ಮೈಸೂರು ದಸರಾ 2023 ಸ್ತಬ್ಧಚಿತ್ರ ಪ್ರದರ್ಶನ: ಕಾಫಿನಾಡಿನ ಸ್ತಬ್ಧಚಿತ್ರಕ್ಕೆ ದೊರೆತ ಪುರಸ್ಕಾರ ಇದು
ಚಿಕ್ಕಮಗಳೂರು, ನವೆಂಬರ್, 01: ವಿಶ್ವವಿಖ್ಯಾತ ಮೈಸೂರು ದಸರಾ 2023ರ ಮೆರವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ವತಿಯಿಂದ ಜಿಲ್ಲೆಯನ್ನು ಪ್ರತಿನಿಧಿಸಿದ "ಬೆಟ್ಟದಿಂದ ಬಟ್ಟಲಿಗೆ" ಶಿರ್ಷಿಕೆಯಲ್ಲಿ ವಿಶ್ವಕರ್ಮ ಆರ್ಟ್ ಕ್ರೀಯೇಶನ್ ಸಂಸ್ಥೆಯು ನಿರ್ಮಾಣ ಮಾಡಿದ ಸ್ಥಬ್ಧಚಿತ್ರವು ರಾಜ್ಯದ ಪ್ರತಿಷ್ಠಿತ ಅತ್ಯತ್ತಮ ಸ್ಥಬ್ದಚಿತ್ರಗಳಲ್ಲಿ ಒಂದಾಗಿ ಆಯ್ಕೆಯಾಗಿದೆ.
ಈ ವರ್ಷದ ಮೈಸೂರು ದಸರದ ಜಂಬೂ ಸವಾರಿಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳು ಸೇರಿದಂತೆ ಸುಮಾರು 49 ಸ್ಥಬ್ಧಚಿತ್ರಗಳು ಬಾಗವಹಿಸಿದ್ದವು. ಅವುಗಳಲ್ಲಿ ಅತ್ಯುತ್ತಮ ಮೂರು ಸ್ತಬ್ಧಚಿತ್ರಗಳನ್ನು ತೀರ್ಪುಗಾರರು ಆಯ್ಕೆ ಮಾಡಿದ್ದು, ಅವುಗಳಲ್ಲಿ ಚಿಕ್ಕಮಗಳೂರಿನ ಸ್ತಬ್ಧಚಿತ್ರವೂ ಒಂದಾಗಿದೆ.

"ಬೆಟ್ಟದಿಂದ ಬಟ್ಟಲಿಗೆ" ಶೀರ್ಷಿಕೆಗೆ ಅನ್ವರ್ಥವಾಗುವಂತೆ ಕಲಾವಿದರು ಜಿಲ್ಲೆಯ ಮಲೆನಾಡಿನ ಪ್ರಾಕೃತಿಕ ಸೊಬಗನ್ನು ಮರುಸೃಷ್ಟಿ ಮಾಡಿದ್ದಾರೆ. ಬೆಟ್ಟದ ತಪ್ಪಲಿನ ಅಡಕೆ ಮರಗಳು, ತೆಂಗಿನ ಮರಗಳು, ಮೆಣಸಿನ ಬಳ್ಳಿ, ಏಲಕ್ಕಿ ಗಿಡಗಳ ಹಸಿರು ಛಾವಣಿಯಡಿಯಲ್ಲಿರುವ ಕಾಫಿ ತೋಟದ ಮನೆಗಳು ಗಮನ ಸೆಳೆದವು.
ಅಲ್ಲಿ ಗೌಡ ಮತ್ತು ಗೌಡತಿ ದಂಪತಿಗಳು ಕಾಫಿಯ ಸಂಸ್ಕರಣ ಕಾರ್ಯವನ್ನು ಮಾಡಿಸುತ್ತಿರುವ, ಕಾರ್ಮಿಕ ಮಹಿಳೆ ಕಣದಲ್ಲಿ ಮೆಣಸನ್ನು ಪ್ರತ್ಯೇಕಿಸುತ್ತಿರುವ ಚಿತ್ರಣ ನಮ್ಮ ಮಲೆನಾಡಿನ ಕೃಷಿಕರ ನಿತ್ಯ ಜೀವನದ ನೈಜತೆಗೆ ಹತ್ತಿರವಾಗಿತ್ತು.
ಕಾಫಿ ಬೀಜಗಳ ರಾಶಿಗಳ ಮಧ್ಯೆ ಸಾಂಪ್ರದಾಯಿಕವಾದ ಕಾಫಿ ಕುಡಿಯುವ ಹಿತ್ತಾಳೆಯ ಬಟ್ಟಲು ಮತ್ತು ಲೋಟ, ಅದರಲ್ಲಿರುವ ಕಾಫಿಯಿಂದ ಹೊಮ್ಮುತ್ತಿರುವ ಬಿಸಿ ಬಿಸಿ ಹಬೆ ನೋಡುಗರಿಗೆ ಕಾಫಿಯನ್ನು ಆಸ್ವಾದಿಸುವ ಆಸೆಯನ್ನು ಹುಟ್ಟಿಸುವಷ್ಟು ಅಮೋಘವಾಗಿತ್ತು.
ಧಾರವಾಡದ ಈ ಸ್ತಬ್ಧಚಿತ್ರ ರಾಜ್ಯಕ್ಕೆ ಪ್ರಥಮ
ಇನ್ನು ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಧಾರವಾಡ ಜಿಲ್ಲೆಯಿಂದ ಪ್ರದರ್ಶನಗೊಂಡ ಧಾರವಾಡ ತಳಿ ಎಮ್ಮೆ, ನಮ್ಮ ಹೆಮ್ಮೆ ಟ್ಯಾಗ್‌ಲೈನ್ ಹೊಂದಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಈ ಪೈಕಿ ಆಕರ್ಷಕ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಡಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆದರೆ ಸ್ತಬ್ಧಚಿತ್ರಕ್ಕೆ ನೀಡಿದ ಧಾರವಾಡ ತಳಿ ಎಮ್ಮೆ, ನಮ್ಮ ಹೆಮ್ಮೆ ಟ್ಯಾಗ್‌ಲೈನ್ ನೋಡುಗರ ಕಣ್ಮನ ಸಳೆಯುವ ಮೂಲಕ ಪ್ರಶಸ್ತಿಗೆ ಭಾಜನವಾಗಿದೆ.
ಧಾರವಾಡ ಜಿಲ್ಲಾ ಪಂಚಾಯತಿಯ ಸುಮಾರು 7.80 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಈ ಸ್ತಬ್ಧಚಿತ್ರವನ್ನು ಜಿ.ಪಂ.ಸಿಇಓ ಸ್ವರೂಪ ಟಿ.ಕೆ. ಅವರು ನೀಡಿದ್ದ ಪರಿಕಲ್ಪನೆ ಹಾಗೂ ವಿಷಯ ವಸ್ತುವಿನ ಆಧಾರದ ಮೇಲೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈ ಕುಸುರಿ ಅಪ್ಪಟ ಗ್ರಾಮೀಣ ಪ್ರತಿಭೆ ಯುವ ಕಲಾವಿದ ಶಶಿಧರ ಗರಗ ಅವರು ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ಸತತ 12 ದಿನಗಳ ಕಾಲ ತಮ್ಮ ಕೈಕಲಾ ಚಳಕದಲ್ಲಿ ನಿರ್ಮಿಸಿದ್ದರು.
ಈ ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪಿಓಪಿ., ಬಿದಿರು, ಬೊಂಬು, ಫ್ಲೈವುಡ್, ಥರ್ಮಾಕೊಲ್ ಮತ್ತು ಪೇಂಟ್ ಬಳಸಿ ಕಲಾವಿದ ತಮ್ಮ ಕೈಯಿಂದ ಸ್ವತಃ ತಯಾರಿಸಿದ್ದರು. ಇದರಲ್ಲಿ ಯಾವುದೇ ಕೃತಕ ರೂಪಕ, ವಸ್ತುಗಳನ್ನು ಬಳಸಿರಲಿಲ್ಲ. ಸಾಹಿತ್ಯ, ಸಂಸ್ಕೃತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು.
ಅಂದುಕೊಂಡಿದ್ದಕ್ಕಿಂತ ಹೆಚ್ಚು ಖುಷಿ ತಂದಿದೆ. ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪೇಡಾ ತಯಾರಿಕೆಗಾಗಿ 175 ವರ್ಷಗಳ ಇತಿಹಾಸವಿದ್ದು, ಧಾರವಾಡ ಪೇಡಾ ಜಿಐ ಟ್ಯಾಗನ್ನು ಹೊಂದಿದೆ. ಇದಲ್ಲದೇ ಧಾರವಾಡ ದೇಸಿ ತಳಿ ಎಮ್ಮೆಗೆ ರಾಷ್ಟ್ರೀಯ ಮನ್ನಣೆ ದೊರೆಕಿದೆ. ಈ ಪ್ರಾಮುಖ್ಯತೆ ಪಡೆದ ರಾಜ್ಯದ ಮೊದಲ ಸ್ಥಳೀಯ ಎಮ್ಮೆಯ ತಳಿ ಇದಾಗಿದೆ. ಈ ಮೂಲಕ ಸ್ಥಳೀಯವಾಗಿ ಧಾರವಾಡಿ ತಳಿ ಎಮ್ಮೆ ಎಂದೇ ಕರೆಯಲ್ಪಡುವ ದೇಸೀಯ ತಳಿಯ ಹಾಲಿನಿಂದ ತಯಾರಿಸಿದ ಖೊವಾ (ಖವಾ) ಮತ್ತು ಸಕ್ಕರೆಯಿಂದ ತಯಾರಿಸುವ ಪೇಡಾ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಮತ್ತು ಆರೋಗ್ಯ ವೃದ್ಧಿಗಾಗಿ ಇದು ಅಗಾಧವಾದ ಕ್ಯಾಲ್ಸಿಯಂ ಕಣಜವಾಗಿದೆ.
ದಿನನಿತ್ಯ ಪೇಡಾ ಉತ್ಪಾದನಾ ಚಟುವಟಿಕೆಯಲ್ಲಿ ಗೌಳಿ ಜನಾಂಗದ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವುದರೊಂದಿಗೆ ಪೇಡಾ ತಯಾರಿಕೆಯು ಧಾರವಾಡ ಜಿಲ್ಲೆಯ ಹೆಮ್ಮೆಯ ಕಿರೀಟವಾಗಿದೆ. ಈ ವಿಷಯ ವಸ್ತುವನ್ನು ಪ್ರಸ್ತುತಪಡಿಸುವ ಸ್ತಬ್ಧಚಿತ್ರವನ್ನು ಈ ಸಲದ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ಈ ಸ್ತಬ್ಧಚಿತ್ರದ ಕಲೆ, ಥೀಮ್, ರೂಪಕ ಪ್ರಸ್ತುತಿ ಪರಿಗಣಿಸಿ, ಪ್ರಥಮ ಬಹುಮಾನ ನೀಡಲಾಗಿದೆ.












Click it and Unblock the Notifications