ಚಿಕ್ಕಮಗಳೂರು ನಗರ ಬಸ್ ನಿಲ್ದಾಣದಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ.












Click it and Unblock the Notifications