ಶ್ರೀರಾಮುಲು ಆರ್‌ಎಸ್‍ಎಸ್ ಗಿರಾಕಿನಾ? ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಪ್ರಶ್ನೆ
ಚಿಕ್ಕಮಗಳೂರು, ನವೆಂಬರ್, 03: ಸಿ. ಟಿ. ರವಿ ಅವರು ಬರಿ ಸುಳ್ಳಿನ ಆರೋಪಗಳನ್ನೇ ಮಾಡುತ್ತಿದ್ದಾರೆ. ಅಂದರೇ ಸುಳ್ಳಿನ ರವಿ ಅಂತಾ ಅರ್ಥ ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಟೀಕಿಸಿದರು. ಇನ್ನು ಕಾಲುವೆ ದುರಸ್ಥಿಗೆ ಆಗ್ರಹಿಸಿ ಶ್ರೀರಾಮುಲು ವಾಸ್ತವ್ಯ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶ್ರೀರಾಮುಲು ಈ ಸಲ ಮೊಣಕಾಲ್ಮೂರಿನಲ್ಲಿ ನಿಂತು ಗೆಲ್ಲಲಿ ನೋಡೋಣ.
ಇವರಿಗೆ ಪಕ್ಷ ಸಿದ್ಧಾಂತ, ಆರ್‌ಎಸ್‍ಎಸ್ ಬಗ್ಗೆ ಯಾವ ಲಾಯಲ್ಟಿ ಇದೆ. ಶ್ರೀರಾಮುಲು ಆರ್‌ಎಸ್‍ಎಸ್ ಗಿರಾಕಿನಾ?. ಅವರು ಕಾಂಗ್ರೆಸ್‌ನ ಮೊದಲ ಮುನ್ಸಿಪಾಲ್ ಮೆಂಬರ್ ಆಗಿದ್ದರು. ಮಧ್ಯೆ ಬಂದು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಈ ಸರ್ಕಾರದಲ್ಲಿ ರೈತರಿಗೆ ಪರಿಹಾರ ನೀಡಿಲ್ಲ, ಯಾವ ಕಾಳಜಿ ಇದೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.
ರೈತರಿಗೆ ಪರಿಹಾರವನ್ನು ನೀಡಿಲ್ಲ. ರೈತರ ಬಗ್ಗೆ ಯಾವ ಕಾಳಜಿ ಇದೆ ತೋರಿಸಲಿ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿಗೆ ತರುತ್ತೇವೆ ಅಂತಾ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ರಕ್ತದಲ್ಲಿ ಬರೆದು ಕೊಟ್ಟರಾ? ಎಂದು ರಾಮುಲುಗೆ ಪ್ರಶ್ನಿಸಿದರು.

ದೇಣಿಗೆ ನೀಡುವ ಕುರಿತು ಸಿದ್ದು ಪ್ರತಿಕ್ರಿಯೆ; ಅಭ್ಯರ್ಥಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ 2ಲಕ್ಷ ರೂಪಾಯಿ ದೇಣಿಗೆ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ 40 ಲಕ್ಷ ಖರ್ಚು ಮಾಡುವವರಿಗೆ 2 ಲಕ್ಷ ರೂಪಾಯಿ ನೀಡುವುದು ಹೊರೆಯಲ್ಲ. ಡಿ. ಕೆ. ಶಿವಕುಮಾರ್ ಅವರು ಬೇರೆಯವರು ಅರ್ಜಿ ಹಾಕಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಿದ್ಧಾಂತ ಮತ್ತು ನಾಯಕತ್ವದ ಮೇಲೆ ನಂಬಿಯುಳ್ಳವರು ಅರ್ಜಿ ಹಾಕಬಹುದು. ಅರ್ಜಿ ಹಾಕಿದ ಕೂಡಲೇ ಕಾಂಗ್ರೆಸ್ ಸೇರಿದರು ಅಂತಾ ಅಲ್ಲ. ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ಅಧ್ಯಕ್ಷತೆಯ ಕಮಿಟಿ ಇದೆ. ಅಲ್ಲಿ ಅಂತಿಮ ಆಗಲಿದೆ ಎಂದು ತಿಳಿಸಿದರು.
ಮಾಜಿ ಸಚಿವೆ ಮೋಟಮ್ಮನ ಮಗಳಿಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಸಭೆಯ ಬಗ್ಗೆ ಮಾತನಾಡಿ, ಯಾವ ಪಕ್ಷದಲ್ಲಿ ಆಂತರಿಕ ಡೆಮಾಕ್ರೆಸಿ ಇದೆ ಅಲ್ಲಿ ಇದೆಲ್ಲ ಸಾಮಾನ್ಯವಾಗಿದೆ. ಬಿಜೆಪಿಯಲ್ಲಿ ಆಂತರಿಕ ಡೆಮಾಕ್ರೆಸಿ ಇಲ್ಲ. ಟಿಕೆಟ್ ನೀಡುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದರು.

ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ. ಡಿ. ರಾಜೇಗೌಡ, ಜಿಲ್ಲಾಧ್ಯಕ್ಷ ಕೆ. ಪಿ. ಅಂಶುಮಂತ್, ಮಾಜಿ ಸಭಾಪತಿ ಬಿ. ಎಲ್. ಶಂಕರ್, ವಿಧಾನ ಪರಿಷತ್ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಎಂ. ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ; ಗುರುವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಸುದ್ದಿಗೋಷ್ಠಿಯ ಬಳಿಕ ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಪದೇ ಪದೇ ಸಿಡುಕುತ್ತಿದ್ದ ಸಿದ್ದರಾಮಯ್ಯ ಅವರು ಗುರುವಾರ ಫುಲ್ ಜಾಲಿ ಮೂಡ್‍ನಲ್ಲಿದ್ದರು. ಸುದ್ದಿಗೋಷ್ಠಿಯಲ್ಲಿ ಖುಷಿ ಖುಷಿಯಾಗಿ ಮಾತನಾಡಿದ ಅವರು, ಮಾತಿನ ನಡುವೆ ಎರಡೂ ಕೈಗಳನ್ನು ತಲೆ ಹಿಂದಕ್ಕೆ ಕಟ್ಟಿ ಮಾತುಕತೆ ನಡೆಸಿದರು.











Click it and Unblock the Notifications