ಮಹಿಳೆಯರ ಜೊತೆ ಅಸಭ್ಯ ವರ್ತನೆ: ತರೀಕೆರೆಯಲ್ಲಿ ಚಿನ್ನದಂಗಡಿ ಮಾಲೀಕನಿಗೆ ಮೆಟ್ಟಿನ ಏಟು
ಚಿಕ್ಕಮಗಳೂರು, ಅಕ್ಟೋಬರ್, 17: ಚಿನ್ನದ ಅಂಗಡಿಗೆ ಬರುವ ಮಹಿಳೆ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆ ಅಸಭ್ಯ ವರ್ತನೆ ತೋರಿದ ಚಿನ್ನದಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನಡೆದಿದೆ.
ಅಂಗಡಿ ಬರುವವರ ಜೊತೆ ಅಸಭ್ಯ ವರ್ತನೆ ತೋರಿದ ಚಿನ್ನದ ವ್ಯಾಪಾರಿಗೆ ಧರ್ಮದೇಟು ಬಿದ್ದಿದೆ. ಬಾಲಕಿಯ ತಾಯಿ ಸೇರಿದಂತೆ ಸಾರ್ವಜನಿಕರು ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎಂ.ಜಿ.ರಸ್ತೆಯಲ್ಲಿರುವ ಚಿನ್ನಗಂಗಡಿ ಮಾಲೀಕ ಅಮೀರ್ ಎಂಬ ಚಿನ್ನದ ವ್ಯಾಪಾರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ.

ಅಮೀರ್‌ಗೆ ಬಾಲಕಿಯ ತಾಯಿ ಚಪ್ಪಲಿ ಏಟು ನೀಡಿದ್ದಾರೆ. ಈ ಘಟನೆಯು ನಾಲ್ಕು ದಿನದ ಹಿಂದೆ ನಡೆಡಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಇನ್ನು ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಚಿನ್ನದ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಂಡಕ್ಟರ್‌ಗೆ ಹಿಗ್ಗಮುಗ್ಗಾ ಥಳಿತ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಒಂದಲ್ಲ ಒಂದು ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗಷ್ಟೇ ಮಹಿಳೆಯರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗೆ ಹಿಗ್ಗಮುಗ್ಗಾ ಥಳಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿತ್ತು.
ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪ ಕೇಳಿಬಂದ ಹಿನ್ನೆಲೆ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನೆಹರೂ ವೃತ್ತದಲ್ಲಿ ನಡೆದಿದೆ. ಇನ್ನು ಹಲ್ಲೆಗೊಳಗಾದ ಬಸ್ ನಿರ್ವಾಹಕ ಚಂದ್ರೇಗೌಡ ಎಂದು ತಿಳಿದುಬಂದಿತ್ತು.
ಬಸ್ ಕಂಡಕ್ಟರ್ ಮತ್ತು ಡ್ರೈವರ್ ರಾಯದುರ್ಗ-ಬೆಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ಚಳ್ಳಕೆರೆಯಿಂದ ಇದೇ ಬಸ್‌ನಲ್ಲಿ ಪ್ರಯಾಣಿಸಿದ್ದ ಓರ್ವ ಮಹಿಳೆ ಚಳ್ಳಕೆರೆಯಿಂದ ದಾಬಸ್ ಪೇಟೆಗೆ ಪ್ರಯಾಣಿಸಿದ್ದರಂತೆ. ಬಳಿಕ ದಾಬಸಪೇಟೆ ಬಳಿ ಬಂದಾಗ ಬಸ್ ನಿಲ್ಲಿಸಲು ಮಹಿಳೆ ಹೇಳಿದರೂ, ನಿರ್ವಾಹಕ ಚಂದ್ರೇಗೌಡ ಬಸ್ ನಿಲ್ಲಿಸದೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದಾನೆ. ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದ ಮಹಿಳೆ ಜೊತೆಗೆ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದ.
ಭಯಗೊಂಡ ಮಹಿಳೆ ಕುಟುಂಬದ ಸಂಬಂಧಿಕರಿಗೆ ಘಟನೆ ಬಗ್ಗೆ ತಿಳಿಸಿದ್ದು, ಇಂದು ಮಹಿಳೆಯ ಸಂಬಂಧಿಕರು ಚಳ್ಳಕೆರೆ ಬಸ್ ನಿಲ್ದಾಣದ ಬಳಿ ಬಸ್ ನಿರ್ವಾಹಕನಿಗೆ ಕಾದು ಕುಳಿತಿದ್ದರು. ನಿಲ್ದಾಣಕ್ಕೆ ಬಸ್ ಬಂದ ತಕ್ಷಣವೇ ನಿರ್ವಾಹಕನನ್ನು ಹಿಡಿದು ಮನಸೋಇಚ್ಛೆ ಥಳಿಸಿ ಹಲ್ಲೆ ಮಾಡಿದ್ದರು. ಇನ್ನು ಹಲ್ಲೆಗೊಳಗಾದ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.












Click it and Unblock the Notifications