ಕಾಫಿ ನಾಡಿನಲ್ಲಿ ಕಬ್ಬೆಕ್ಕುಗಳ ಸರಣಿ ಸಾವು ತಂದ ಆತಂಕ
ಚಿಕ್ಕಮಗಳೂರು, ಜೂನ್ 24: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಬ್ಬೆಕ್ಕುಗಳು (ಕಾಡುಬೆಕ್ಕು) ಸರಣಿಯಾಗಿ ಸಾಯುತ್ತಿದ್ದು, ಮಲೆನಾಡಿಗರು ಈ ಸಂಗತಿಯಿಂದ ಆತಂಕಕ್ಕೀಡಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಹಳೇಕೋಟೆಯ ಹರ್ಷ ಎಂಬುವರ ಕಾಫಿ ತೋಟದಲ್ಲಿ ಕಳೆದ 20 ದಿನಗಳಲ್ಲಿ ಮೂರು ಕಬ್ಬೆಕ್ಕುಗಳು ಸಾವನ್ನಪ್ಪಿವೆ. 20 ದಿನಗಳ ಹಿಂದೆ ಒಂದು ಕಬ್ಬೆಕ್ಕು ಸಾವನ್ನಪ್ಪಿತ್ತು. ಆ ಬಳಿಕ ವಾರದ ಹಿಂದೆ ಮತ್ತೊಂದು ಕಬ್ಬೆಕ್ಕು ಸತ್ತಿತ್ತು.
ಚಿಕ್ಕಮಗಳೂರಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡಿದೆಯಾ?
ಇವತ್ತು ಕೂಡ ಮತ್ತೊಂದು ಕಬ್ಬೆಕ್ಕು ಸಾವನ್ನಪ್ಪಿದ್ದು ಕಾಫಿ ತೋಟದ ಮಾಲೀಕ ಹರ್ಷ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಾಯುವ ಮೊದಲು ಮಂಕಾಗುವ ಕಬ್ಬೆಕ್ಕುಗಳು, ನರಳಾಡಿ ನರಳಾಡಿ ಸಾಯುತ್ತಿವೆ. ಸಾಮಾನ್ಯವಾಗಿ ಕಬ್ಬೆಕ್ಕುಗಳು ಮನುಷ್ಯನ ಕಣ್ಣಿಗೆ ಬೀಳುವುದೇ ಅಪರೂಪ. ಹೀಗಿದ್ದಲ್ಲಿ ಕಾಫಿ ತೋಟದಲ್ಲಿ ಕಬ್ಬೆಕ್ಕುಗಳು ಹೀಗೆ ಒಂದಾದ ಮೇಲೊಂದರಂತೆ ಸಾಯುತ್ತಿರುವುದು ಸ್ಥಳೀಯರಲ್ಲಿ ಭಯ ಮೂಡಿಸಿದೆ.
ಸ್ಥಳಕ್ಕೆ ಬಂದು ಕಬ್ಬೆಕ್ಕಿನ ಮೃತದೇಹವನ್ನು ತೆಗೆದುಕೊಂಡು ಹೋಗಿರುವ ಅರಣ್ಯ ಇಲಾಖೆ ಸಿಬ್ಬಂದಿ, ಪರೀಕ್ಷೆಗೆ ಮುಂದಾಗಿದ್ದಾರೆ. ಕೊರೊನಾದ ಕರಿನೆರಳ ಮಧ್ಯೆ ಕಬ್ಬೆಕ್ಕುಗಳ ಸರಣಿ ಸಾವು ಕಾಫಿನಾಡಿಗರನ್ನು ಆತಂಕಕ್ಕೀಡುಮಾಡಿದೆ.