ಚಾರ್ಮಾಡಿ ಘಾಟ್ ವಾಹನ ಸವಾರರ ಗಮನಕ್ಕೆ
ಚಿಕ್ಕಮಗಳೂರು, ಫೆಬ್ರವರಿ 12: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರ ಗಮನಕ್ಕೆ. ಗ್ರಾಮ ಪಂಚಾಯಿತಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ, ಕ್ರಿಮಿನಲ್ ಪ್ರಕರಣ ಸಹ ದಾಖಲಾಗಲಿದೆ.
ಹೌದು, ಚಾರ್ಮಾಡಿ ಗ್ರಾಮ ಪಂಚಾಯಿತಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಸವನ್ನು ಹಾಕುವ ವಾಹನ ಸವಾರರಿಗೆ ದಂಡ ಹಾಕಲು ತೀರ್ಮಾನಿಸಿದೆ. ಫೆಬ್ರವರಿ 15ರಿಂದ ಈ ನಿಯಮ ಜಾರಿಗೆ ಬರಲಿದೆ.
ಚಾರ್ಮಾಡಿ ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ್ ಶೆಟ್ಟಿ ಈ ಕುರಿತು ಮಾಹಿತಿ ನೀಡಿದ್ದಾರೆ. "ರಸ್ತೆ ಬದಿ ಕಸ ಸುರಿಯುವವರಿಗೆ ದಂಡ ಹಾಕುವುದು ಮಾತ್ರವಲ್ಲ, ಕ್ರಿಮಿನಲ್ ಕೇಸು ಸಹ ದಾಖಲಿಸುತ್ತೇವೆ" ಎಂದು ಹೇಳಿದ್ದಾರೆ.

ಉಜಿರೆಯಿಂದ ಆಗಮಿಸಿದ ವ್ಯಕ್ತಿಯೊಬ್ಬರು ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಿದ್ದರು. ಆಗ ಗ್ರಾಮ ಪಂಚಾಯಿತಿ ಸದಸ್ಯರು ಅವರನ್ನು ಹಿಡಿದು 500 ರೂ. ದಂಡವನ್ನು ಹಾಕಿದ್ದಾರೆ.
ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಜನರು ಸೇರಿ ಎಲ್ಲೆಂದರಲ್ಲಿ ಕಸ ಹಾಕದಂತೆ ಅರಿವು ಮೂಡಿಸುತ್ತಿದ್ದಾರೆ. ಇದನ್ನು ಮೀರಿಯೂ ಪ್ರವಾಸಿಗರು ಕಸ ಹಾಕಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಹೇಳಿದೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಸ ಸುರಿಯಬೇಡಿ ಎಂದು ಮೈಕ್‌ನಲ್ಲಿ ಹೇಳುವ ಮೂಲಕ ಗ್ರಾಮ ಪಂಚಾಯಿತಿ ಈಗಾಗಲೇ ಮಾಹಿತಿ ನೀಡುತ್ತಿದೆ. ನಿಗದಿಪಡಿಸಿದ ಸ್ಥಳದಲ್ಲಿ ಸಿಸಿಟಿವಿಯನ್ನು ಸಹ ಅಳವಡಿಕೆ ಮಾಡಲು ತೀರ್ಮಾನಿಸಲಾಗಿದೆ.











Click it and Unblock the Notifications