ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು, ಇಂಗು ಗುಂಡಿಗೆ ಬಿದ್ದು ಮಗು ಸಾವು
ಚಿಕ್ಕಮಗಳೂರು, ಆಗಸ್ಟ್ 07: ವಿದ್ಯುತ್ ತಂತಿಗೆ ತಗುಲಿದ್ದ ಮರದ ರಂಬೆಗಳನ್ನು ಕಡಿಯಲು ಹೋಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊರ್ವ ಮರದ ಮೇಲೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ. ಲೋಕಪ್ಪಗೌಡ (56) ಮೃತ ದುರ್ದೈವಿ.
ಮನೆಯ ಹತ್ತಿರವಿದ್ದ ಮರದ ಸಮೀಪ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮರದ ರಂಬೆಗಳು ವಿದ್ಯುತ್ ತಂತಿಗೆ ತಗುಲಿದ್ದವು. ಇದನ್ನು ಗಮನಿಸಿದ ಲೋಕಪ್ಪಗೌಡ ಮರ ಹತ್ತಿ ರಂಬೆಗಳನ್ನು ತೆರವುಗೊಳಿಸುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಮರದ ಮೇಲೆಯೇ ಲೋಕಪ್ಪಗೌಡ ಮೃತಪಟ್ಟಿದ್ದಾರೆ.

ಲೋಕಪ್ಪಗೌಡ ಅವರು ಮರದ ಮೇಲೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದನ್ನು ಗಮನಿಸಿದ ಕುಟುಂಬದವರು ಅವರ ದೇಹವನ್ನು ಮರದಿಂದ ಕೆಳಗಿಳಿಸಿದ್ದಾರೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟವಾಡುವಾಗ ಇಂಗು ಗುಂಡಿಗೆ ಬಿದ್ದು ಬಾಲಕ ಸಾವು
ಚಿಕ್ಕಮಗಳೂರು: ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿ ಜನ್ನಾಪುರದಲ್ಲಿ ನಡೆದಿದೆ. ಮೃತಪಟ್ಟಿರುವ ಬಾಲಕನನ್ನು ಸುನೀಲ್ ಎನ್ನುವವರ ಮಗ 8 ವರ್ಷದ ಆಶಿರ್ ಎಂದು ಗುರುತಿಸಲಾಗಿದೆ.

ಸರಕಾರಿ ಕಟ್ಟಡವೊಂದರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿರ್ಮಾಣ ಮಾಡಿದ್ದ ಗುಂಡಿಯಲ್ಲಿ ನೀರು ತುಂಬಲಾಗಿತ್ತು. ಇಲ್ಲಿಗೆ ಮೂವರು ಬಾಲಕರು ಶನಿವಾರ ಆಟವಾಡಲು ತೆರಳಿದ್ದರು. ಈ ವೇಳೆ ಬಾಲಕ ಆಶಿರ್ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಜನ್ನಾಪುರದ ಚಿನ್ನಿಗ ಸರ್ಕಾರಿ ಪ್ರೌಢಶಾಲೆಯ ಪಕ್ಕದಲ್ಲಿ ಇತ್ತೀಚಿಗಷ್ಟೇ ಗುದ್ದಲಿಪೂಜೆ ಮಾಡಿ ನೂತನವಾಗಿ ನಿರ್ಮಿಸುತ್ತಿರುವ ಮುರಾರ್ಜಿ ವಸತಿ ಶಾಲೆ ನೂತನ ಕಟ್ಟಡಕ್ಕೆಂದು ನೀರಿಗೋಸ್ಕರ ತಾತ್ಕಾಲಿಕ ನೀರಿನ ಗುಂಡಿ ತೆಗೆದಿರುತ್ತಾರೆ. ಇದರ ಸುತ್ತ ಕಟ್ಟಡದ ಕಾಮಗಾರಿ ಅಧಿಕಾರಿಗಳು ಹಾಗೂ ಇಂಜಿನಿಯರ್ ನಿರ್ಲಕ್ಷತೆಯಿಂದ ಮೆಸ್ ಅಡ್ಡಗಾವಲು ಅಳವಡಿಸಿಲ್ಲ. ಇನ್ನು ಸುನಿಲ್ ಅವರ ಮನೆ ಮುರಾರ್ಜಿ ವಸತಿ ಶಾಲೆ ನೂತನ ಕಟ್ಟಡ ಬಳಿಯೇ ಇದ್ದು, ಆಶಿರ್ ಆಟವಾಡಲು ಹೋಗಿ ಬಾವಿಯ ಸುತ್ತ ಏನು ಇಲ್ಲದ ಕಾರಣ ಕಾಲು ಜಾರಿ ನೀರಿಗೆ ಬಿದ್ದು ಕೊನೆಯುಸಿರು ಎಳೆದಿದ್ದಾನೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications