5 ವರ್ಷದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಏನು?: ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರಶ್ನೆ
ಚಿಕ್ಕಮಗಳೂರು, ನವೆಂಬರ್, 28: ಶಿಕ್ಷಣ, ಉದ್ಯೋಗ ಹಾಗೂ ರಾಜ್ಯದ ಎಲ್ಲ ಜನರ ಸಬಲೀಕರಣವೇ ಬಿಜೆಪಿ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಸರ್ಕಾರ ರೈತರ ಮಕ್ಕಳ ಶಿಕ್ಷಣಕ್ಕಾಗಿ ಜಾರಿ ಮಾಡಿರುವ ವಿದ್ಯಾಸಿರಿ ಯೋಜನೆಯನ್ನು ಕಾರ್ಮಿಕರು, ಮೀನುಗಾರರು, ಆಟೋ ಚಾಲಕರು, ಟೈಲರ್‌ಗಳ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಅಂತಾ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು. ಹಾಗೆಯೇ ಕಾಂಗ್ರೆಸ್ ಸರ್ಕಾರ 5 ವರ್ಷದ ಅಧಿಕಾರವಧಿಯಲ್ಲಿ ಏನು ಮಾಡಿದೆ ಎಂದು ಗುಡುಗಿದ್ದಾರೆ.
ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಜನಸಂಕಲ್ಪಯಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ರಾಜ್ಯಾದ್ಯಂತ ವಿವೇಕ ಯೋಜನೆಯಡಿಯಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದೇವೆ. ರಾಜ್ಯಾದ್ಯಂತ 100 ಎಸ್‌ಸಿ, ಎಸ್‌ಟಿ ಹಾಸ್ಟೆಲ್‍ಗಳನ್ನು ನಿರ್ಮಿಸಿದ್ದು, 55 ಕನಕದಾಸ ಹಾಸ್ಟೆಲ್‍ಗಳು ಹಾಗೂ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕತೆಯಲ್ಲಿ ಸುಧಾರಣೆ ತರಲಾಗುತ್ತಿದೆ ಎಂದರು.
ಶೃಂಗೇರಿ 100 ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ನಿರ್ಧಾರ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಉದ್ಯೋಗಗಳ ಸೃಷ್ಟಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಪ್ರತೀ ಗ್ರಾಮಗಳಲ್ಲಿ ಮಹಿಳೆಯರಿಗೆ ತಲಾ 2 ಲಕ್ಷ ರೂ. ಹಾಗೂ ಯುವ ಸಂಘಗಳಿಗೆ ತಲಾ 5 ಲಕ್ಷ ರೂಪಾಯಿ ಸಹಾಧನ ನೀಡಿ ಉದ್ಯೋಗ ಸೃಷ್ಟಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಕಾಯಕ ಯೋಜನೆಯಡಿ ಕುಂಬಾರಿಕೆ, ನೇಕಾರರಿಗೆ ಸೇರಿದಂತೆ 23 ವೃತ್ತಿ ಕಸುಬುದಾರರ ಸಬಲೀಕರಣಕ್ಕೆ ಆಧ್ಯತೆ ನೀಡಲಾಗುವುದು ಎಂದರು.

ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಆಕ್ರೋಶ
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಅಕ್ಕಿಯನ್ನು ರಾಜ್ಯ ಸರ್ಕಾರದ ಚೀಲದಲ್ಲಿ ಅನ್ನಭಾಗ್ಯದ ಅಕ್ಕಿಗೂ ಕನ್ನ ಹಾಕಿದ್ದರು. ಯಾರದ್ದೋ ದುಡ್ಡಿನಲ್ಲಿ ಸಿದ್ದರಾಮಯ್ಯ ಜಾತ್ರೆ ಮಾಡಿದ್ದರು. ರಾಜ್ಯದಲ್ಲಿ 5 ವರ್ಷ ಅಧಿಕಾರ ನಡೆಸಿದ ಸಿದ್ದಾರಾಮಯ್ಯ ಅವರು ಜನರು ನೆನಪಿಟ್ಟುಕೊಳ್ಳುವಂತಹ ಯಾವ ಯೋಜನೆ ಜಾರಿಗೆ ತಂದಿದ್ದಾರೆ? ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು, ಚಿತ್ರದುರ್ಗ ಸುದ್ದಿ; ಕ್ಯಾಬ್ ಚಾಲಕನಿಗೆ ಥಳಿತ, ಅಪಘಾತ

ಲೋಕಾಯುಕ್ತವನ್ನು ಮುಚ್ಚಿದ್ದ ಕಾಂಗ್ರೆಸ್
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಕ್ಷಕರು ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸಿಗರು, ಹಾಸ್ಟೆಲ್ ವಿದ್ಯಾರ್ಥಿಗಳ ಹಾಸಿಗೆ, ದಿಂಬಿನಲ್ಲೂ ಭ್ರಷ್ಟಾಚಾರವನ್ನು ಮಾಡಿದರು. ನೀರಾವರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದರು. ತಮ್ಮ ಮೇಲಿದ್ದ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ಎಸಿಬಿ ರಚಿಸಿದ್ದರು. ಈ ಮೂಲಕ ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಿಸಿದರು. ರಾಜ್ಯದ ಭವಿಷ್ಯದ ದೃಷ್ಟಿಯಿಂದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಲು ಮತದಾರರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿ ತಡೆಗೆ ಕ್ರಮಕ್ಕೆ ಸೂಚನೆ
ಇನ್ನು ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚತ್ತಲೇ ಇದೆ. ಕಡಾನೆಗಳ ಹಾವಳಿ ನಿಯಂತ್ರಣಕ್ಕೆ ಆನೆ ನಿಗ್ರಹ ದಳ ನಿಯೋಜಿಸಿ ಅದಕ್ಕೆ ಬೇಕಾದ ಅನುದಾನ, ಸಿಬ್ಬಂದಿ, ಪರಿಕರಗಳನ್ನು ಒದಗಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷವನ್ನು ತಪ್ಪಿಸಲು ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಅಲ್ಲದೇ ಅತೀವೃಷ್ಟಿ ಹಾನಿ ಸಂಬಂಧ ರಾಜ್ಯ ಸರ್ಕಾರ ಜಿಲ್ಲೆಗೆ ಈಗಾಗಲೇ 5 ಕೋಟಿ ರೂಪಾಯಿ ಅನುದಾನ ನೀಡಿದ್ದು, ಮತ್ತೆ 5 ಕೋಟಿ ರೂಪಾಯಿ ಮಂಜೂರು ಮಾಡಲು ಕ್ರಮವಹಿಸಲಾಗಿದೆ. ಬೆಳೆ ನಷ್ಟಕ್ಕೆ ರಾಜ್ಯ, ಕೇಂದ್ರ ಸರ್ಕಾರ ನೀಡುವ ಅನುದಾನದೊಂದಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದರು.

ಕಾಂಗ್ರೆಸ್ ವಿರುದ್ದ ಬಿ.ಎಸ್.ವೈ ಆಕ್ರೋಶ
ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿದೆ. ಸದ್ಯ ಎರಡು ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆ ಎರಡು ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಧೂಳಿಪಟವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. 63 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‍ನವರು ಭ್ರಷ್ಟಾಚಾರ ನಡೆಸಿದರೇ ವಿನಃ ದೇಶದ ಅಭಿವೃದ್ಧಿಯನ್ನು ಮಾಡಿಲ್ಲ. ಸದ್ಯ ಅವರು ಹಣ ಹೆಂಡ, ತೋಳ್ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಕುಟುಕಿದರು. ಇನ್ನು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಡುವೆ ನಾನೇ ಸಿಎಂ ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು, ಅವರ ಕನಸು ನನಸಾಗಲ್ಲ. ಸಿದ್ದರಾಮಯ್ಯ ಅವರು ಸುಳ್ಳು ಭರವಸೆಗಳನ್ನು ನೀಡಿ ರೈತರು ಮತ್ತು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು, ಜನರು ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಚಿವ ಗೋವಿಂದ ಕಾರಜೋಳ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ತರೀಕೆರೆ ಶಾಸಕ ಡಿ.ಎಸ್.ಸುರೇಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.