LPG Price Hike: ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆ ಮಾಡುವುದೇ ಮೋದಿಯವರ ಅಚ್ಛೇ ದಿನನಾ?: ಕಾಂಗ್ರೆಸ್ ವಕ್ತಾರ ಪ್ರಶ್ನೆ
ಅಡುಗೆ ಅನಿಲದ ಬೆಲೆ ನಿರಂತರ ಏರಿಕೆಯಾಗುತ್ತಿರುವುದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಚೇ ದಿನ್ ಕೊಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರು, ಮಾರ್ಚ್, 03: ಅಡುಗೆ ಅನಿಲ ಬೆಲೆ ನಿರಂತರ ಏರಿಕೆಯಾಗುತ್ತಿರುವುದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಚೇ ದಿನ್ ಕೊಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ಅಂದರೆ 2013, 2014ರಲ್ಲಿ ಗೃಹ ಬಳಕೆಯ 14.2 ಕೆಜಿಯ ಅಡುಗೆ ಅನಿಲ ಬೆಲೆ ಸಿಲಿಂಡರ್ ಒಂದಕ್ಕೆ 400 ರೂ.ಗಳಿತ್ತು. ನಂತರ ಮೋದಿಯವರು ಅಚ್ಚೇ ದಿನ್ ಬರಲಿದೆ ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿಯ ಸ್ಥಾನ ಅಲಂಕರಿಸಿದ ಆನಂತರದಲ್ಲಿ ಸಿಲಿಂಡರ್ ಬೆಲೆಯನ್ನು ನಿರಂತರವಾಗಿ 600, 700, 800, 900, 1000 ರೂ.ಗಳಂತೆ ಬೆಲೆ ಹೆಚ್ಚಳ ಮಾಡಿದರು.

ಈ ಮೂಲಕ ಇಂದು 2023ರ ಮಾರ್ಚ್ ಆರಂಭದಲ್ಲಿಯೇ 1100 ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಅಚ್ಚೇ ದಿನ್ ಬಂಪರ್ ಕೊಡುಗೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇನ್ನು ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್ ಬೆಲೆ 2020, 2021ರ ಅವಧಿಯಲ್ಲಿ 1917 ರೂ.ಗಳಿಗೆ ದೊರೆಯುತ್ತಿದ್ದದ್ದು. ಎರಡು ವರ್ಷಗಳಲ್ಲಿ 2268 ರೂ.ಗಳಿಗೆ ಏರಿಕೆಯಾಗಿದೆ. 2022ರ ಮಾರ್ಚ್‍ನಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸಿಲಿಂಡರ್ ಬೆಲೆ ಹೆಚ್ಚಳ ತಡೆದಿದ್ದರು.
ಗೃಹ ಬಳಕೆ ಅನಿಲ ಬೆಲೆ ಏರಿಕೆ
ಚುನಾವಣೆಯ ನಂತರ ಅಂದರೆ 2022ರ ಮೇ ತಿಂಗಳಿನಲ್ಲಿ ಒಮ್ಮೆಲೆ 2508 ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ ಸ್ವಲ್ಪ ಪ್ರಮಾಣದಲ್ಲಿ ಕುಗ್ಗಿಸಲಾಗಿತ್ತು. ಈಗ ಸಿಲಿಂಡರ್ ಬೆಲೆಯನ್ನು 350 ರೂಗ.ಳಿಗೆ ಹೆಚ್ಚಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ. 2020ರಲ್ಲಿ ಚುನಾವಣೆ ಸಂದರ್ಭದಲ್ಲಿ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು 581ಕ್ಕೆ ನಿಲ್ಲಿಸಲಾಗಿತ್ತು. ಮೋದಿಯವರು ಮತ್ತೊಮ್ಮೆ ಮರು ಆಯ್ಕೆಯಾಗುವ ಮೂಲಕ 2021, 2022 ಮತ್ತು 2023 ರಲ್ಲಿ ಸಿಲಿಂಡರ್ ಬೆಲೆಯನ್ನು ಗಗನಕ್ಕೆ ಏರಿಸಿ ಅಚ್ಚೇ ದಿನದ ಪರಿಣಾಮವನ್ನು ತೋರಿಸಿದ್ದರು.

ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
ಈಗ ದಿನ ಬಳಕೆಯ 14 ಕೆ.ಜಿ. ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 1100ಕ್ಕೆ ಮತ್ತು ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್ ಬೆಲೆಯನ್ನು 2268ಕ್ಕೆ ಏರಿಸಿ ಅಚ್ಚೇ ದಿನ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ದೇಶದ ಎಲ್ಲಾ ಜನರು ಬಳಸುವ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಗಗನಕ್ಕೇರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನ ವಿರೋಧಿ ನೀತಿಗೆ ಸಾಕ್ಷಿಯಾಗಿವೆ.
ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಏರಿಸಿ ಸಾಮಾನ್ಯ ಜನರ ತಲೆ ಮೇಲೆ ಅತಿಯಾದ ಭಾರವನ್ನು ಹೊರಿಸಲಾಗಿದೆ. ಹೀಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯವೈಖರಿ ದುರಾಡಳಿತಕ್ಕೆ ನಿದರ್ಶನವಾಗಿದೆ ಎಂದು ಹೇಳಿದ್ದಾರೆ. ಜನರ ಬಗ್ಗೆ ಕಳಕಳಿ ಇದ್ದರೆ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ದಿನ ಬಳಕೆಯ ವಸ್ತುಗಳ ಬೆಲೆಯನ್ನು ತಗ್ಗಿಸಬೇಕು. ಈ ಮೂಲಕ ಹೊರೆ ಕಡಿಮೆ ಮಾಡಿ. ಇಲ್ಲದಿದ್ದರೆ ಮುಂಬರಲಿರುವ ಚುನಾವಣೆಯಲ್ಲಿ ಜನರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.












Click it and Unblock the Notifications