ಆರ್‌ಎಸ್‌ಎಸ್- ಬಿಜೆಪಿಯಿಂದ ಸಮಾಜದಲ್ಲಿ ಬೆಂಕಿ: ಮಧು ಬಂಗಾರಪ್ಪ ವಾಗ್ದಾಳಿ
ಚಿಕ್ಕಮಗಳೂರು, ನವೆಂಬರ್, 05: ದ್ವೇಷದ ಮನಸ್ಥಿತಿಯ ಬಿಜೆಪಿ ಅಧಿಕಾರಕ್ಕೆ ಬಂದು ಅಮಾಯಕರ ಕೈಯಲ್ಲಿ ಕೊಲೆ-ಸುಲಿಗೆ ಮಾಡಿಸುತ್ತಿದೆ. ಮಂಗಳೂರಿನಲ್ಲಿ ನಾವು ಬಿಜೆಪಿಯನ್ನು ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಬಿಜೆಪಿಯವರು ಜಾತಿ-ಧರ್ಮಕ್ಕೆ ದ್ರೋಹ ಮಾಡಿದ್ದು, 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ-ಸಂಘಪರಿವಾರ ಹಾಗೂ ವಿ.ಎಚ್.ಪಿಯವರೇ ಸಮಾಜಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಆಜಾನ್ ಕೇಳಿದ ತಕ್ಷಣ ಇಲ್ಲಿ ಯಾರು ಹಾರ್ಟ್ ಅಟ್ಯಾಕ್ ಆಗಿ ಸತ್ತಿಲ್ಲ. ಆಜಾನ್ ವಿಷಯದಲ್ಲಿ ಮುಸ್ಲಿಮರಿಗೂ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಆಜಾನ್ ನಿಲ್ಲಿಸಲು ಹೋಗಿ ಗಣೇಶ ಹಬ್ಬದಲ್ಲಿ ಮೈಕ್ ಇಲ್ಲದಂತೆ ಮಾಡಿದ್ದಾರೆ. ಹಿಂದೂಗಳಿಗೆ ಬಿಜೆಪಿಯ ಮೇಲೆ ದ್ವೇಷ-ಸಿಟ್ಟಿದೆ. ಮಂಗಳೂರಿನಲ್ಲಿ ಬಿಜೆಪಿಯನ್ನು ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೀವೆ ನೋಡಿ. ಬಿಜೆಪಿಯವರು ವ್ಯವಹಾರ ಮಾಡಲು ಬಂದಿದ್ದಾರೆಯೇ ಹೊರತು, ನಿಮ್ಮ ಉದ್ಧಾರ ಮಾಡಲಿಕ್ಕ ಅಲ್ಲ ಎಂದು ಜನರಿಗೆ ಕಿವಿಮಾತನ್ನು ಹೇಳಿದರು. ಜಾತಿ-ಧರ್ಮಕ್ಕೂ ದ್ರೋಹ ಮಾಡಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಸೀಟು. ಆದರೆ ಈ ಬಾರಿ ಮಂಗಳೂರಿನಲ್ಲಿ ಬಿಜೆಪಿಯವರನ್ನು ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಬಿಜೆಪಿಗೆ ಮಧು ಬಂಗಾರಪ್ಪ ಸವಾಲು ಹಾಕಿದ್ದಾರೆ.

ಎಲ್ಲಾ ಜಿಲ್ಲೆಗಳಿಗೂ ಪ್ರತ್ಯೇಕ ಪ್ರಣಾಳಿಕೆ
ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರತ್ಯೇಕ ಪ್ರಣಾಳಿಕೆಯನ್ನು ತಯಾರಿಸಲಿದೆ ಎಂದು ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪ್ರಣಾಳಿಕಾ ಸಮಿತಿ ಅಧ್ಯಕ್ಷರಾದ ಪರಮೇಶ್ವರ್ ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಆಯಾ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದು ಜಿಲ್ಲಾವಾರು ಪ್ರಣಾಳಿಕೆಯನ್ನು ತಯಾರಿಸಲಿದ್ದಾರೆ ಎಂದಿದ್ದರು.

ಒಬಿಸಿ ಸಮಾವೇಶ ನಡೆಸಲು ಸಿದ್ಧತೆ
ಇತ್ತೀಚಿನ ದಿನಗಳಲ್ಲಿ ಹಿಂದುಳಿದ ವರ್ಗದ ವಿಭಾಗದ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಂಡ ಮೇಲೆ ಹಿಂದುಳಿದ ವರ್ಗಕ್ಕೆ ಸೇರಿರುವ ಅತ್ಯಂತ ಚಿಕ್ಕಪುಟ್ಟ ಸಮುದಾಯಗಳನ್ನೂ ಗುರುತಿಸಿ ಆ ಸಮುದಾಯಗಳಿಗೂ ಪಕ್ಷದಲ್ಲಿ ಪ್ರಾತಿನಿಧ್ಯವನ್ನು ನೀಡಬೇಕು. ಇದು ಬಂಗಾರಪ್ಪರ ಮಗನಾಗಿ ಮತ್ತು ಕಾಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ನನ್ನ ಜವಾಬ್ದಾರಿ ಆಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಚಿಕ್ಕ ಪುಟ್ಟ ಸಮುದಾಯದವರಿಗೂ ಸೂಕ್ತ ಸ್ಥಾನಮಾನ ದೊರಕಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಬಿಸಿ ಸಮಾವೇಶಗಳನ್ನು ನಡೆಸಲಾಗುವುದು. ಚುನಾವಣೆ ಹತ್ತಿರ ಬಂದಿರುವುದರಿಂದ ಪಕ್ಷದ ರಾಜ್ಯ ಮತ್ತು ಸ್ಥಳೀಯ ಮುಖಂಡರುಗಳನ್ನು ಸೇರಿಸಿಕೊಂಡು ಸುಮಾರು 30 ಸಾವಿರ ಜನರ ಸಮಾವೇಶ ಸಂಘಟಿಸಬೇಕೆಂಬ ಗುರಿ ಇದೆ ಎಂದಿದ್ದರು.












Click it and Unblock the Notifications