ಕತ್ತಲಲ್ಲೇ ಮುಳ್ಳಯ್ಯನಗಿರಿ ಏರುತ್ತಿದ್ದ ಸಿದ್ದೇಶ್ವರ ಶ್ರೀಗಳು: ಅಂದು ನೀಡಿದ ಜೀವನ ಸಂದೇಶವೇನು?
ಚಿಕ್ಕಮಗಳೂರು, ಜನವರಿ 5: ಶತಮಾನದ ಸಂತ ಎಂದೇ ಖ್ಯಾತರಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೂ ಕಾಫಿನಾಡಿಗೂ ಅವಿನಾಭಾವ ಸಂಬಂಧ ಇದ್ದು, 2004ರಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಅವರು ಇಲ್ಲಿನ ಪರಿಸರದ ಸೌಂದರ್ಯಕ್ಕೆ ಮನಸೋತ್ತಿದ್ದರು. ಇಲ್ಲಿನ ರಮಣೀಯ ಪರಿಸರದ ನಡುವೆ ಹೆಜ್ಜೆ ಹಾಕುವ ಮೂಲಕ ಜಿಲ್ಲೆಯಲ್ಲೂ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳು ಸೋಮವಾರ ಲಿಂಗೈಕ್ಯರಾಗಿದ್ದು, ಈ ಹಿಂದೆ ಅವರು ಚಿಕ್ಕಮಗಳೂರಿಗೆ ಬಂದು ಪ್ರವಚನ ನೀಡಿದ್ದ ಸವಿಗಳಿಗೆಯನ್ನು ಜಿಲ್ಲೆಯ ಜನತೆ ಮೆಲುಕು ಹಾಕುತ್ತಾ ಅವರನ್ನು ಸ್ಮರಿಸಿದ್ದಾರೆ. ಶ್ರೀಗಳು ಅವರು ಉಳಿಸಿ ಹೋಗಿರುವ ಹೆಜ್ಜೆ ಗುರುತುಗಳನ್ನು ಜನತೆ ಇಂದು ನೆನೆದು ಭಾವುಕರಾಗಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಅವರು 2004ರಲ್ಲಿ ಡಿಎಸ್‍ಎಜಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಒಂದು ತಿಂಗಳುಗಳ ಕಾಲ ಪ್ರವಚನದಲ್ಲಿ ಪಾಲ್ಗೊಂಡು ಭಕ್ತರಿಗೆ ಸಂದೇಶ ನೀಡಿದ್ದರು. ಸಾವಿರಾರು ಜನರ ಅವರ ಪ್ರವಚನವನ್ನು ಆಲಿಸಿದ್ದರು.

ಶ್ರೀಗಳ ನೆನೆದು ಜಿಲ್ಲೆಯ ಜನತೆ ಭಾವುಕ
ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯ ಮತ್ತು ಬದುಕಿನ ಬಗ್ಗೆ ಸುಧೀರ್ಘ ಪ್ರವಚನ ನೀಡಿದ್ದ ಅವರನನ್ನು ಜೂನಿಯರ್ ಕಾಲೇಜು ಅಧ್ಯಾಪಕ ಗಣಾಚಾರಿ ಅವರ ತಂಡ ಚಿಕ್ಕಮಗಳೂರಿಗೆ ಕರೆಸಿ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರದ್ದು ಚಿಕ್ಕಮಗಳೂರಿನಲ್ಲಿ ಇದೇ ಮೊದಲ ಹಾಗೂ ಕೊನೆಯ ಕಾರ್ಯಕ್ರಮವಾಗಿದ್ದು, ಆ ಬಳಿಕ ಅವರು ಚಿಕ್ಕಮಗಳೂರಿಗೆ ಬಂದಿರಲಿಲ್ಲ.

ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ದಿನನಿತ್ಯ ವಾಕಿಂಗ್
ಕಾಫಿನಾಡಿಗೆ ಭೇಟಿ ನೀಡಿದ್ದ ವೇಳೆ ಅವರು ಇಲ್ಲಿನ ಸುಂದರ ರಮಣೀಯ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದರು. ನಿಸರ್ಗದ ಮಡಿಲಿನಲ್ಲಿ ಸದಾ ಬದುಕಬೇಕು ಎಂದು ಹೇಳುತ್ತಿದ್ದ ಶ್ರೀಗಳು ಚಿಕ್ಕಮಗಳೂರಿನಲ್ಲಿ ಒಂದು ತಿಂಗಳ ಕಾಲ ನಗರದ ಹೊರವಲಯದಲ್ಲಿರುವ ಕೈಮರದ ಎನ್‍ಎಂಡಿಸಿ ಬಳಿ ಇರುವ ಆದಿಚುಂಚನಗಿರಿ ಪ್ರದೇಶದಿಂದ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ದಿನನಿತ್ಯ ವಾಕಿಂಗ್ ಮಾಡುತ್ತಿದ್ದರು. ಸ್ಥಳೀಯ ಉತ್ಸಾಹಿ ಯುವಕರು ಇವರ ಜೊತೆ ವಾಕಿಂಗ್, ಟ್ರಕ್ಕಿಂಗ್ ಹೋಗುತ್ತಿದ್ದರು. ಬೆಟ್ಟವನ್ನು ಸಲೀಸಾಗಿ ಹತ್ತುತ್ತಿದ್ದ ಶ್ರೀಗಳು ಈ ಪ್ರದೇಶ ಅತ್ಯಂತ ಪುಣ್ಯದ ಪ್ರದೇಶವೆಂದು ಹೇಳಿ ಮುಳ್ಳಯ್ಯನಗಿರಿ ಭಾಗದಲ್ಲಿ ಟ್ರಕ್ಕಿಂಗ್ ಮಾಡಿದ್ದರು.

ಕತ್ತಲಲ್ಲಿ ನಡೆದರೆ ಎಂತಹ ಕಷ್ಟವನ್ನು ಎದುರಿಸಬಹುದು
ರಾತ್ರಿ ವೇಳೆಯಲ್ಲಿ ಬೆಟ್ಟದಲ್ಲಿ ನಡೆಯುವ ಸಂದರ್ಭದಲ್ಲಿ ಟಾರ್ಚ್‍ಲೈಟ್ ಇಲ್ಲದೆ ನಡೆಯುವಂತೆ ಹೇಳುತ್ತಿದ್ದರು. ಕತ್ತಲಿನಲ್ಲಿ ನಡೆದರೆ ಎಂತಹ ಕಷ್ಟವನ್ನಾದರೂ ಕೂಡ ಎದುರಿಸಬಹುದು ಎನ್ನುವ ಪಾಠವನ್ನು ಅವರು ತಮ್ಮೊಂದಿಗಿದ್ದವರಿಗೆ ಹೇಳಿಕೊಡುತ್ತಿದ್ದರು. ಅಂದು ಅವರ ಜೊತೆ ಒಡನಾಟ ಹೊಂದಿದವರು ಆ ಸವಿ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಅಂದು ಜಿಲ್ಲೆಗೆ ಆಗಮಿಸಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಜೊತೆ ನಗರದ ಉಪ್ಪಳಿಯ ತೇಜೇಶ್‍ಕುಮಾರ್, ಯುವಕರಾದ ಇಂದ್ರೇಶ್, ಪ್ರಕಾಶ್, ಆರಾಧ್ಯ, ಕಿರಣ್, ಹೇಮಂತ್, ಪ್ರಗತಿಪರ ರೈತ, ರಾಜ್ಯೋತ್ಸವ ಪುರಸ್ಕತ ಚಂದ್ರಶೇಖರ್ ನಾರಾಯಣಪುರ, ಎಐಟಿ ಪ್ರಾಂಶುಪಾಲ ಸುಬ್ಬರಾಯ, ವೈದ್ಯ ಜೆ.ಪಿ.ಕೃಷ್ಣೇಗೌಡ ಸೇರಿದಂತೆ ಅನೇಕರು ಗಿರಿಶ್ರೇಣಿಗಳಲ್ಲಿ ಹೆಜ್ಜೆ ಹಾಕಿದ್ದರು. ಅವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಇಲ್ಲಿನ ಪರಿಸರಕ್ಕೆ ಭೇಟಿ ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮುಳ್ಳಯ್ಯನಗಿರಿಯನ್ನು ಅತ್ಯಂತ ಪುಣ್ಯದ ಪ್ರದೇಶವೆಂದಿದ್ದ ಶ್ರೀಗಳು
ಚಿಕ್ಕಮಗಳೂರಿನಲ್ಲಿ ಇದ್ದಾಗ ಮುಳ್ಳಯ್ಯನಗಿರಿ ಮಾರ್ಗದ ಕೈಮರಾ ಸಮೀಪದ ಎನ್.ಎಂ.ಡಿ.ಸಿ.ಯಲ್ಲಿ ಒಂದು ತಿಂಗಳು ಇದ್ದರು. ಈ ವೇಳೆ ಅವರು ಮುಳ್ಳಯ್ಯನಗಿರಿ ಪರ್ವತಗಳ ಸಾಲಿನಲ್ಲಿ ನಿತ್ಯ ವಾಯುವಿಹಾರಕ್ಕೆ ಹೋಗುತ್ತಿದ್ದರು. ಸ್ಥಳೀಯ ಉತ್ಸಾಹಿ ಯುವಕರು ಶ್ರೀಗಳ ಜೊತೆ ವಾಕಿಂಗ್ ಹೋಗುತ್ತಿದ್ದರು. ಮುಳ್ಳಯ್ಯನಗಿರಿಯ ಸರ್ಪದ ಹಾದಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಶ್ರೀಗಳು ಬೆಟ್ಟವನ್ನ ಹತ್ತುವಾಗ ಈ ಪ್ರದೇಶ ಅತ್ಯಂತ ಪುಣ್ಯದ ಪ್ರದೇಶವೆಂದು ಹೇಳುತ್ತಿದ್ದರು. ರಾತ್ರಿ ವೇಳೆ ನಡೆಯುವಾಗ ಟಾರ್ಚ್ ಲೈಟ್ ಇಲ್ಲದೆ ನಡೆಯಬೇಕು. ಕತ್ತಲಲ್ಲಿ ನಡೆದರೆ ಎಂತಹಾ ಕಷ್ಟವನ್ನ ಬೇಕಾದರೂ ಎದುರಿಸಬಹುದು ಎಂದು ಹೇಳುತ್ತಿದ್ದರು. ಅಂದು ಪ್ರವಚನದಲ್ಲಿ ಅವರು ಹೇಳಿದ ಮಾತುಗಳನ್ನು ಇಂದು ಅವರ ಪ್ರವಚವನ್ನ ಆಲಿಸಿದ್ದ ಜಿಲ್ಲೆಯ ಜನ ಅವರ ಮಾತನ್ನ ನೆನೆದು ಭಾವುಕರಾಗಿದ್ದಾರೆ. ಆಧ್ಯಾತ್ಮ ಲೋಕದ ರತ್ನ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಬಾಳೆಹೊನ್ನೂರು ರಂಭಾಪುರಿ ಮಠದ ಡಾ. ವೀರಸೋಮೇಶ್ವರ ಶ್ರೀಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications