BJPvsBJP: ಎಂಪಿ ಕುಮಾರಸ್ವಾಮಿಗೆ ಸೆಡ್ಡು- ಆರ್‌ಎಸ್‌ಎಸ್ ಮುಖಂಡನಿಗೆ ಬಿಜೆಪಿ ಕಾರ್ಯಕರ್ತರ ಮಣೆ
ಚಿಕ್ಕಮಗಳೂರು, ಏಪ್ರಿಲ್ 6: ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಹಾಗೂ ಕಾರ್ಯಕರ್ತರ ಜಟಾಪಟಿ ಮುಂದುವರಿದಿದ್ದು, ಈ ಬಾರಿ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ಪಟ್ಟುಹಿಡಿದಿದ್ದಾರೆ. ಅಲ್ಲದೇ ಆರ್‌ಎಸ್‌ಎಸ್ ಸ್ವಯಂ ಸೇವಕನಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿ ಪರ್ಯಾಯವಾಗಿ ಆರ್.ಎಸ್.ಎಸ್ ಸ್ವಯಂ ಸೇವಕನಿಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮುಖಂಡ ನರೇಂದ್ರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನರೇಂದ್ರ ಅವರಿಗೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪುಷ್ಟಿ ಕೊಡುವಂತೆ ಚಿಕ್ಕಮಗಳೂರು ಬಿಜೆಪಿ ಕಚೇರಿಯಲ್ಲಿ ನರೇಂದ್ರ ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

30 ವರ್ಷಗಳಿಂದ ಆರ್.ಎಸ್. ಎಸ್ ಸ್ವಯಂ ಸೇವಕರಾಗಿದ್ದ ಬಿಜೆಪಿ ಸೇರ್ಪಡೆಯಾಗಿರುವುದಕ್ಕೆ ಮೂಡಿಗೆರೆ ಬಿಜೆಪಿ ಕಾರ್ಯಕರ್ತರು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ನರೇಂದ್ರ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದು, ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ. ಕಾಲೇಜಿನ ಗ್ರಂಥಪಾಲಕರಾಗಿದ್ದ ನರೇಂದ್ರ ಅವರು ಮೂಡಿಗೆರೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಕಳೆದ ಎರಡು ತಿಂಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆರ್‌ಎಸ್‌ಎಸ್‌ನ ಕಟ್ಟಾಳುಯಾಗಿರುವ ನರೇಂದ್ರ ಅವರೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಈ ಹಿಂದೆಯೇ ಬಿಂಬಿತವಾಗಿದೆ. ಹಾಗಾಗಿ, ಆರ್‌ಎಸ್‌ಎಸ್ ಕೂಡ ಎರಡು-ಮೂರು ತಿಂಗಳ ಹಿಂದೇ ಅವರನ್ನು ಸಂಘದ ಎಲ್ಲಾ ಹುದ್ದೆಯಿಂದ ವಿಮುಕ್ತಿಗೊಳಿಸಿತ್ತು. ಮೂಡಿಗೆರೆ ಮೀಸಲು ಕ್ಷೇತ್ರದದಲ್ಲಿ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಲು ಮುಂದಾಗಿತ್ತು. ಟಿಕೆಟ್‍ಗಾಗಿ ಜನ ತೀವ್ರ ಪೈಪೋಟಿ ನಡೆಸುತ್ತಿದ್ದರು. ಈ ನಡುವೆ ಅಚ್ಚರಿ ಎಂಬಂತೆ ನರೇಂದ್ರ ಅವರ ಹೆಸರು ಹೊರ ಬಂದಿತ್ತು.
ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಕೇಂದ್ರಕ್ಕೆ ಪತ್ರ ಬರೆದ ಕಾರ್ಯಕರ್ತರು
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರಿಗೆ ಅಸಮಾಧಾನ ಕಿಂಚಿತ್ತೂ ಕಿಡಿಮೆಯಾಗಿಲ್ಲ. ಎಂಪಿ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರು ಸಾಲು ಸಾಲು ಆರೋಪ ಮಾಡುತ್ತಿದ್ದಾರೆ. ಮೂರು ಶಾಸಕರಾಗಿರುವ ಎಂ.ಪಿ. ಕುಮಾರಸ್ವಾಮಿ ಗೆದ್ದ ಮೇಲೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಸಿಗುತ್ತಿಲ್ಲ. ಯಾರ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ಕಾರ್ಯಕರ್ತರು ಕಿಡಿಕಾರಿದ್ದರು. ಇನ್ನು ಎಂ.ಪಿ. ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದು, ಈ ಬಾರಿ ಇವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ತೀವ್ರ ಅಸಮಾಧಾನ ಹೊರಹಾಕಿದ್ದ ಕಾರ್ಯಕರ್ತರು ಇದೀಗ ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಕೇಂದ್ರ ನಾಯಕರಿಗೆ ಪತ್ರ ಬರೆಯುತ್ತಿದ್ದಾರೆ. ಮೂಡಿಗೆರೆ ಮೀಸಕು ಕ್ಷೇತ್ರದ ಹಲವಾರು ಬಿಜೆಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ 10 ಅಂಶಗನ್ನೊಳಗೊಂಡ ಪತ್ರವನ್ನು ಬರೆದು ಇ-ಮೇಲ್ ಮಾಡಿದ್ದಾರೆ.
ಶಾಸಕ ಎಂ.ಪಿ ಕುಮಾರಸ್ವಾಮಿ ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ, ಆಪ್ತರಿಗೆ ಮಾತ್ರ ಹೆಚ್ಚೆಚ್ಚು ಅನುದಾನ ನೀಡುತ್ತಿದ್ದಾರೆ, ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ವಿಧಾನಸೌಧದ ಮುಂದೆ ಪಕ್ಷದ ಮರ್ಯಾದೆ ಕಳೆದಿದ್ದಾರೆ, ತಾನೇ ಬಟ್ಟೆ ಹರಿದುಕೊಂಡು ಜನರ ವಿರುದ್ಧ ಆರೋಪ, ಹೀಗೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ಕಾರ್ಯಕರ್ತರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.












Click it and Unblock the Notifications