ಶೃಂಗೇರಿ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ
ಚಿಕ್ಕಮಗಳೂರು, 18: ಶೃಂಗೇರಿ ತಾಲ್ಲೂಕಿನಲ್ಲಿ ಕಾಲೇಜು ಮುಗಿಸಿ ಮನೆಗೆ ವಾಪಸ್ ಹೊಗುತ್ತಿದ್ದಾಗ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಸಂತೋಷ್ ಹಾಗೂ ಪ್ರದೀಪ್ ಮೇಲಿನ ಆರೋಪ ಸಾಬೀತಾಗಿದ್ದು, ಇಬ್ಬರೂ ಆರೋಪಿಗಳಿಗೆ ಚಿಕ್ಕಮಗಳೂರು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಉಮೇಶ್.ಎಂ ಅವರಿಂದ ಶಿಕ್ಷೆ ಪ್ರಕಟಗೊಂಡಿತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ 2016 ಫೆಬ್ರವರಿ 16 ರಂದು ಘಟನೆ ನಡೆದಿತ್ತು. ಶೃಂಗೇರಿ ತಾಲ್ಲೂಕಿನ ಮೆಣಸೆ ಗ್ರಾಮದಲ್ಲಿ 2016 ರಲ್ಲಿ ಪರೀಕ್ಷೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಬಿ.ಕಾಂ ವಿದ್ಯಾರ್ಥಿನಿಯನ್ನು ಎಳೆದೊಯ್ದು, ಅದೇ ಊರಿನ ಯುವಕರು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ನಂತರ 50 ಅಡಿಯ ಬಾವಿಯಲ್ಲಿ ಎಸೆದು ಹೋಗಿದ್ದರು.

ಇಬ್ಬರು ಆರೋಪಿಗಳನ್ನು ನೇಣಿಗೆ ಹಾಕಬೇಕು ಎಂದು ಊರಿನ ಗ್ರಾಮಸ್ಥರು ಹಾಗೂ ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದರು. ಆರೋಪಿಗಳ ಅಪರಾಧ ಸಾಬೀತಾಗಿ, ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವುದರಿಂದ ಮೃತ ಯುವತಿಯ ಕುಟುಂಬಸ್ಥರು ನೆಮ್ಮದಿಯ ಉಸಿರು ಬಿಡುವಂತಾಗಿದೆ.












Click it and Unblock the Notifications