ಮಾಂಡೌಸ್ ಚಂಡಮಾರುತದ ಎಫೆಕ್ಟ್: ಬೆಳೆಗಳು ಜಲಾವೃತ, ಕಾಫಿನಾಡಿನ ಅನ್ನದಾತ ತತ್ತರ
ಚಿಕ್ಕಮಗಳೂರು, ಡಿಸೆಂಬರ್, 15: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಸತತವಾಗಿ ಮಳೆ ಸುರಿದ ಪರಿಣಾಮ ಕಾಫಿ, ಭತ್ತ, ಅಡಿಕೆ ಮೊದಲಾದ ಬೆಳೆಗಳು ನೆಲಕೆಚ್ಚಿ ಹೋಗಿದ್ದು, ಬೆಳೆಗಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.
ಮಾಂಡೌಸ್ ಚಂಡಮಾರುತದ ಎಫೆಕ್ಟ್‌ನಿಂದ ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದೆ. ಜೊತೆಗೆ ಆಗಾಗ್ಗೆ ಜೋರು ಮಳೆ ಕೂಡ ಸುರಿಯುತ್ತಿದೆ. ಇದರ ಪರಿಣಾಮದಿಂದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಹಾಗೆಯೇ ಅಡಿಕೆ, ಕಾಫಿ, ಮೆಣಸು ಬೆಳೆಗಳು ಕೂಡ ನಾಶವಾಗುತ್ತಲೇ ಇವೆ. ಬೆಳೆಗಳನ್ನು ಕಳೆದುಕೊಂಡ ರೈತರು ಅಕ್ಷರಸಃ ತತ್ತರಿಸಿ ಹೋಗಿದ್ದಾರೆ.
ಸಂಪೂರ್ಣವಾಗಿ ಕುಸಿದ ಮನೆ
ಮತ್ತೊಂದೆಡೆ ಭಾರಿ ಗಾಳಿ-ಮಳೆಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದಿದ್ದು, ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ. ಮರ್ಕಲ್ ಗ್ರಾಮದ ಅರೆಕೊಡಿಗೆ ಸಮೀಪದ ಸುಕಲಮಕ್ಕಿ ಗ್ರಾಮದ ನರೇಂದ್ರ ಗೌಡರ ಮನೆ ಸಂಪೂರ್ಣವಾಗಿ ಕುಸಿದಿದೆ. ಸದ್ಯ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಯಾವುದೇ ಅಧಿಕಾರ ನೀಡಬಾರದು
ಇತಿಹಾಸದಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯನ್ನು ಮುಂದುವರೆಸಬೇಕು - ಸಿರಾಜ್ ಹುಸೇನ್ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯನ್ನು ಮುಂದುವರೆಸಬೇಕು. ನೂತನ ಆಡಳಿತ ಮಂಡಳಿಗೆ ಯಾವುದೇ ಅಧಿಕಾರ ನೀಡಬಾರದು. ಒಂದು ವೇಳೆ ನೀಡಬೇಕಿದ್ದರೆ ನ್ಯಾಯಾಲಯದ ಅನುಮತಿ ಪಡೆದು ನೀಡಬೇಕೆಂದು ಆಗ್ರಹಿಸಿ ಹಜರತ್ ದಾದಾ ಹಯಾತ್ ಕಮಿಟಿಯ ಸಿರಾಜ್ ಹುಸೇನ್ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ಹಿಂದಿನ ಪದ್ಧತಿ ಮುಂದುವರೆಸಲು ಒತ್ತಾಯ
ಬುಧವಾರ ಈ ಸಂಬಂಧ ಮನವಿ ಸಲ್ಲಿಸಿದ ಅವರು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸರ್ಕಾರ ರಚಿಸಿರುವ ಆಡಳಿತ ಮಂಡಳಿಯ ನೇತೃತ್ವದಲ್ಲಿ ದತ್ತಜಯಂತಿಯನ್ನು ಆಚರಿಸಲಾಗಿದೆ. ಮೂರು ದಿನ ಕಳೆದ ನಂತರ ಅಲ್ಲಿ ಹಳೆಯ ಪದ್ಧತಿಗೆ ಅವಕಾಶ ನೀಡಬೇಕಿತ್ತು. ಆದರೆ, ಅದಕ್ಕೆ ಅವಕಾಶ ನೀಡಿಲ್ಲ. ಆದ್ದರಿಂದ ಅವರು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು. ಈ ಸಂಬಂಧ ಚಿಕ್ಕಮಗಳೂರಿನಲ್ಲಿರುವ ಮುಖಂಡರು ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿಚಾರದಲ್ಲಿ ನ್ಯಾಯಾಲಯದ ಅಂತಿಮ ತೀರ್ಪು ಪ್ರಕಟವಾಗಿಲ್ಲ. ಆದ್ದರಿಂದ ಈ ಹಿಂದೆ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications