Chikkamagaluru: ಬಡವರ ಕಾಫಿ ತೋಟ ಮಾತ್ರ ತೆರವು: ಚಿಕ್ಕಮಗಳೂರಿನಲ್ಲಿ ಕಣ್ಣೀರಿಟ್ಟ ಕುಟುಂಬ
ಚಿಕ್ಕಮಗಳೂರು ಸೆಪ್ಟೆಂಬರ್ 15: ಪ್ರಭಾವಿಗಳ ಒತ್ತುವರಿಯನ್ನು ಕಡೆಗಣಿಸಿ ಬಡವರ ತೋಟವನ್ನು ತೆರವು ಮಾಡಿದ ಆರೋಪ ಚಿಕ್ಕಮಗಳೂರಿನಲ್ಲಿ ಕೇಳಿ ಬಂದಿದೆ. ಚಿಕ್ಕಮಗಳೂರಿನ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಭಾವಿಗಳ ಒತ್ತುವರಿಯನ್ನು ಕಣ್ಣೆತ್ತಿಯೂ ನೋಡದೆ, ಬಡವರ ತೋಟವನ್ನು ಮಾತ್ರ ಮಾಹಿತಿ ನೀಡದೆಯೇ ಏಕಾಏಕಿ ತೆರವು ಮಾಡಿದ್ದಾರೆಂದು ಕುಟುಂಬವೊಂದು ಕಣ್ಣೀರು ಇಟ್ಟಿದೆ.
ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ದಬ್ಬಾಳಿಕೆಗೆ ಕಳಸ ತಾಲೂಕಿನ ಮಾವಿನಕೆರೆ, ಕೊಂಡದ ಮನೆ ಗ್ರಾಮದ ಕುಟುಂಬವೊಂದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ. ಗ್ರಾಮದ ರವೀಂದ್ರ ಎಂಬುವರಿಗೆ ಸೇರಿದ ಕಾಫಿ ತೋಟವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ತೋಟದಲ್ಲಿ ನಾಲ್ಕು ವರ್ಷದಿಂದ ಕಾಫಿ ಗಿಡ, ಮೆಣಸು ಬೆಳೆಯಲಾಗಿತ್ತು. ಅರಣ್ಯ ಸಿಬ್ಬಂದಿಗಳು ಏಕಾಏಕಿ ಎರಡು ಎಕರೆಗೂ ಹೆಚ್ಚು ಕಾಫಿ ತೋಟವನ್ನು ಕಡೆದು ಹಾಕಿದ್ದಾರೆ. ಯಾವುದೇ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಚರಣೆ ನಡೆದಿದೆ ಎಂದು ರವೀಂದ್ರ ಆರೋಪ ಮಾಡಿದ್ದಾರೆ. ಸೂಕ್ತ ದಾಖಲೆಗಳಿದ್ದರೂ ಅರಣ್ಯ ಇಲಾಖೆ ಗದ ಪ್ರಹಾರ ಮಾಡಿದೆ.
ತೋಟ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕಿದ್ದಾರೆ. ರಾಜಕಾರಣಿಗಳು, ಪ್ರಭಾವಿಗಳಿಗೆ ನೋಟಿಸ್ ನೀಡಿದರು ಆಗದ ತೆರುವು ಕಾರ್ಯ, ಸಣ್ಣ ಪ್ರಮಾಣದ ರೈತರ ಮೇಲೆ ಯಾಕೆ? ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಯಾಕೆ ಎಂದು ಮಹಿಳೆ ಅರಣ್ಯ ಇಲಾಖೆ ದಬ್ಬಾಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಭಾವಿಗಳ ಒತ್ತುವರಿಯನ್ನು ಕಣ್ಣೆತ್ತಿಯೂ ನೋಡದ ಅಧಿಕಾರಿಗಳು, ಬಡವರಿಗೆ ಮಾಹಿತಿ ನೀಡದೆಯೇ ಏಕಾಏಕಿ ತೆರವು ಮಾಡಿ ದಬ್ಬಾಳಿಕೆ ಮಾಡಿದ್ದಾರೆ. ರೈತರ ತೀರ್ವ ಹೋರಾಟದ ನಡುವೆಯೂ ಬೆಳೆ ನಾಶ ಮಾಡಲಾಗಿದೆ. ತೋಟದಲ್ಲಿದ್ದ ನಾಲ್ಕು ವರ್ಷದ ಕಾಫಿ ಗಿಡ, ಮೆಣಸು ನಾಶವಾಗಿದೆ. ತೋಟ ಕಳೆದುಕೊಂಡ ಕುಟುಂಬ ಬದುಕಿಗೆ ದಾರಿ ಕಾಣದೆ ಕಂಗಾಲಾಗಿದೆ.

ಹಾಸನ: ಕಾಡಾನೆ ಹಾವಳಿ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಬೆಳ್ಳಂಬೆಳಿಗ್ಗೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮಕ್ಕೆ ಒಂಟಿಸಲಗ ಎಂಟ್ರಿಕೊಟ್ಟಿದ್ದು ಗ್ರಾಮಸ್ಥರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಮಾತ್ರವಲ್ಲದೆ ಒಂಟಿಸಲಗ ಕಂಡು ಕಟ್ಟಿದ್ದ ಜಾನುವಾರುಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಸಮೀಪವೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಆತಂಕದಲ್ಲೇ ಜನ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ದೌಡಾಯಿಸಿ ಎಚ್ಚರಿಕೆಯಿಂದ ಗ್ರಾಮಸ್ಥರು ಓಡಾಡುವಂತೆ ಸೂಚನೆ ನಿಡಿದ್ದಾರೆ.












Click it and Unblock the Notifications