ಚಿಕ್ಕಮಗಳೂರು: ಅಬ್ಬಬ್ಬಾ.. ಒಬ್ಬ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಬಳಿ ಇಷ್ಟೊಂದು ಅಕ್ರಮ ಸಂಪತ್ತು!
ಚಿಕ್ಕಮಗಳೂರು, ಜೂನ್, 28: ಇಂದು ಬೆಳ್ಳಬೆಂಳಗ್ಗೆ ಚಿಕ್ಕಮಗಳೂರು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ಅಧಿಕಾರಿ ಗಂಗಾಧರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದೆ. ಈ ವೇಳೆ ಹಲವೆಡೆ ಗಂಗಾಧರ್ ಅವರ ಅಕ್ರಮ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ.
ಗಂಗಾಧರ್ ಅವರು ಚಿಕ್ಕಮಗಳೂರು ನಗರದಲ್ಲಿ 16 ಸೈಟ್, ಅಲ್ಲಂಪುರ ಗ್ರಾಮದ ಬಳಿ 1 ರೆಸಾರ್ಟ್, ಪತ್ನಿ ಹೆಸರಲ್ಲಿ ಒಂದು ಪೆಟ್ರೋಲ್ ಬಂಕ್ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಚಿಕ್ಕಮಗಳೂರು ನಗರದ ಅರವಿಂದ ನಗರ ಹಾಗೂ ಜಯನಗರದಲ್ಲಿ 2 ಮನೆಗಳನ್ನೂ ಸಹ ಹೊಂದಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಇನ್ನು ಚಿನ್ನ-ಬೆಳ್ಳಿ ಬಗ್ಗೆ ಮತ್ತೊಂದು ತಂಡದಿಂದ ಪರಿಶೀಲನೆ ನಡೆಸಿದ್ದು, ಈ ವೇಳೆ ಚಿನ್ನ-ಬೆಳ್ಳಿ ಬಿಟ್ಟು ಒಟ್ಟು 3 ಕೋಟಿ 76 ಲಕ್ಷದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಸದ್ಯ ಇದೀಗ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌ಗಳು
ಶಾಲಾ ಕಟ್ಟಡದ ಬಿಲ್ ಮಂಜೂರು ಮಾಡಲು ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಇಬ್ಬರು ಎಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದ ಸಮೀಪ ಇತ್ತೀಚೆಗಷ್ಟೇ ನಡೆದಿತ್ತು.
ಚಾಮರಾಜನಗರ ಲೋಕಪಯೋಗಿ ಇಲಾಖೆಯ ಎಇಇ ಕೆಂಪರಾಜು ಹಾಗೂ ಎಇ ಲಂಚ ಸ್ವೀಕರಿಸಿದ ಆರೋಪಿಗಳಾಗಿದ್ದಾರೆ. ಚಾಮರಾಜನಗರದ ಗುತ್ತಿಗೆದಾರ ಸುನೀಲ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಬಾಗಳಿ ಗ್ರಾಮದಲ್ಲಿ ನಿರ್ಮಿಸಿದ್ದ ಶಾಲಾ ಕಟ್ಟಡಕ್ಕೆ ಬಿಲ್ ಮಂಜೂರಾತಿ ಮಾಡಲು 30 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅದೇ 30 ಸಾವಿರ ಲಂಚದ ಹಣವನ್ನು ಪಡೆದು ಕಾಲ್ಕಿಳುವಾಗ ಲೋಕಾಯುಕ್ತ ಪೊಲೀಸರು ಹಿಂಬಾಲಿಸಿ ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಇಬ್ಬರೂ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಇನ್ನು ಮೇ 31ರಂದು ಬೆಳಂಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿದ್ದರು. ಹಾಗೆಯೇ ಅಂದೇ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆಸಿತ್ತು. ಬೆಂಗಳೂರು, ತುಮಕೂರು, ಮೈಸೂರು ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.
ಸರ್ಕಾರಿ ಅಧಿಕಾರಿಗಳು ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು ಎಂದು ತಿಳಿದುಬಂದಿತ್ತು.
ತುಮಕೂರಿನ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ನಗರದ ಆರ್.ಟಿ. ನಗರದಲ್ಲಿ ಇರುವ ಮನೆ ಮೇಲೆ ಲೋಕಾಯುಕ್ತ ಡಿಎಸ್‌ಪಿಗಳಾದ ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು ಎಂದು ತಿಳಿದುಬಂದಿತ್ತು. ಹಾಗೆಯೆ ಹಾವೇರಿ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ ನಡೆಸಿದೆ. ಹಾವೇರಿಯ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ್ ಶೇಟ್ಟರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಅಲ್ಲದೆ ರಾಣೆಬೆನ್ನೂರು ನಗರದ ನಿವಾಸ, ಹಾವೇರಿಯ ದೇವಗರಿಯ ಡಿಸಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.












Click it and Unblock the Notifications