ತರೀಕೆರೆ: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಕೊಲೆ, 7 ಜನರ ಬಂಧನ
ಚಿಕ್ಕಮಗಳೂರು, ಜೂನ್, 04: ತರೀಕೆರೆ ಪಟ್ಟಣದಲ್ಲಿ ನೂತನ ಶಾಸಕ ಜಿ.ಹೆಚ್.ಶ್ರೀನಿವಾಸ್‌ಗೆ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಈ ವೇಳೆ ಎರಡು ಗುಂಪುಗಳ ಮಧ್ಯೆ ಕಿರಿಕ್ ಉಂಟಾಗಿದ್ದು, ಘಟನೆಯಲ್ಲಿ ವರುಣ್ ಎಂಬ ಯುವಕನನ್ನು ಚಾಕು ಇರಿದು ಕೊಲೆ ಮಾಡಲಾಗಿತ್ತು. ಇನ್ನು ಈ ಸಂಬಂಧ 7 ಜನ ಆರೋಪಿಗಳನ್ನು ಬಂಧಿಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತರೀಕೆರೆ ಪಟ್ಟಣದ ನಿವಾಸಿಗಳಾದ ವೇದಮೂರ್ತಿ, ಮಂಜು, ನವೀನ್, ಧನು, ಅಜಿತ್, ಪರಮೇಶ್, ನಿತಿನ್, ಲೋಹಿತ್, ಸಂಜಯ್, ಗಗನ್ ಈಶ್ವರ್, ಶರತ್ ಮೇಲೆ ಮೊದಲಿಗೆ ಎಫ್‌ಐಆರ್ ದಾಖಲು ಮಾಡಿದ್ದರು. ವಿಚಾರಣೆ ಬಳಿಕ ಇವರಲ್ಲಿ ಮೂರ್ತಿ, ಮಂಜು, ನವೀನ್, ಧನು, ಈಶ್ವರ್, ಪರಮೇಶ್, ನಿತಿನ್ ಎಂಬ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆ
ಕಾಂಗ್ರೆಸ್ ಶಾಸಕರ ಜಿ.ಹೆಚ್.ಶ್ರೀನಿವಾಸ್ ಅವರ ಅಭಿನಂದನಾ ಸಮಾರಂಭದಲ್ಲಿ ಚಾಕು ಇರಿದು ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ವರುಣ್ (28) ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟ ಯುವಕನಾಗಿದ್ದಾನೆ.
ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್‌ಗೆ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಈ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ಕಬಾಬ್ ಮೂರ್ತಿ ಹಾಗೂ ವರುಣ್ ಎಂಬುವವರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳು ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಕಬಾಬ್ ಮೂರ್ತಿ ವರುಣ್‌ಗೆ ಡ್ರ್ಯಾಗರ್ನಿಂದ ಇರಿದಿದ್ದಾನೆ.
ಈ ವೇಳೆ ಮಂಜು ಹಾಗೂ ಸಂಜು ಎಂಬುವರ ಕೈ ಹಾಗೂ ಕಾಲಿಗೆ ಚಾಕು ಇರಿತದಿಂದ ಗಾಯಗಳಾಗಿದ್ದರೆ, ಇನ್ನು ಹೊಟ್ಟೆಗೆ ಚಾಕು ಇರಿದಿದ್ದರಿಂದ ವರುಣ್‌ಗೆ ಗಂಭೀರವಾಗಿ ಗಾಯವಾಗಿತ್ತು. ಆಗ ವರುಣ್‌ನನ್ನ ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಳಿಕ ಸ್ಥಳಕ್ಕೆ ಎಸ್‌ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದರು.












Click it and Unblock the Notifications