ಕಾಫಿನಾಡಿನಲ್ಲಿ ಹೊಸವರ್ಷದ ಸಂಭ್ರಮ: ಪ್ರವಾಸಿತಾಣಗಳಲ್ಲಿ ಜನ ಸಾಗರ
ಚಿಕ್ಕಮಗಳೂರು, ಜನವರಿ 2: ಕಳೆದ ಎರಡು ಮೂರು ದಿನಗಳಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಮಾಯಿಸಿದ್ದ ರಾಜ್ಯ-ಹೊರರಾಜ್ಯದ ನಾನಾ ಭಾಗದ ಪ್ರವಾಸಿಗರು, ಭಾನುವಾರ ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ದತ್ತಪೀಠ, ಮಾಣಿಕ್ಯಾಧಾರ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿಯಲ್ಲಿ, ದೇವರಮನೆಗುಡ್ಡ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹೊಸ ವರ್ಷಾಚರಣೆ ಮಾಡಿದ್ದಾರೆ.
ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಎಂದೇ ಜನಪ್ರಿಯತೆ ಪಡೆದಿರುವ ಮುಳ್ಳಯ್ಯನಗಿರಿಗೆ ಎರಡೇ ದಿನದಲ್ಲಿ ಕಾರು,ಬೈಕ್,ಟಿಟಿ ಸೇರಿ ಸುಮಾರು 4,220ರಷ್ಟು ಗಾಡಿಗಳಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 115 ಬೈಕ್, 2,889 ಕಾರು ಹಾಗೂ 245 ಟಿಟಿ ಹಾಗೂ ಮಿನಿ ಬಸ್‌ನಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಶುಕ್ರವಾರ ಸಂಜೆಯೇ ಕಾಫಿನಾಡಿಗೆ ಭೇಟಿ ನೀಡಿದ್ದ ಪ್ರವಾಸಿಗರು, ಶನಿವಾರ ಗಿರಿಪ್ರದೇಶದ ಸುತ್ತಮುತ್ತಲಿನ ಪ್ರವಾಸಿ ತಾಣ ನೋಡಿಕೊಂಡು ಹೋಂಸ್ಟೇ, ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ಹೊಸ ವರ್ಷದ ಆಚರಣೆಯನ್ನ ಮಾಡಿದ್ದರು. ಭಾನುವಾರ ಕೂಡ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿದು ತಮ್ಮ-ತಮ್ಮ ಊರುಗಳಿಗೆ ಹಿಂದುರಿಗಿದ್ದಾರೆ. ಎರಡು ಮೂರು ದಿನ ಪ್ರವಾಸಿಗರಿಂದ ಜಗಮಗಿಸುತ್ತಿದ್ದ ಕಾಫಿನಾಡು ಇಂದಿನಿಂದ ಮತ್ತೆ ಸಹಜ ಸ್ಥಿತಿ ಮರಳಲಿದೆ.

ರೆಸಾರ್ಟ್, ಲಾಡ್ಜ್, ಹೋಮ್‍ಸ್ಟೇ ಹೌಸ್ ಫುಲ್
ಕಾಫಿನಾಡಿನಲ್ಲಿ ನೂತನ ವರ್ಷಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹೊಸವರ್ಷದ ಹಿನ್ನಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸಿದರು. ಶನಿವಾರ ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿದ ಜನರು ಹೊಸವರ್ಷವನ್ನು ಅತ್ಯಂತ ಸಡಗರದಿಂದ ಆಚರಿಸಿದರು. ರಾತ್ರಿ 12ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು.
ನೂತನ ವರ್ಷಾಚರಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಮ್‍ಸ್ಟೇಗಳು ಭರ್ತಿಯಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಣ್ಣ ಸಣ್ಣ ಟೆಂಟ್‍ಗಳನ್ನು ನಿರ್ಮಿಸಲಾಗಿತ್ತು.

ರಾತ್ರಿ 12 ಗಂಟೆಗೆ ಭರ್ಜರಿ ಹೊಸ ವರ್ಷಾಚರಣೆ
ಡಿ.ಜೆ., ಫೈರ್ ಕ್ಯಾಂಪ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶನಿವಾರ ಬೆಳಿಗ್ಗೆ ಕಾಫಿನಾಡಿನತ್ತಾ ಮುಖ ಮಾಡಿದ್ದ ಪ್ರವಾಸಿಗರು ಪ್ರವಾಸಿತಾಣಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದರು. ರಾತ್ರಿ ರೆಸಾರ್ಟ್ ಹೋ ಮ್‍ಸ್ಟೇ, ಹೋಟೆಲ್, ಲಾಡ್ಜ್‍ಗಳಲ್ಲಿ ಡಿ.ಜೆ. ಸದ್ದಿಗೆ ಹೆಜ್ಜೆ ಹಾಕುತ್ತಾ, ಚುಮು ಚುಮು ಚಳಿಯ ನಡುವೆ ಫೈರ್ ಕ್ಯಾಂಪ್‌ನೊಂದಿಗೆ ಸಂಭ್ರಮಿಸಿದರು.
ರಾತ್ರಿ 12 ಗಂಟೆಯಾಗುತ್ತಿದ್ದಂತೆ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮದಿಂದ ಹೊಸವರ್ಷವನ್ನು ಬರ ಮಾಡಿಕೊಂಡರು. ನೂತನ ವರ್ಷಾಚರಣೆ ಹಿನ್ನಲೆಯಲ್ಲಿ ನಗರದಾದ್ಯಂತ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರದ ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್, ಬೊಳರಾಮೇಶ್ವರ ದೇವಸ್ಥಾನ ಸೇರಿದಂತೆ ಮುಖ್ಯ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಕಾಫಿನಾಡಿನಲ್ಲಿ ಎಲ್ಲೆಲ್ಲೂ ಜನಸಾಗರ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ವರ್ಷದಲ್ಲಿ ಕೇವಲ ಪ್ರವಾಸಿ ತಾಣಗಳು ಮಾತ್ರ ಜನರಿಂದ ತುಂಬಿರದೇ, ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು ಹರಿದು ಬಂದಿದೆ. ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶಾರದಾಂಭೆ, ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ದಕ್ಷಿಣ ಕಾಶಿ ಎಂದೇ ಕರೆಸಿಕೊಳ್ಳುವ ಕಳಸದ ಕಳಸೇಶ್ವರ ಸ್ವಾಮಿ ದೇಗುಲಕ್ಕೂ ಪ್ರವಾಸಿಗರ ದಂಡು ಹರಿದು ಬಂದಿದೆ.

ಹೊರನಾಡು, ಶೇಂಗೇರಿಯಲ್ಲಿ ಪ್ರವಾಸಿಗರ ಹಿಂಡು
ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಭಾನುವಾರ ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಾಡಿನ ಅದಿದೇವತೆಗಳಾದ ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಭಾರೀ ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡಿದ್ದರು. ಬೆಂಗಳೂರು, ಮೈಸೂರು ಭಾಗದ ಪ್ರವಾಸಿಗರು ಬೆಳ್ಳಂಬೆಳಗ್ಗೆಯೇ ದೇವರ ದರ್ಶನ ಮಾಡಿಕೊಂಡು ತಮ್ಮ ಊರಿಗೆ ಹಿಂದಿರುಗುವ ವೇಳೆ ಮುಳ್ಳಯ್ಯನಗಿರಿಗೆ ಭೇಟಿ ನೀಡಿ ವಾಪಸಾದರು.












Click it and Unblock the Notifications