ದಳಪತಿ ವಿಜಯ್ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಬೆನ್ನಲ್ಲೆ 'ಜನ ನಾಯಗನ್' ನಟಿ ಪೂಜಾ ಹೆಗ್ಡೆ ವಿಶೇಷ ವಿಡಿಯೋ ವೈರಲ್
Pooja Hegde: ಟಿವಿಕೆ ಪಕ್ಷದ ವಿಜಯ್ ಅವರು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದರು. ಈ ಹಿನ್ನೆಲೆಯಲ್ಲಿ ಅವರ 'ಜನ ನಾಯಗನ್' ಚಿತ್ರದ ನಟಿ ಪೂಜಾ ಹೆಗ್ಡೆ ಅವರು ವಿಜಯ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ವಿಶೇಷವಾಗಿ ಅಭಿನಂದಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ತಮಿಳುನಾಡು ವಿಭಾನಸಭೆ ಚುನಾವಣೆಯಲ್ಲಿ ಐತಿಹಾಸಿದ ಗೆಲುವು ಸಾಧಿಸಿದ ದಳಪತಿ ವಿಜಯ್ ಅವರಿಗೆ ಪೂಜಾ ಹೆಗ್ಡೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ವಿಜಯ್ ಅವರೊಂದಿಗೆ ಶೂಟಿಂಗ್ ಸೆಟ್‌ನಲ್ಲಿ ಇರುವ ಫೋಟೋವನ್ನು ಹಂಚಿಕೊಂಡಿರುವ ಪೂಜಾ ಹೆಗ್ಡೆ ಅವರ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪೂಜಾ ಹೆಗ್ಡೆ ವಿಶೇಷ ಅಭಿನಂದನೆ ಪೋಸ್ಟರ್
ಪೂಜಾ ಹೆಗ್ಡೆ ಅವರು ತಮ್ಮ ಜನ ನಾಯಗನ್ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಚುನಾವಣೆಯ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುವ ಆಟವಾಡಿದ್ದಾರೆ. ಆ ವಿಡಿಯೋದಲ್ಲಿ ಬೋರ್ಡ್‌ವೊಂದ ಮೇಲೆ "ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?" ಎಂದು ಬರೆಯಲಾಗಿತ್ತು. ಆಗ ಪೂಜಾ ಅವರು ವಿಜಯ್ ಅವರ ಕಡೆಗೆ ಬೆರಳು ತೋರಿಸುವ ಮೂಲಕ ಅವರೇ ಗೆಲ್ಲುತ್ತಾರೆ ಎಂದು ಸುಳಿವು ನೀಡಿದ್ದರು.
ಪೂಜಾ ಅವರ ಈ ತಮಾಷೆಯನ್ನ ಕಂಡು ವಿಜಯ್ ಅವರು ನಾಚಿಕೆಯಿಂದ ಮುಗುಳ್ನಗುತ್ತಾ ತಮ್ಮ ಮುಖ ಮುಚ್ಚಿಕೊಂಡಿದ್ದಾರೆ. ಈ ಕ್ಯೂಟ್ ದೃಶ್ಯ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ. ಇನ್ನೂ ಈ ವಿಡಿಯೋ ಜೊತೆ ಪೂಜಾ ಅವರು, "ಇದು ಸಂಭವಿಸುವ ಮೊದಲೇ ನಾನು ಇದನ್ನು ಹೇಳಿದ್ದೆ ಅಂದುಕೊಳ್ಳುತ್ತೇನೆ? ಕನಸುಗಳು ನನಸಾಗುತ್ತಿವೆ, ಅಭಿನಂದನೆಗಳು ವಿಜಯ್ ಸರ್," ಎಂದು ಬರೆದುಕೊಂಡಿದ್ದಾರೆ.
ಸಖತ್ ಸದ್ದು ಮಾಡುತ್ತಿರುವ ಪೂಜಾ ಹೆಗ್ಡೆ ವಿಡಿಯೋ
ವಿಡಿಯೋದಲ್ಲಿ ವಿಜಯ್ ಮತ್ತು ಪೂಜಾ ಹೆಗ್ಡೆ ಸರಳ ಉಡುಪುಗಳನ್ನು ಧರಿಸಿದ್ದು, ಕ್ಯಾಮೆರಾ ನೋಡಿ ನಗುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು. ಪೂಜಾ ಹೆಗ್ಡೆ ಅವರು ಅದರಲ್ಲಿ "ಓ ಮೈ ಗಾಡ್, ಅಭಿನಂದನೆಗಳು ವಿಜಯ್ ಸರ್. ನಿಮ್ಮ ಪಯಣ ಉನ್ನತ ಮಟ್ಟಕ್ಕೇರಲಿ. ಈಗ ಸಂಭ್ರಮಾಚರಣೆಯ ಸಮಯ. ಲೆಟ್ಸ್ ಗೋ..." ಎಂದು ಬರೆದುಕೊಂಡಿದ್ದಾರೆ. ಇದು ಇದೀಗ ಎಲ್ಲಡೆ ಸಖತ್ ಸದ್ದು ಮಾಡುತ್ತಿದೆ.
ವಿಜಯ್ ಅವರ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಒಟ್ಟು 234 ಸ್ಥಾನಗಳ ಪೈಕಿ 107 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ವಿಜಯ್ ಅವರ ಈ ಐತಿಹಾಸಿಕ ಸಾಧನೆಗೆ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಕೇವಲ ತಮಿಳು ಚಿತ್ರರಂಗದವರಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಚಿರಂಜೀವಿ ಮತ್ತು ಮಹೇಶ್ ಬಾಬು ಅವರೂ ಕೂಡ ವಿಜಯ್ ಅವರ ಈ ಐತಿಹಾಸಿಕ ರಾಜಕೀಯ ಪಾದಾರ್ಪಣೆಯನ್ನು ಸ್ವಾಗತಿಸಿದ್ದಾರೆ.
ಚಿತ್ರರಂಗದ ರಜನಿಕಾಂತ್, ಕಮಲ್ ಹಾಸನ್ ಅವರಂತಹ ಹಿರಿಯ ನಟರು ವಿಜಯ್ ಅವರ ಯಶಸ್ಸನ್ನು ಶ್ಲಾಘಿಸಿದ್ದಾರೆ. ಸೌತ್ ಸಿನಿಮಾ ರಂಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಕೂಡ ವಿಜಯ್ ಅವರಿಗೆ ಶುಭ ಹಾರೈಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಕೂಡ ಅಭಿನಂದನೆ ತಿಳಿಸಿದ್ದಾರೆ.
ರಜನಿಕಾಂತ್ ಹೇಳಿದ್ದೇನು?
ಖ್ಯಾತ ಹಿರಿಯ ನಟ ರಜನಿಕಾಂತ್ ಅವರು, "ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರಾದ ವಿಜಯ್ ಅವರಿಗೆ ಮತ್ತು ಅವರ ಪಕ್ಷದ ಎಲ್ಲಾ ಸದಸ್ಯರಿಗೆ ನನ್ನ ಅಭಿನಂದನೆಗಳು," ಎಂದು ತಿಳಿಸಿದ್ದಾರೆ.
ಧನುಷ್, ವೆಂಕಟೇಶ್ ದಗ್ಗುಬಾಟಿ, ಚಿರಂಜೀವಿ, ಕಾಜಲ್ ಅಗರ್ವಾಲ್, ಅನಿರುದ್ಧ್ ರವಿಚಂದರ್, ಮಹೇಶ್ ಬಾಬು ಸೇರಿದಂತೆ ಇನ್ನೂ ಅನೇಕ ಪ್ರಮುಖ ಗಣ್ಯರು ವಿಜಯ್ ಅವರಿಗೆ ಶುಭ ಹಾರೈಸಿದ್ದಾರೆ. ರಾಜಕೀಯ ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆಯೇ ಭರ್ಜರಿ ಜಯ ದಾಖಲಿಸಿದ ವಿಜಯ್ ಅವರ ಸಾಧನೆಯನ್ನು ಇವರೆಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಶೀಘ್ರ ಸರ್ಕಾರ ರಚಿಸುವ ಸಾಧ್ಯತೆ
ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲು ಅಗತ್ಯವಿರುವ 118 ಸ್ಥಾನಗಳ (ಒಟ್ಟು 234 ರಲ್ಲಿ) ಬಹುಮತವನ್ನು ಪಡೆಯಲು ಸ್ವಲ್ಪ ಹಿನ್ನಡೆ ಅನುಭವಿಸಿದೆ. ಅತಿದೊಡ್ಡ ಪಕ್ಷವಾಗಿರುವುದರಿಂದ ರಾಜ್ಯಪಾಲರು ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಸಾಧ್ಯತೆಯಿದೆ. ಅಲ್ಪಮತದ ಸರ್ಕಾರವಾಗಿ ಇದು ಆರಂಭವಾದರೂ ಆಶ್ಚರ್ಯವಿಲ್ಲ.
ಜನ ನಾಯಗನ್ ಚಿತ್ರಕ್ಕೆ ಸಿಗದ ಪ್ರಮಾಣಪತ್ರ
ಪಕ್ಷದ ಮೂಲಗಳ ಪ್ರಕಾರ ಹೊರಗಿನ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವ ವಿಶ್ವಾಸ ತಂಡಕ್ಕಿದೆ. ಪ್ರಸ್ತುತ ಡಿಎಂಕೆ ಮೈತ್ರಿಯಲ್ಲಿರುವ ಕಾಂಗ್ರೆಸ್ (5 ಸ್ಥಾನಗಳು), (ಸಿಪಿಐ - 2 ಸ್ಥಾನಗಳು), ಸಿಪಿಐ(ಎಂ) 2 ಸ್ಥಾನಗಳು ಮತ್ತು (ವಿಸಿಕೆ 2 ಸ್ಥಾನಗಳು) ಪಕ್ಷಗಳು ಬೆಂಬಲ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಮತ್ತೊಂದೆಡೆ ವಿಜಯ್ ನಟನೆಯ ಜನ ನಾಯಗನ್ ಚಿತ್ರವು ಕಾನೂನು ಸಂಘರ್ಷದಲ್ಲಿ ಸಿಲುಕಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಮತ್ತು ಸೆನ್ಸಾರ್ ಮಂಡಳಿ ನಡುವಿನ ವಿವಾದದಿಂದಾಗಿ ಈ ಚಿತ್ರಕ್ಕೆ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ.












Click it and Unblock the Notifications