ಕಚೇರಿಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ: ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸೂಚನೆ
ಚಿಕ್ಕಮಗಳೂರು, ಡಿಸೆಂಬರ್, 28: ಕಚೇರಿಗಳಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಾದಲ್ಲಿ ಕೊರೊನಾ 4ನೇ ಅಲೆಯ ಸೊಂಕು ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವೈದ್ಯರುಗಳೊಂದಿಗೆ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರು,
ಮತ್ತೆ ಕೋವಿಡ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಕಚೇರಿಗಳಲ್ಲೂ ನೌಕರರು ಮಾಸ್ಕ್ ಧರಿಸಬೇಕು. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಸಬೇಕು. ಶಾಲಾ, ಕಲೇಜುಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಆಗಮಿಸಬೇಕು. ಹಾಗೂ ಶಾಲೆಗಳಲ್ಲಿ ಸ್ಯಾನಿಟೈಸರ್ ಬಳಸಬೇಕು ಎಂದು ಸೂಚನೆ ನೀಡಿದರು.
ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚನೆ
ಚಿತ್ರಮಂದಿರ, ಕಲ್ಯಾಣ ಮಂಟಪ ಹಾಗೂ ಹೋಟೆಲ್‌ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಹೊಸ ವರ್ಷಾಚರಣೆಯನ್ನು ರಾತ್ರಿ 1 ಗಂಟೆಯೊಳಗೆ ಮುಗಿಸಬೇಕು. ಹೊಸ ವರ್ಷಾಚರಣೆಯಲ್ಲಿ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ ಎಲ್ಲಾರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಹಾಗೂ ವೈದ್ಯಾಧಿಕಾರಿಗಳು ಮುಂಜಾಗ್ರತೆಯಾಗಿ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕಾಫಿನಾಡಿನಲ್ಲಿ ಪ್ರವಾಸಿಗರ ದಂಡು
ಸಾಲು ರಜೆಗಳಿರುವ ಕಾರಣ ಜನರು ಕುಟುಂಬ ಸಮೇತ ಪ್ರವಾಸ ಹೊರಡುತ್ತಲೇ ಇದ್ದಾರೆ. ಹಾಗೆಯೇ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಎಲ್ಲಿ ನೋಡಿದರೂ ಪ್ರವಾಸಿಗರ ದಂದೇ ಕಾಣುತ್ತದೆ. ಅದರಲ್ಲೂ ವರ್ಷಾಂತ್ಯ ಆಗಿರುವುದರಿಂದ ರಾಜ್ಯದ ಎತ್ತರದ ಪ್ರದೇಶವಾಗಿರುವ ಮುಳ್ಳಯ್ಯನಗಿರಿಗೆ ಪ್ರತಿನಿತ್ಯ ಸಾವಿರಾರು ಜನ ಭೇಟಿ ನೀಡುತ್ತಲೇ ಇದ್ದಾರೆ. ಆದ್ದರಿಂದ ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ಭರ್ತಿಯಾಗಿವೆ.

ಕಾಫಿನಾಡಿನಲ್ಲೇ ಠಿಕಾಣಿ ಹೂಡಿದ ಪ್ರವಾಸಿಗರು
ವರ್ಷಾಂತ್ಯ ಹಾಗೂ ಹೊಸ ವರ್ಷದ ಪ್ರಯುಕ್ತ ಪ್ರವಾಸಿಗರು ಪ್ರಮುಖ ತಾಣಗಳಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ರೊಮ್‌ಗಳನ್ನು ಒಂದು ವಾರದ ಮುಂಚೆಯೇ ಬುಕ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಕಾಫಿನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಜ್ಜಾಗಿದ್ದಾರೆ. ಕ್ರಿಸ್‍ಮಸ್ ಹಿನ್ನೆಲೆ ಕೆಲವರಿಗೆ ವಾರಗಟ್ಟಲೇ ರಜೆ ಇವೆ. ಆದ್ದರಿಂದ ಬಹುತೇಕರು ಈಗಾಗಲೇ ಕಾಫಿನಾಡಿನಲ್ಲಿ ಠಿಕಾಣಿ ಹೂಡಿದ್ದಾರೆ. ಅವರೆಲ್ಲಾ ಇನ್ನೊಂದು ವಾರಗಳ ಕಾಲ ಇಲ್ಲಿನ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಹೊಸವರ್ಷವನ್ನು ಆಚರಿಸಿಯೇ ಹಿಂತಿರುಗುತ್ತಾರೆ ಎಂದು ತಿಳಿದುಬಂದಿದೆ. ಇನ್ನು ಕೆಲವರು ಮಹಾಮಾರಿ ಕೊರೊನಾ 4ನೇ ಅಲೆ ಬಂದರೆ ಕಷ್ಟ ಆಗುತ್ತದೆ. ಅದಕ್ಕಾಗಿಯೇ ಈಗಲೇ ಪ್ರವಾಸಕ್ಕೆ ಬಂದಿದ್ದೇವೆ ಅಂತಿದ್ದಾರೆ.












Click it and Unblock the Notifications