ಚಾರ್ಮಾಡಿಯಲ್ಲಿ 1000 ಅಡಿ ಪ್ರಪಾತಕ್ಕೆ ಉರುಳಿದ ಲಾರಿ
ಚಿಕ್ಕಮಗಳೂರು, ಜನವರಿ 14: ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು 1000 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ವ್ಯೂ ಪಾಯಿಂಟ್ ಬಳಿ ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಮಂಜು ಕವಿದ ವಾತಾವರಣವಿದ್ದ ಕಾರಣ ದಾರಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಪ್ರಾಪತಕ್ಕೆ ಉರುಳಿ ಬಿದ್ದ ರಭಸಕ್ಕೆ ಟಿಪ್ಪರ್ ಲಾರಿ ಸಂಪೂರ್ಣ ಜಖಂಗೊಂಡಿದೆ. ಚಾಲಕನಿಗೆ ಸೊಂಟಕ್ಕೆ ಪೆಟ್ಟಾದ ಕಾರಣ ಆಂಬುಲೆನ್ಸ್ ಮೂಲಕ ಉಜಿರೆಯ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು, ಸಮಾಜ ಸೇವಕ ಆರಿಫ್ ಹಾಗೂ ಇತರರು ಆಗಮಿಸಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯನ್ನು ನಡೆಸಿ ಚಾಲಕರನ್ನು ಮೇಲಕ್ಕೆ ಕರೆತರಲಾಯಿತು. ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಆಸ್ಪತ್ರೆಯಿಂದ ಆರೋಪಿ ಪರಾರಿ; ಪ್ರಕರಣವೊಂದರಲ್ಲಿ ಪೊಲೀಸರಿಂದ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯೊಬ್ಬ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.
ಒಂದು ತಿಂಗಳಿಂದ ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೂರ್ಣೇಶ್ ಆಸ್ಪತ್ರೆಯಿಂದ ಪರಾರಿಯಾದ ಆರೋಪಿ. ಪೂರ್ಣೇಶ್ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದವನು.
ಆರೋಪಿ ಮೇಲೆ 4 ಹಾಫ್ ಮರ್ಡರ್, 3 ಹಲ್ಲೆ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ 9 ಕೇಸುಗಳಿವೆ. 307 ಕೇಸಿನಲ್ಲಿ ವಾರಂಟ್ ಕೂಡ ಆಗಿದೆ. ಆದರೆ 2012ರಿಂದ ಕಾಡಲ್ಲಿ, ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸುತ್ತಿದ್ದ.
ಕಳೆದ ನವೆಂಬರ್‌ನಲ್ಲಿ ಮನೆಯಲ್ಲಿ ಅಡಗಿದ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ್ದ. ಆಗ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು.
ಪೂರ್ಣೇಶ್ ಬಲಗಾಲಿಗೆ ಗುಂಡು ತಗಲಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.












Click it and Unblock the Notifications