ಬಿ.ಹೊಸಹಳ್ಳಿಯಲ್ಲಿ ಹಕ್ಕುಪತ್ರಕ್ಕಾಗಿ ಬಡಕುಟುಂಬ ಗೋಳಾಟ, ಕಣ್ಮುಚಿ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರು, ನವೆಂಬರ್, 11: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿ.ಹೊಸಹಳ್ಳಿ ಗ್ರಾಮದ ಬಡಕುಟುಂಬವೊಂದು ಹಕ್ಕುಪತ್ರಕ್ಕಾಗಿ ಅಲೆದಾಡಿ ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಬಿ.ಹೊಸಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಪ್ರಸನ್ನ ಎಂಬುವವರ ಕುಟುಂಬವು ಗುಡಿಸಲಿನಲ್ಲಿ ವಾಸವಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ 38ರಲ್ಲಿ ಆಶ್ರಯ ನಿವೇಶನಕ್ಕಾಗಿ ಜಾಗವನ್ನು ಮೀಸಲಿಟ್ಟಿದ್ದರರು. ಮೀಸಲಿಟ್ಟ ನಿವೇಶನದ ಹಕ್ಕುಪತ್ರ ಬಿ.ಹೊಸಹಳ್ಳಿ ಗ್ರಾಮ ಪಂಚಾಯತ್‍ನಲ್ಲಿದೆ. ಆದರೂ ಕೂಡ 2019ರಿಂದ ಹಕ್ಕುಪತ್ರ ನೀಡುತ್ತಿಲ್ಲ ಎಂದು ಪ್ರಸನ್ನ ಆರೋಪಿಸಿದ್ದಾರೆ.
ಹಕ್ಕುಪತ್ರಕ್ಕಾಗಿ ಪ್ರಸನ್ನ ಗೋಳಾಟ
2022ರ ಸೆಪ್ಟೆಂಬರ್ 6ರಂದು ಬಿ.ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಟ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಪ್ರಸನ್ನ ಅವರ ಪತ್ನಿ ಪಾರ್ವತಿ ಮೃತಪಟ್ಟಿದ್ದರು. ಸದ್ಯ ಪ್ರಸನ್ನ ತಮ್ಮ10 ವರ್ಷದ ಮಗನೊಂದಿಗೆ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಹಲವು ಬಾರಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
ಹಕ್ಕುಪತ್ರ ನೀಡದೇ ಇರುವುದರಿಂದ ಪ್ರಸನ್ನ ಅಕ್ಟೋಬರ್ 8ರಂದು ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದುಬಂದಿದೆ. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸಂದರ್ಭದಲ್ಲಿ ಇದನ್ನು ಗಮನಿಸಿದ ಸಂಬಂಧಿಕರಾದ ದೇವರಾಜ್ ಹಾಗೂ ಜ್ಯೋತಿ ಎಂಬವರು ಪ್ರಸನ್ನನನ್ನು ಕಾಪಾಡಿದ್ದರು. ಮೂಡಿಗೆರೆ ಹಾಗೂ ಹಾಸನದ ಆಸ್ಪತ್ರೆಗೆ ಸೇರಿಸಿ ಪ್ರಸನ್ನನ ಪ್ರಾಣವನ್ನು ಉಳಿಸಿದ್ದರು.

ಹಕ್ಕುಪತ್ರ ಕೊಡುವುದಾಗಿ ಭರವಸೆ
ಬಳಿಕ ಸಂತ್ರಸ್ಥರು ಜಿಲ್ಲಾಧಿಕಾರಿ ಹಾಗೂ ಶಾಸಕರ ಬಳಿ ಹೋಗಿ ಹಕ್ಕು ಪತ್ರ ಕೊಡುವಂತೆ ಮನವಿ ಮಾಡಿದ್ದರು. ಆದರೂ ಕೂಡ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಲಾಗುತ್ತಿದೆ. ಪತ್ನಿಯನ್ನು ಕಳೆದುಕೊಂಡು ಮಗನೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿರುವ ಪ್ರಸನ್ನ ಕುಟುಂಬ ಹಕ್ಕುಪತ್ರದ ನಿರೀಕ್ಷೆಯಲ್ಲಿ ಬದುಕು ಸಾಗಿಸುತ್ತಿದೆ. ಕೆಲ ತಿಂಗಳ ಹಿಂದೆ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ಗಲಾಟೆ ಆಗಿದ್ದು, ಹಕ್ಕುಪತ್ರ ವಿತರಣೆಯಾಗಲಿಲ್ಲ.
ನಿವೇಶನಕ್ಕೆ ಗುರುತಿಸಿದ್ದ ಜಾಗದ ಸರ್ವೆ ಕಾರ್ಯ ನಡೆಯಬೇಕಿತ್ತು. ಇದೀಗ ಸರ್ವೆ ಕಾರ್ಯ ಆದೊಡನೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಗ್ರಾಮ ಪಂಚಾಯತಿ ಪಿಡಿಒ ಸಿಂಚನಾ ತಿಳಿಸಿದ್ದಾರೆ. ಸೋಮವಾರ ಸರ್ವೆ ಕಾರ್ಯ ನಡೆಯಲಿದ್ದು, ಸರ್ವೆ ಕಾರ್ಯ ಪೂರ್ಣಗೊಂಡ ಮೇಲೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮೂಡಿಗೆರೆ ತಹಶೀಲ್ದಾರ್ ನಾಗರಾಜ್ ಭರವಸೆ ನೀಡಿದ್ದಾರೆ.












Click it and Unblock the Notifications