ಬಿಜೆಪಿ ಬೆಂಬಲ ಸಿಗದಿದ್ದರೂ ಹಳ್ಳಿ ಫೈಟ್ ಗೆದ್ದ ಬರಿಗಾಲ ಅಭ್ಯರ್ಥಿ ನವೀನ್
ಮೂಡಿಗೆರೆ, ಡಿ. 30: ಸಮಾನ ಭೂ ಹಂಚಿಕೆ ಮಾಡಬೇಕು ಎಂದು ಬಡವರ ಪರ ದನಿಯೆತ್ತುವ ಮೂಲಕ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿದಿದ್ದ ಯುವ ಅಭ್ಯರ್ಥಿ ನವೀನ್ ಹಾವಳಿ ಇಂದು ಭರ್ಜರಿ ವಿಜಯ ದಾಖಲಿಸಿದ್ದಾರೆ. ಬಿಜೆಪಿ ಕಟ್ಟಾ ಅಭಿಮಾನಿಯಾದರೂ ಕೊನೆ ಕ್ಷಣದಲ್ಲಿ ಬಿಜೆಪಿ ಬೆಂಬಲ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಬರಿಗಾಲಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡಿ ಜನ ಮನಗೆದ್ದು, ನಿಡುವಾಳೆಯ ಜನಬಲದಿಂದಲೇ ಇಂದು ವಿಜಯ ದಾಖಲಿಸಿದ್ದಾರೆ.
''ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ'' ಎಂದು ಹರಕೆ ಹೊತ್ತು ಒಂದು ರೂಪಾಯಿ ಹಣ ಕೂಡಾ ಚುನಾವಣೆಗಾಗಿ ಖರ್ಚು ಮಾಡದೇ ಬರಿಗಾಲಲ್ಲಿ ಏಕಾಂಗಿಯಾಗಿ ಮನೆ ಮನೆಗೆ ತೆರಳಿ ನವೀನ್ ಮತಯಾಚನೆ ಮಾಡಿದ್ದರು. ಮತಯಾಚನೆ ಮಾಡುವಾಗ ಬೆಂಬಲಿಗರನ್ನು ಕರೆದುಕೊಂಡು ಹೋಗದೇ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದರು.
Gram Panchayat Results Live: ಮುಕ್ತಾಯ ಹಂತದಲ್ಲಿ ಮತ ಎಣಿಕೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿ ನವೀನ್ ಹಾವಳಿಗೆ ಭಾರತೀಯ ಜನತಾ ಪಕ್ಷದ ಬೆಂಬಲದ ನಿರೀಕ್ಷೆಯಿತ್ತು. ಆದರೆ, ಡಿಸೆಂಬರ್ ಮೊದಲ ವಾರ ಆಸೆ ನಿರಾಶೆಯಾಯಿತು. ನಿಡುವಾಳೆಯ ಸುಧಾಕರ್ ಎಂಬುವರಿಗೆ ಬಿಜೆಪಿ ಬೆಂಬಲ ಸಿಗುವುದು ಖಾತ್ರಿಯಾಯಿತು. ಆದರೆ, ಇದರಿಂದ ಧೃತಿಗೆಟ್ಟರೂ, ನವೀನ್ ತಮ್ಮ ವಿಶಿಷ್ಟ ಮತಯಾಚನೆ ಹಾಗೂ ಜನ ಪ್ರೀತಿಯಿಂದಲೇ ಗೆಲುವಿನ ಹಾದಿ ತುಳಿದಿದ್ದಾರೆ.

91 ಮತಗಳ ಅಂತರದಲ್ಲಿ ಜಯ
ನಿಡುವಾಳೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 14 ಮಂದಿ ಕಣದಲ್ಲಿದ್ದರು. ನವೀನ್ 496 ಮತ ಪಡೆದಿದ್ದು 91 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಯಾವ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗದೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ನವೀನ್ ಹಾವಳಿ ಸ್ಪರ್ಧಿಸಿ ಗೆದ್ದಿದ್ದು ವಿಶೇಷ. ಅರೆಕೂಡಿಗೆ ಸಮೀಪದ ಸುಕ್ಲುಮಕ್ಕಿಯ ನವೀನ್ ಹಾವಳಿ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರೂ ಬಿಜೆಪಿ ಬೆಂಬಲ ಸಿಕ್ಕಿರಲಿಲ್ಲ.

ಚಪ್ಪಲಿ ಗುರುತು, ಬರಿಗಾಲ ಹರಕೆ
ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರು ತಿಂಗಳು ಮೊದಲೇ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದು ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡಿದ್ದರು.
ಚಪ್ಪಲಿ ಚಿಹ್ನೆಯನ್ನೆ ಚುನಾವಣೆಗೆ ಆರಿಸಿಕೊಂಡಿದ್ದು ಚಿಕ್ಕ ಚಪ್ಪಲಿಯನ್ನು ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ಮನೆಮನೆಗೆ ತೆರಳಿ ಚಪ್ಪಲಿ ಗುರುತಿಗೆ ಮತ ನೀಡುವಂತೆ ಮತಯಾಚಿಸಿದ್ದರು. ಮತಯಾಚನೆ ಮಾಡಲು ಹೋಗುವ ಪ್ರತಿ ಮನೆಯಿಂದ ಒಂದು ಹಿಡಿ ಅಕ್ಕಿಯನ್ನು ಪಡೆಯುತ್ತಿದ್ದು ಆ ಅಕ್ಕಿಯಿಂದ ಅನ್ನ ಮಾಡಿಕೊಂಡು ಸೇವಿಸುತ್ತಿದ್ದರು.

ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ನವೀನ್
ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ನವೀನ್ ಹಾವಳಿ, "ಇದು ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು. ಹಣಬಲಕ್ಕಿಂತಲೂ ಪ್ರಾಮಾಣಿಕತೆ ಹಾಗೂ ಸೇವಾಮನೋಭಾವಕ್ಕೆ ಸಂದ ಗೆಲುವು. ಈ ಗೆಲುವನ್ನು ನಿಡುವಾಳೆ ಗ್ರಾಮಸ್ಥರಿಗೆ ಅರ್ಪಿಸುತ್ತೇನೆ'' ಎಂದು ಒನ್ಇಂಡಿಯಾ ಪ್ರತಿನಿಧಿಗೆ ತಿಳಿಸಿದರು.

ಭೂಮಿ ಇಲ್ಲದವರು ಭೂಮಿಯನ್ನು ಪಡೆದುಕೊಳ್ಳಬೇಕು
ದೇಶದಲ್ಲಿರುವ ಬಡವರು ಮಧ್ಯಮ ವರ್ಗದವರು ಕೂಲಿ ಕಾರ್ಮಿಕರು ತಮ್ಮ ಆರ್ಥಿಕತೆಯನ್ನು ಸುಧಾರಿಸಿ ಕೊಳ್ಳಬೇಕು ಹಾಗೂ ಭೂಮಿ ಇಲ್ಲದವರು ಭೂಮಿಯನ್ನು ಪಡೆದುಕೊಳ್ಳಬೇಕು ಇದುವೇ ನನ್ನ ಮೂಲ ಉದ್ದೇಶ ಚುಣಾವಣೆ ಯಲ್ಲಿ ಗೆದ್ದೇ ಜನ ಸೇವೆ ಮಾಡಬೇಕೆಂದಿಲ್ಲ ಹಾಗೆಯೇ ಮಾಡಬಹುದು ಎಂದು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ ಎಂದು ನವೀನ್ ಅವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು.
ಬಾಳೂರು ಬಿಜೆಪಿ ಕೋರ್ ಕಮಿಟಿ ಸುಧಾಕರ್ ನಿಡುವಾಳೆ ಬೆಂಬಲಿಸಲು ನಿರ್ಧರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಟಿಕೆಟ್ ನೀಡುವುದರ ಮೂಲಕ ಒಂದು ಅವಕಾಶ ಕಲ್ಪಿಸಿ ಕೊಡಬಹುದಿತ್ತು, ಈ ನಿರ್ಧಾರ ಬೇಸರ ತರಿಸಿದೆ ಎಂದಿದ್ದರು.