ಕಾಂಗ್ರೆಸ್ ಗಾಳಿಯ ದರ ಏರಿಸೋದೊಂದೇ ಬಾಕಿ- ಡಿಕೆಶಿ ವಿರುದ್ಧ ಸಿಟಿ ರವಿ ಗರಂ
ಚಿಕ್ಕಮಗಳೂರು ಆಗಸ್ಟ್ 22: ನೀರಿನ ದರ ಏರಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶಗೊಂಡಿದ್ದಾರೆ. ಎಲ್ಲದರ ಬೆಲೆಯನ್ನು ಹೆಚ್ಚಳ ಮಾಡುತ್ತಾ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ಅವರು, 'ಕಾಂಗ್ರೆಸ್ ಸರ್ಕಾರ ಈಗ ಎಲ್ಲಾ ದರ ಏರಿಸಿ ಆಯಿತು. ಈಗ ಗಾಳಿಯ ದರ ಏರಿಸೋದು ಬಾಕಿ ಇದೆ. ಸರ್ಕಾರ ಬಂದ ಕೂಡಲೇ ವಿದ್ಯುತ್ ದರ, ಸ್ಟ್ಯಾಂಪ್ ದರ ಎಲ್ಲವೂ ಜಾಸ್ತಿ ಮಾಡಿತು. ಇದೀಗ ನೀರಿನ ದರ ಏರಿಕೆ ಮಾಡಲು ಹೊರಟಿದ್ದಾರೆ. ಈಗ ಉಳಿದಿರೋದೇ ಗಾಳಿಯ ದರ ಮಾತ್ರ. ಗಾಳಿಗೊಂದು ದರ ಏರಿಸಿದ್ರೆ ಔರಂಗಜೇಬನ ಅಪ್ಪ ಅಂತ ತೋರಿಸಿದಂತಾಗುತ್ತೆ' ಎಂದು ಗುಡುಗಿದ್ದಾರೆ.

'ಡಿಕೆ ಶಿವಕುಮಾರ್ ಅವರೇ... ಯಾರೇ ಜನ ವಿರೋಧಿ ಆಡಳಿತ ನಡೆಸಿದ್ರೆ ಆ ಸರ್ಕಾರದ ಆಡಳಿತಕ್ಕೆ ಆಯಸ್ಸು ಕಡಿಮೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟು ಮತ್ತೊಂದು ಕಡೆ ಜನರ ಜೇಬಿಯಿಂದ ಪಿಕ್ ಪಾಕೆಟ್ ಮಾಡುತ್ತಿದೆ. 5 ರೂಪಾಯಿ ಜೇಬಿನಿಂದ ಬೀಳಿಸಿ ಅಟೆನ್ಶನ್ ಡ್ರಾಮ ಮಾಡ್ತಿದ್ದಾರೆ. ಐದು ರೂಪಾಯಿ ಬೀಳ್ಸಿ 500 ರೂಪಾಯಿ ಹೊಡೆಯುವ ಡ್ರಾಮಾ ಮಾಡ್ತಿದೆ ಕಾಂಗ್ರೆಸ್' ಎಂದು ಗುಡುಗಿದ್ದಾರೆ.
ಮುಡಾ ಹಗರಣದಲ್ಲಿ ದಾಖಲೆಗೆ ವೈಟ್ನರ್ ಹಾಕಿರೋ ಚರ್ಚೆ
ಮುಡಾ ಹಗರಣದಲ್ಲಿ ದಾಖಲೆಗೆ ವೈಟ್ನರ್ ಹಾಕಿರೋ ಬಗ್ಗೆ ಸಿಟಿ ರವಿ ಪ್ರತಿಕ್ರಿಯಿಸಿ, ಪರಿಷತ್‌ನಲ್ಲಿ ಚರ್ಚೆಯ ಪ್ರಯತ್ನ ಮಾಡಿದ್ವಿ. ಎಲ್ಲಾ ಗೊತ್ತಿದ್ದ ಸಿಎಂ ಅವಕಾಶ ನೀಡದೆ ನಿರ್ಬಂಧಿಸಿ ಪಲಾಯನ ಮಾಡಿದ್ರು. ನಮಗೆ ಪ್ರಶ್ನೆ ಕೇಳಲು, ಅವರಿಗೆ ಉತ್ತರಿಸಲು ಎರಡಕ್ಕೂ ಅದಕ್ಕಿಂತ ದೊಡ್ಡ ವೇದಿಕೆ ಇರಲಿಲ್ಲ ಎಂದರು.
ಅವರು ದಾಖಲೆ ಮೂಲಕ ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಎಲ್ಲಾ ಸತ್ಯ ಹೊರಬರುತ್ತೆ ಅಂತಾನೇ ನಮಗೆ ಅವಕಾಶ ನೀಡಲಿಲ್ಲ. ಅವರ 40 ವರ್ಷದ ಸಾವರ್ಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ ಅನ್ನೋದ ಕೇಳಿದ್ದೇವೆ. ಆರ್.ಟಿ.ಐ.ನಲ್ಲಿ 50 ಲೋಕಯುಕ್ತ ಕೇಸ್ ವಿಚಾರಣೆಯೇ ಆಗಿಲ್ಲ, ಪೆಂಡಿಂಗ್ ಇದೆಯಂತೆ. ವಿಚಾರಣೆ ಆದ್ರೆ ಸ್ವಚ್ಛ ಬಣ್ಣ, ಕಪ್ಪು ಅನ್ನೋದು ಗೊತ್ತಾಗುತ್ತೆ. ಯಾವ ವಾಷಿಂಗ್ ಪೌಡರ್ ನಿಂದಲೂ ತೊಳೆಯಲಾಗದ ಕಪ್ಪಿದ್ದರೂ ಇರಬಹುದು. ಎಲ್ಲವೂ ತನಿಖೆಯಾದ ಮೇಲೆ ಗೊತ್ತಾಗುತ್ತೆ ಎಂದರು.
ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯ
ಇನ್ನೂ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಸಿಟಿ ರವಿ, 'ಎಕಾಏಕಿ ಕುಮಾರಸ್ವಾಮಿ ಬಂಧಿಸಲು ಪುಗ್ಸಟ್ಟೆ ಪುನಗಲ್ಲ. ಕುಮಾರಸ್ವಾಮಿ ಯಾವತ್ತು ನಾನು ಸಂವಿಧಾನಕ್ಕಿಂತ ಮೇಲು ಎಂದು ಹೇಳಿಲ್ಲ. 2007ರ ಪ್ರಕರಣ, 2013ರಿಂದ 18ರವರೆಗೆ ಇವರೇ ಅಧಿಕಾರದಲ್ಲಿ ಇದ್ರು, ಯಾಕ್ ಸುಮ್ಮನಿದ್ರು. 2019ರಲ್ಲಿ ಕಾಂಗ್ರೆಸ್ ಬೆಂಬಲದಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ರು. ಆಗೆಲ್ಲಾ ಕುಮಾರಸ್ವಾಮಿ ಒಳ್ಳೆಯವರು, ಬಿಜೆಪಿ ಜೊತೆ ಬಂದ ಮೇಲೆ ವಿಲನ್. ಡಿಕೆಶಿ ಜೋಡೆತ್ತು, ಅಣ್ತಮ್ಮ, ಜನುಮ-ಜನುಮದ ಬಂಧ ಅಂತಿದ್ರು. ಈಗ ಮಾಡ್ತಿರೋದು ನೋಡುದ್ರೆ ರಾಜಕೀಯ ದುರುದ್ದೇಶ ಅಂತ ಎಂತವರಿಗೂ ಗೊತ್ತಾಗುತ್ತೆ' ಎಂದು ಚಿಕ್ಕಮಗಳೂರಿಲ್ಲಿ ಸಿ.ಟಿ.ರವಿ ಕಿಡಿ ಕಾರಿದರು.












Click it and Unblock the Notifications