ತಲೆ ತೆಗೀತಿಯೋ, ನಿನ್ನ ತಾಕತ್ತು ತೋರಿಸು-ಎಸ್‍ಡಿಪಿಐ ಮುಖಂಡನ ವಿರುದ್ಧ ಸಿ.ಟಿ.ರವಿ ಕಿಡಿ
ಚಿಕ್ಕಮಗಳೂರು, ಮಾರ್ಚ್ 28: ಮುಸ್ಲಿಂಮರು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತ ಅಲ್ಲ. ಬಾಲ ಉದ್ದ ಮಾಡಿದರೆ ಬಾಲ ಕಟ್ ಮಾಡುವುದು ಹೇಗೆಂದು ಈ ಸರ್ಕಾರಕ್ಕೆ ಗೊತ್ತು ಎಂದು ಎಸ್‍ಡಿಪಿಐ ಮುಖಂಡನ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.
ನಮ್ಮ ಹಕ್ಕನ್ನು ವಾಪಾಸ್ ಕೊಡದಿದ್ದರೆ ಮುಖ್ಯಮಂತ್ರಿ ಚಡ್ಡಿ ಬಿಚ್ಚಿಸುತ್ತೇವೆ ಎಂದು ಎಸ್‍ಡಿಪಿಐ ಮುಖಂಡನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದೇನು ಹೋಗುತ್ತೋ, ತಲೆ ತೆಗೀತಿಯೋ ನಿನ್ನ ತಾಕತ್ತು ತೋರಿಸು. ನಿಮ್ಮ ತಾಕತ್ತು ತೋರಿಸಿ ಆಮೇಲೆ ನಾವು ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಇದು 1947ರ ಭಾರತವಲ್ಲ, ನೀವು ಮಾಡಿದ್ದೆಲ್ಲವನ್ನು ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವು ಅಲ್ಲ, ನಿಮ್ಮ ಮೇಲಿನ ಪ್ರಕರಣಗಳನ್ನು ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವು ಈಗ ಇಲ್ಲ ಎಂದರು.
ಈಗೀರುವ ಸರ್ಕಾರಕ್ಕೆ ನೀವು ಬಾಲ ಉದ್ದ ಮಾಡಿದರೇ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ. ಬಾಂಬ್ ಹಾಕುವವರ ತಲೆ ಮೇಲೆ ಬಾಂಬ್ ಹಾಕುವ ಸರ್ಕಾರ. ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ ಸರ್ಕಾರ ಎಂದು ತಿರುಗೇಟು ನೀಡಿದರು.
ಎಸ್‍ಡಿಪಿಐ ಹುಟ್ಟಿದ್ದೇ ಕೇರಳದಲ್ಲಿ ಅಲ್ಲಿಯೇ ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಇಲ್ಲ. ಆಂಧ್ರ ಪ್ರದೇಶದಲ್ಲಿ ನೀಡಲಾಗಿತ್ತು. 7 ಜನ ನ್ಯಾಯಾಧೀಶರು ಮೀಸಲಾತಿಯನ್ನು ರದ್ದು ಮಾಡಿದರು. ಕರ್ನಾಟಕದಲ್ಲಿ ಸಂವಿಧಾನ ಬಾಹಿರ ಮೀಸಲಾತಿಯನ್ನು ಯಾರಿಗೂ ಕೊಡುವುದಿಲ್ಲ ಎಂದರು.
ಸಂವಿಧಾನ ಬಾಹಿರವಾಗಿರುವರ ಸಮರ್ಥನೆಗೆ ಯಾರು ನಿಲ್ಲುತ್ತಾರೋ ಅವರು ನಿಲ್ಲಲಿ, ಧಮ್ಕಿ ಹಾಕುವ ತಾಲಿಬಾನ್ ಮಾದರಿ ಇಲ್ಲಿ ನಡೆಯುವುದಿಲ್ಲ. ಆ ಸರ್ಕಾರವು ಈಗ ಇಲ್ಲ. ತಾಲಿಬಾನ್ ಆಡಳಿತವಿರುವ ರಾಜ್ಯವೆಂದು ಭಾವಿಸಿದ್ದರೇ, ಇದು ತಾಲಿಬಾನ್ ಆಡಳಿತದ ರಾಜ್ಯ ಅಲ್ಲ ಎಂದರು.
ಮುಸ್ಲಿಮರು ಹಾಗೂ ಆ ಸಮುದಾಯದ ಎಲ್ಲಾ ಒಳ ಪಂಗಡಗಳನ್ನ ಪ್ರವರ್ಗ 2ಬಿಗೆ ಸೇರಿಸಲಾಗಿತ್ತು. ಈ ಪ್ರವರ್ಗಕ್ಕೆ ಶೇ. 4ರಷ್ಟು ಮೀಸಲಾತಿ ನೀಡಲಾಗಿತ್ತು. ಇದೀಗ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟ 2ಬಿ ಪ್ರವರ್ಗಕ್ಕೆ ಕೊಟ್ಟಿದ್ದ ಮೀಸಲಾತಿಯನ್ನೇ ರದ್ದು ಮಾಡಿದೆ. ಆರ್ಥಿಕ ಹಿಂದುಳಿದ ವರ್ಗಕ್ಕೆ ನೀಡುವ ಶೇ. 10ರಷ್ಟು ಮೀಸಲಾತಿಗೆ ಮುಸ್ಲಿಂ ಸಮುದಾಯವನ್ನೂ ಸೇರ್ಪಡೆ ಮಾಡಲಾಗಿದೆ. ಮುಸ್ಲಿಂ ಸಮುದಾಯದ ಮೀಸಲಾತಿ ಪಾಲನ್ನ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಮುಸ್ಲಿಂ ಸಮುದಾಯ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಎನ್ನುವ ಸುದ್ದಿ ವಿಚಾರವಾಗಿ ಮಾತನಾಡಿದ ಸಿ.ಟಿ ರವಿ, ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಿರುವಾಗ ಹೊಂದಾಣಿಕೆ ಎಲ್ಲಿಂದ, ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಕಳೆದ ಬಾರಿ ಕೂಡ ನಾವು ಯಾವುದೇ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಹೊಂದಾಣಿಕೆಯಾಗಿದರೆ, ಕುಮಾರಸ್ವಾಮಿ ವಿರುದ್ಧ ಸಿ.ಪಿ ಯೋಗೇಶ್ವರ್ ಸ್ಪರ್ಧೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಜೆಡಿಎಸ್ ಅಭ್ಯರ್ಥಿ 32 ಸಾವಿರ ಮತ ತೆಗೆದುಕೊಂಡರು. ಹೊಂದಾಣಿಕೆ ಮಾಡಿದರೆ ಅಷ್ಟು ಮತಗಳ ತೆಗೆದುಕೊಳುತ್ತಿದ್ದರಾ, . ನಮಗೆ ಹೊಂದಾಣಿಕೆ ಅಗತ್ಯವಿಲ್ಲ, ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತದೆ. ನಾವು ಯಾರ ವಿರುದ್ಧ ಅಂತಿಲ್ಲ, ನಾವು ಬಿಜೆಪಿ ಪರ ಅಷ್ಟೇ. ನಮ್ಮದು ವೈಚಾರಿಕ ರಾಜಕೀಯ ಪಕ್ಷ. ನಮ್ಮ ಪಕ್ಷದ ವಿಚಾರವನ್ನು ಬೆಳೆಸುವುದಷ್ಟೇ ನಮ್ಮ ಗುರಿ ನಮ್ಮದು ನಕಾರಾತ್ಮಕ ರಾಜಕೀಯ ಅಲ್ಲ, ಸಕಾರಾತ್ಮಕ ರಾಜಕೀಯ, ಪಕ್ಷ ಬೆಳೆಸುವುದು ಎಂದು ಹೇಳಿದ್ದಾರೆ.











Click it and Unblock the Notifications