ಸೌಜನ್ಯಕ್ಕೂ ಕರೆ ಮಾಡದ ಗೃಹ ಸಚಿವರ ಮೇಲೆ ಎಂ.ಪಿ.ಕುಮಾರಸ್ವಾಮಿ ಬೇಸರ
ಚಿಕ್ಕಮಗಳೂರು, ನವೆಂಬರ್ 24: ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ನವೆಂಬರ್ 21ರಂದು ನಡೆದಿತ್ತು.
ಘಟನೆ ನಡೆದು ಒಂದು ವಾರ ಕಳೆಯುತ್ತಾ ಬಂದರೂ ಶಾಸಕ ಎಂ.ಪಿ ಕುಮಾರಸ್ವಾಮಿ ಈ ಘಟನೆಯ ನೋವಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಸಾರ್ವಜನಿಕರಿಂದ ಹಲ್ಲೆಗೊಳಾದ ಆಘಾತದಲ್ಲಿರುವ ಎಂ.ಪಿ ಕುಮಾರಸ್ವಾಮಿ ತಮ್ಮದೇ ಸರ್ಕಾರದ ಗೃಹ ಸಚಿವರ ನಡೆಯಿಂದ ಮತ್ತಷ್ಟು ಬೇಸರಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಸಾಂತ್ವನ ಹೇಳಿದ್ದರೂ ಕೂಡ, ಗೃಹ ಸಚಿವರು ಕ್ಯಾರೇ ಎಂದಿಲ್ಲ ಎನ್ನುವುದು ಎಂ.ಪಿ ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, "ನನ್ನ ಮೇಲೆ ಹಲ್ಲೆ ನಡೆದಿರುವುದು ಸಣ್ಣ ವಿಚಾರವಲ್ಲ. ಹುಚ್ಚು ನಾಯಿಯ್ನು ಅಟ್ಟಿಸಿಕೊಂಡು ಬಂದ ರೀತಿ, ಚಿರತೆ ನಾಡಿಗೆ ಬಂದಾಗ ಹೇಗೆ ಅಟ್ಟಿಸಿಕೊಂಡು ಹೋಗುತ್ತಾರೆ, ದರೋಡೆಕೋರರನ್ನು ಹೇಗೆ ಅಟ್ಟಿಸಿಕೊಂಡು ಹೋಗುತ್ತಾರೆ ರೀತಿ ನಡೆಸಿಕೊಂಡಿದ್ದಾರೆ. ಇದು ಸಣ್ಣ ಘಟನೆಯಲ್ಲ. ನಾನು ಅಂದು ಪ್ರಾಣ ಉಳಿಸಿಕೊಂಡಿರುವುದೇ ಕಷ್ಟದಲ್ಲಿ," ಎಂದು ಬೇಸರ ವ್ಯಕ್ತಪಡಿಸಿದರು.

"ಗೃಹ ಸಚಿವರು ಕನಿಷ್ಟ ಸೌಜನ್ಯಕ್ಕಾದರೂ ಇಲ್ಲಿಯವರೆಗೆ ಒಂದು ಕರೆ ಮಾಡಿಲ್ಲ. ನಾನು ಶಾಸಕನೆನ್ನುವುದನ್ನು ಬಿಟ್ಟು ಬಿಡಿ, ಬಹಳ ವರ್ಷಗಳಿಂದ ಒಬ್ಬ ಸಹೋದ್ಯೋಗಿ ಎಂದು ಸಹ ನನಗೆ ಒಂದು ಕರೆ ಮಾಡಿಲ್ಲ. ಕರೆ ಮಾಡಿ ನನಗೆ ಒಂದು ಸಾಂತ್ವನ ಹೇಳುವ ಕೆಲಸವನ್ನು ಅವರು ಮಾಡಿಲ್ಲ. ಬಹುಶಃ ಅವರ ಮನಸ್ಸಿನಲ್ಲಿ ಯಾವತ್ತಿದ್ದರು ನಾವು ಜನರಿಂದ ಬೈಸಿಕೊಳ್ಳುವ ಹೊಡೆಸಿಕೊಳ್ಳುವ ಜನ ಎಂದು ಭಾವಿಸಿರಬಹುದು. ಇಂತಹ ಒಂದು ಸ್ಥಾನದಲ್ಲಿರುವ ಅವರು, ಗೃಹ ಸಚಿವರು ಎಲ್ಲರ ರಕ್ಷಣೆ ಮಾಡುವ ಸ್ಥಾನದಲ್ಲಿರುವವರು ಒಂದು ಮಾತು ಈ ಬಗ್ಗೆ ಕೇಳಿಲ್ಲ, ನನಗೆ ಈ ಬಗ್ಗೆ ಬೇಸರ ಇದೆ ಎಂದರು.
"ಗೃಹ ಸಚಿವರು ಈ ಬಗ್ಗೆ ಇನ್ನೂ ಮಾತೇ ಆಡಿಲ್ಲ ಎಂದ ಮೇಲೆ ನಾನೇನು ಹೇಳಲು ಸಾಧ್ಯವಿಲ್ಲ. ಆರಗ ಜ್ಞಾನೇಂದ್ರ ಒಬ್ಬ ಗೃಹ ಸಚಿವರಾಗಿ ನನ್ನನ್ನು ಮಾತನಾಡಿಸಿಲ್ಲ ಯಾಕೆ..? ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇಬ್ಬರೂ ನನಗೆ ಸಾಂತ್ವಾನ ಹೇಳಿದ್ದಾರೆ. ಈ ಘಟನೆ ತಪ್ಪು ಎಂದು ಹೇಳಿದ್ದಾರೆ. ನನಗೆ ಶಾಂತಿಯಿಂದ ಇರಲು ಹೇಳಿದ್ದಾರೆ ಎಂದು ಹೇಳಿದರು. ಇನ್ನು ಘಟನೆ ಸಂಬಂಧ ನಾನಿನ್ನೂ ದೂರು ದಾಖಲಿಸಿಲ್ಲ. ಯಾಕೆಂದರೆ ನಾನು ಬರಿ ಕುಮಾರಸ್ವಾಮಿ ಅಲ್ಲ, ನಾನು ಶಾಸಕ ಕುಮಾರಸ್ವಾಮಿ" ಎಂದು ಹೇಳಿದರು.
ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಭಾನುವಾರ(ನವೆಂಬರ್ 20)ರಂದು ರೈತ ಮಹಿಳೆ ಶೋಭಾ (45 ವರ್ಷ) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಕಾಡಾನೆ ದಾಳಿಯಿಂದ ಮಹಿಳೆ ಸಾವು ಖಂಡಿಸಿ ಹುಲ್ಲೇಮನೆ ಕುಂದೂರು ಮತ್ತು ಸುತ್ತಮುತ್ತಲ ಗ್ರಾಮದ ಸಾವಿರಾರು ಜನರು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸುವವರೆಗೆ ಕಾಡಾನೆ ದಾಳಿಯಿಂದ ಮೃತರಾದ ಮಹಿಳೆ ಶವವನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಂ.ಪಿ ಕುಮಾರಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಸ್ಥಳೀಯರು ಶಾಸಕರ ಮೇಲೆ ಹಲ್ಲೆ ನಡೆಸಿದ್ದರು.












Click it and Unblock the Notifications