ಮಠದ ಆವರಣದಲ್ಲೇ ವಿನಯ್ ಗುರೂಜಿಗೆ ಗುಹೆ ನಿರ್ಮಾಣ; ಇನ್ನು ದರ್ಶನ ಅಪರೂಪ
ಚಿಕ್ಕಮಗಳೂರು, ಜೂನ್ 9: ದೇವೇಗೌಡರಿಗಾದ ಜೀವನದ ಅನುಭವದ ಅರ್ಧ ವಯಸ್ಸಾಗದ ಚಿರಯುವಕ ವಿನಯ್ ಗುರೂಜಿ. ಆದರೆ ದೊಡ್ಡ ಗೌಡರೆ ಈತನಿಗೆ ಪಾದ ಪೂಜೆ ಮಾಡಿದರು. ದೇವೇಗೌಡರು ಮಾತ್ರವಲ್ಲ, ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಘಟಾನುಘಟಿ ನಾಯಕರೆಲ್ಲಾ ಇವರ ಭಕ್ತರು.
ಇವರ ನುಡಿಗಳು ರಾಜಕೀಯ ದಿಸೆಯನ್ನು ಬದಲಿಸಿದ ನಿದರ್ಶನಗಳಿವೆ. ಆದರೆ ಅವರ ದರ್ಶನ ಆದರೆ ಸಾಕು ಎನ್ನುವ ಅಸಂಖ್ಯಾತ ಭಕ್ತರಿಂದ ಗುರೂಜಿ ದೂರಾಗಲಿದ್ದಾರೆ. ಅಲ್ಲಿಗೂ ರಾಜಕೀಯ ಕಾಲಿಡುತ್ತಾರೆ ಅಂದುಕೊಳ್ಳಬೇಡಿ. ಅವರ ಈ ನಿರ್ಧಾರದ ಬಗ್ಗೆ ಅಪಾರ ಸಂಖ್ಯೆಯ ಜನರಿಗೆ ಬೇಸರ ಆಗಬಹುದು. ಏಕೆ ಬೇಸರ, ಏಕೆ ಇಷ್ಟೆಲ್ಲ ಪೀಠಿಕೆ ಎಂದು ಸಿಟ್ಟಾಗದೆ ಈ ವರದಿಯನ್ನು ಓದಿ.
ದೇವೇಗೌಡರು, ರಮೇಶ್ ಕುಮಾರ್ ರಿಂದ ಪಾದಪೂಜೆ ಮಾಡಿಸಿಕೊಂಡು, ಕುಮಾರಸ್ವಾಮಿಗೆ ಸಿಎಂ ಆಗ್ತೀಯಾ ಹೋಗು ಎಂದಿದ್ದ ಚಿಕ್ಕಮಗಳೂರು ಮೂಲದ ವಿನಯ್ ಗುರೂಜಿ ಭಕ್ತರಿಂದ ದೂರ ಉಳಿಯಲಿದ್ದಾರೆ. ಬಿ.ಇ., ಓದಿರುವ ವಿನಯ್ ಒಂದು ಹಂತವಾದ ಮೇಲೆ ಗುರೂಜಿಯಾಗಿದರು. ಆದರೂ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ.

ದೇವೇಗೌಡರೇ ಪಾದಪೂಜೆ ಮಾಡಿದ ಬಳಿಕ ರಾತ್ರೋರಾತ್ರಿ ಖ್ಯಾತಿಗೆ ಬಂದರು. ವಿನಯ್ ಗುರೂಜಿ ಇನ್ನು ಮುಂದೆ ಭಕ್ತರಿಂದ ಕೆಲ ದಿನಗಳ ಕಾಲ ದೂರ ಉಳಿಯಲಿದ್ದಾರೆ. ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ವಿನಯ್ ಗುರೂಜಿಗೆ ಏಕಾಗ್ರತೆಗೆ ಭಂಗ ಉಂಟಾಗುತ್ತಾ ಇರುವುದರಿಂದ ತಾವೇ ಹೇಳಿ, ನಿರ್ಮಿಸಿಕೊಳ್ಳುತ್ತಿರುವ- ಮಠದ ಆವರಣದಲ್ಲೇ ತಲೆ ಎತ್ತುತ್ತಿರುವ ಕೃತಕ ಗುಹೆಯಲ್ಲಿ ಧ್ಯಾನಾಸಕ್ತರಾಗಲಿದ್ದಾರೆ.
ದಿನಂಪ್ರತಿ ಬರುವ ಅಪಾರ ಸಂಖ್ಯೆಯ ಭಕ್ತರಿಂದ ಜ್ಞಾನರ್ಜನೆ ಹಾಗೂ ಏಕಾಗ್ರತೆಗೆ ತೊಂದರೆ ಆಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಇವರು ಪ್ರತಿ ಗುರುವಾರ ದರ್ಶನ ನೀಡುತ್ತಿದ್ದರು. ಕೆಲ ದಿನಗಳಿಂದ ಶುಕ್ರವಾರ ಮಾತ್ರ ದರ್ಶನ ಸಿಗುತ್ತಿತ್ತು. ಆದರೆ ಪ್ರತಿ ದಿನ ದೂರದ ಊರುಗಳಿಂದ ಬರುತ್ತಿದ್ದ ಅಸಂಖ್ಯಾತ ಭಕ್ತರಿಂದ ಏಕಾಗ್ರತೆಗೆ ಭಂಗವಾಗುತ್ತಿದ್ದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.

ದೂರದ ಊರುಗಳಿಂದ ಬಂದಿದ್ದೇವೆ, ಆಶೀರ್ವಾದ ಪಡೆದು ಹೋಗುತ್ತೇವೆ ಎಂದು ಗೇಟಿನ ಮುಂಭಾಗ ನಿಂತು ಸಿಬ್ಬಂದಿಗೆ ಭಕ್ತರು ಬೇಡಿಕೊಳ್ಳುತ್ತಿದ್ದರು. ಇದರಿಂದ ಸ್ವತಃ ಗುರೂಜಿ ಹಾಗೂ ಸಿಬ್ಬಂದಿಗೂ ಬೇಸರ ಆಗುತ್ತಿತ್ತು. ಹಾಗಾಗಿ, ತಾವೇ ಹೇಳಿ ಮಠದ ಆವರಣದಲ್ಲಿ ಗುಹೆ ನಿರ್ಮಿಸಿಕೊಂಡಲು ಸೂಚಿಸಿದ್ದು, ಈಗಾಗಲೇ ಗುಹೆಯ ಅರ್ಧ ಕೆಲಸ ಮುಗಿದಿದೆ.
ಕೆಲ ದಿನಗಳಲ್ಲೇ ಗುಹೆ ಪ್ರವೇಶಿಸಲಿರುವ ಗುರೂಜಿ ಜ್ಞಾನ, ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ. ಗುರೂಜಿ ಬಹುತೇಕ ರಾಜಕಾರಣಿಗಳಿಗೆ ಆಶೀರ್ವದಿಸಿದ್ದಾರೆ. ಜನರ ಕಷ್ಟಗಳನ್ನು ನಿವಾರಿಸಿದ್ದಾರೆ. ದಿನ ಕಳೆದಂತೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯಿಂದ ಏಕಾಗ್ರತೆಗೆ ಭಂಗವಾಗಿ ಗುರೂಜಿಗೆ ಬೇಸರವಾಗಿ, ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದು ತಿಂಗಳಲ್ಲಿ ಗುಹೆ ಸಿದ್ಧವಾಗಿ, ಗುರೂಜಿ ಧ್ಯಾನದಲ್ಲಿ ಮಗ್ನರಾಗಲಿದ್ದಾರೆ. ಅಲ್ಲಿ ಯಾರಿಗೂ ದರ್ಶನವಿಲ್ಲ. ಅವರು ಗುಹೆಯಿಂದ ಹೊರಬಂದ ಬಳಿಕವೇ ದರ್ಶನ. ಗುರೂಜಿಯ ಈ ನಡೆ ಭಕ್ತವೃಂದಕ್ಕೂ ನೋವು ತಂದಿದೆ.












Click it and Unblock the Notifications