ನೂರೆಂಟು ವಿಘ್ನಗಳ ನಡುವೆಯೇ ಆರಂಭವಾಯ್ತು ಶೃಂಗೇರಿ ಸಾಹಿತ್ಯ ಸಮ್ಮೇಳನ
ಚಿಕ್ಕಮಗಳೂರು, ಜನವರಿ 10: ವಿವಾದದ ನಡುವೆಯೇ ಚಿಕ್ಕಮಗಳೂರು ಜಿಲ್ಲಾ ನುಡಿಜಾತ್ರೆ ಉದ್ಘಾಟನೆ ನಡೆಯಿತು. ಶಂಗೇರಿ ಪಟ್ಟಣದ ಬಿಜಿಎಸ್ ಸಮುದಾಯ ಭವನದ ಆವರಣದಲ್ಲಿ ಸಮ್ಮೇಳನವನ್ನು ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಉದ್ಘಾಟಿಸಿದರು.
ಶೃಂಗೇರಿ ಶಾಸಕ ರಾಜೇಗೌಡ 16ನೇ ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಹಾರ ಹಾಕಿ ಬರಮಾಡಿಕೊಂಡರು. ವಿಠಲ ಹೆಗ್ಡೆ ಅವರನ್ನು ಕಾರ್ಯಕರ್ತರು ಹೊತ್ತು ವೇದಿಕೆಗೆ ಕರೆತಂದರು. ಸಮ್ಮೇಳನದಲ್ಲಿ ಮೆರವಣಿಗೆ ರದ್ದು ಪಡಿಸಲಾಗಿದ್ದು, ಮೊದಲು ಮೈಕ್ ಬಳಸಲು ಪೊಲೀಸರು ಅನುಮತಿ ನೀಡಲಿಲ್ಲ. ಆದರೆ ಕಾರ್ಯಕರ್ತರು ಮುಷ್ಕರ ನಡೆಸುವ ಎಚ್ಚರಿಕೆ ನೀಡಿದ ನಂತರ ಅನುಮತಿ ದೊರೆಯಿತು.
ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆದಾಗಿನಿಂದಲೂ ಸಾಹಿತ್ಯ ಸಮ್ಮೇಳನಕ್ಕೆ ವಿರೋಧ ವ್ಯಕ್ತವಾಗಿತ್ತು. ಎರಡು ದಿನದಿಂದೀಚೆಗೆ ವಿರೋಧ ತಾರಕಕ್ಕೆ ಮುಟ್ಟಿತ್ತು. ಈ ಎಲ್ಲಾ ವಿವಾದಗಳ ನಡುವೆಯೂ ಇಂದು ಸಮ್ಮೇಳನ ಉದ್ಘಾಟನೆಯಾಗಿದೆ.

ಇದೇ ಸಂದರ್ಭ ಸಮ್ಮೇಳನ ನಿಲ್ಲಿಸಲು ಕೆಲವು ಸಂಘಟನೆಗಳು ಮುಂದಾದ ಘಟನೆ ನಡೆಯಿತು. ಸಮ್ಮೇಳನದೊಳಕ್ಕೆ ನುಗ್ಗಿ ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ ಹೆಗಡೆ ಅವರ ವಿರುದ್ಧ ಘೋಷಣೆ ಕೂಗಿದರು. ನಕ್ಸಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ವಿಎಚ್ ಪಿ, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಸಾಹಿತ್ಯ ಸಮ್ಮೇಳನ ವಿರೋಧಿಸಿ ಶೃಂಗೇರಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ ಘಟನೆಯೂ ನಡೆಯಿತು. ಕೂಡಲೇ ಸಮ್ಮೇಳನ ನಿಲ್ಲಿಸಬೇಕೆಂದು ಒತ್ತಾಯಿಸಿ ಎಸ್ ಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸಮ್ಮೇಳನಕ್ಕೆ ದಲಿತ ಸಂಘರ್ಷ ಸಮಿತಿ ಸದಸ್ಯರು ತಮಟೆ ಭಾರಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ವಿಭಿನ್ನವಾಗಿ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications