ಕಳಸ: ರಸ್ತೆ ಇಲ್ಲದೆ ರೋಗಿಯನ್ನು ಜೋಳಿಗೆಯಲ್ಲಿ ಹೊತ್ತು ತಂದ ಕುಟುಂಬಸ್ಥರು
ಚಿಕ್ಕಮಗಳೂರು, ಜುಲೈ 12: ಆಸ್ಪತ್ರೆಗೆ ಸಾಗಲು ಸೂಕ್ತ ರಸ್ತೆ ಇಲ್ಲದೆ ರೋಗಿಯನ್ನು ಕುಟುಂಬಸ್ಥರೇ ಜೋಳಿಗೆಯಲ್ಲಿ ಹೊತ್ತು ತಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಕೋಡು ಗ್ರಾಮದಲ್ಲಿ ನಡೆದಿದೆ.
70 ವರ್ಷದ ಶೇಷಮ್ಮ ಎನ್ನುವವರು ಅನಾರೋಗ್ಯದಿಂದ ಬಳಲುತ್ತಿದ್ದು, ತರ್ತು ಚಿಕಿತ್ಸೆಯ ಅಗತ್ಯವಿತ್ತು. ಆಸ್ಪತ್ರೆಗೆ ಬರಬೇಕಾದರೆ ಕಳಸ ಪಟ್ಟಣಕ್ಕೆ ಬರಬೇಕಾಗಿದ್ದು, ಶೇಷಮ್ಮ ಅವರನ್ನು ಕರೆತರಲು ಕುಟುಂಬಸ್ಥರು ಪರದಾಡಿದ್ದಾರೆ.

ಕಲ್ಕೋಡು ಗ್ರಾಮದಿಂದ ಕಳಸ ತಾಲೂಕಿಗೆ ಬರಬೇಕು ಎಂದರೆ 4 ಕಿಲೋ ಮೀಟರ್ ಆಗುತ್ತದೆ. ಕುದುರೆಮುಖ ಮೂಲಕ ಸುತ್ತಿ ಬರಲು 8 ಕಿಲೋ ಮೀಟರ್ ಆಗುತ್ತದೆ. ಆದರೆ ಈ ಮಾರ್ಗ ಮಧ್ಯ ಕಲ್ಕೋಡುದಿಂದ ಮುಕ್ಕಾಲು ಕಿಲೋ ಮೀಟರ್ ಸಾಗಿ ಬಂದರೆ ಆಟೋ ಸಿಗುತ್ತದೆ. ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ರಸ್ತೆ ಬಿಡದೇ ಕಲ್ಕೋಡು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಲ್ಕೋಡು ಗ್ರಾಮ 10 ಮನೆಗಳಿರುವ 30-40 ಜನಸಂಖ್ಯೆ ಇರುವ ಕಾಡಂಚಿನ ಕುಗ್ರಾಮವಾಗಿದೆ. ಇಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯ ಮುಖ್ಯವಾಗಿ ಮುಕ್ಕಾಲು ಕಿ.ಮೀ. ರಸ್ತೆಗಾಗಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದ್ದಾರೆ. ಆದರೆ ಯಾರೂ ಕೂಡ ಈವರೆಗೂ ಕ್ಯಾರೆ ಎಂದಿಲ್ಲ ಎನ್ನುವುದು ಸ್ಥಳೀಯರ ದೂರಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಲ್ಕೋಡು ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸ ಬೇಕಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಎಡವಟ್ಟು: ಗ್ರಾಮಸ್ಥರ ಪರದಾಟ
ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಗ್ರಾಮಸ್ಥರು ಓಡಾಡಲು ಉತ್ತಮ ರಸ್ತೆ ಇಲ್ಲದೆ ಪರದಾಡುವ ಸ್ಥಿತಿ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನ ಕಲ್ಲುಗೋಡು, ಅಬ್ಬುಕುಡಿಗೆ ಗ್ರಾಮದಲ್ಲಿ ಎದುರಾಗಿದೆ.

ಕಳೆದ ಒಂದು ವಾರದಿಂದ ಕಳಸ ತಾಲೂಕಿನ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಸಮೀಪದ ಸೂರ ಮನೆ ಜಲಪಾತ ವೀಕ್ಷಣೆಗೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಲವು ವರ್ಷಗಳಿಂದ ಜಲಪಾತಕ್ಕೆ ಹೋಗಲು ಬೇರೆ ರಸ್ತೆ ಇತ್ತು. ಆದರೆ ಅರಣ್ಯಾಧಿಕಾರಿಗಳು ಆ ರಸ್ತೆಯನ್ನು ಬದಲಿಸಿ, ಪರ್ಯಾಯವಾಗಿ ಗ್ರಾಮದ ರಸ್ತೆ ಮಾರ್ಗವಾಗಿ ಸಂಚರಿಸಲು ಹೇಳಿದ್ದಾರೆ.
ಪರಿಣಾಮವಾಗಿ ನಿತ್ಯವೂ ನೂರಾರು ವಾಹನಗಳು ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಸಂಪೂರ್ಣ ರಸ್ತೆ ಹದಗೆಟ್ಟು ಕೆಸರು ಮಯವಾಗಿದೆ. ಮೊದಲೇ ಸಂಪೂರ್ಣವಾಗಿ ಹೋಗಿದ್ದ ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರಿಗೆ ಕಷ್ಟವಾಗಿತ್ತು. ಆದರೆ ಇದೀಗ ನಿರಂತರ ವಾಹನಗಳ ಸಂಚಾರದಿಂದ ಗ್ರಾಮಸ್ಥರ ಪಾಡು ಕೇಳೋರು ಇಲ್ಲದಂತಾಗಿದೆ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯವನ್ನು ಕಲ್ಪಿಸದೆ ಏಕಾಏಕಿ ಪ್ರವಾಸಿಗರ ಓಡಾಟಕ್ಕೆ ಅನುವು ಮಾಡಿಕೊಟ್ಟಿರುವುದು ಅಧಿಕಾರಿಗಳ ಎಡವಟ್ಟು ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications