ಚಿಕ್ಕಮಗಳೂರು: ದತ್ತಪೀಠದ ಶಾಖಾದ್ರಿ ಮೊಹಿದ್ದೀನ್ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪ್ರತ್ಯಕ್ಷ, ಪ್ರಕರಣ ದಾಖಲು
ಚಿಕ್ಕಮಗಳೂರು, ಅಕ್ಟೋಬರ್, 28: ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಅದೇ ರೀತಿ ಇದೀಗ ದತ್ತಪೀಠದ ಶಾಖಾದ್ರಿ ಗೌಸ್ ಮೊಹಿದ್ದೀನ್ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿದ್ದು, ಈ ಸಂಬಂಧ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಕೇಸ್ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಗರದ ಮಾರ್ಕೆಟ್ ರಸ್ತೆಯಲ್ಲಿದ್ದ ಶಾಖಾದ್ರಿ ಗೌಸ್ ಮೊಹಿದ್ದೀನ್ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿದ್ದು, ಕಳೆದ ರಾತ್ರಿ ಎರಡು ಪ್ರಾಣಿಯ ಚರ್ಮವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ವನ್ಯಜೀವಿ ಆಕ್ಟ್‌ನಡಿ ಪ್ರಕರಣ ದಾಖಲು ಮಾಡಿಕೊಂಡು, ಚಿರತೆ ಹಾಗೂ ಜಿಂಕೆ ಚರ್ಮ ಎನ್ನಲಾದ ವಸ್ತುಗಳನ್ನು ಎಫ್.ಎಸ್.ಎಲ್. ವರದಿಗೆ ಕಳುಹಿಸಿದ್ದಾರೆ. ಇನ್ನು ದತ್ತಪೀಠದ ಶಾಖಾದ್ರಿ ಗೌಸ್ ಮೊಹಿದ್ದೀನ್‌ಗೆ ಬಂಧನದ ಭೀತಿ ಎದುರಾಗಿದೆ.

ಇನ್ನು ಈ ಸಂಬಂಧ ಚಿಕ್ಕಮಗಳೂರಿನಲ್ಲಿ ಎಸಿಎಫ್ ಮೋಹನ್ ಪ್ರತಿಕ್ರಿಯೆ ನೀಡಿದ್ದು ಶಾಖಾದ್ರಿ ಗೌಸ್ ಮೊಹಿದ್ದೀನ್ ಮನೆ ಶೋಧ ಮಾಡುವ ವೇಳೆ ಚಿರತೆ ಹಾಗೂ ಜಿಂಕೆ ಚರ್ಮ ಸಿಕ್ಕಿದೆ. ಎರಡು ಪ್ರಾಣಿಗಳ ಚರ್ಮವನ್ನು ವಶಪಡಿಸಿಕೊಂಡಿದ್ದು, ಅವುಗಳನ್ನ ಎಫ್.ಎಸ್.ಎಲ್‌ಗೆ ಕಳುಹಿಸುತ್ತೇವೆ. ಇನ್ನು ಈ ಚರ್ಮ ಎಲ್ಲಿ ಸಿಕ್ತು, ದಾಖಲೆ ಇದ್ದರೆ ನಮಗೆ ಕೊಡಿ ಎಂದು ಶಾಖಾದ್ರಿ ಗೌಸ್ ಮೊಹಿದ್ದೀನ್‌ಗೆ ನೋಟೀಸ್ ನೀಡಿ ತನಿಖೆಗೆ ಹಾಜರಾಗುವಂತೆ ತಿಳಿಸುತ್ತೇವೆ. ಅವರ ಉತ್ತರದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೆಬ್ಬಾಳ್ಕರ್ ಅಳಿಯನ ನಿವಾಸಕ್ಕೆ ಅರಣ್ಯಾಧಿಕಾರಿಗಳ ಭೇಟಿ
ಇನ್ನು ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಕುರಿತಂತೆ ನಿನ್ನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ನಿವಾಸಕ್ಕೆ ಅರಣ್ಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಜತ್ ಉಳ್ಳಾಗಡ್ಡಿಮಠ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಿಗೆ ರಜತ್ ಉಳ್ಳಾಗಡ್ಡಿಮಠ ಸಹಕಾರ ಹಾಗೂ ಅಗತ್ಯ ಮಾಹಿತಿ ನೀಡಿದರು.
ಹುಲಿ ಉಗುರಿನ ಪೆಂಡೆಂಟ್ ಮಾದರಿಯ ಚೈನ್ ಧರಿಸಿದ್ಧ ರಜತ್ ಉಳ್ಳಾಗಡ್ಡಿಮಠ ಅವರ ಪೋಟೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತಿದ್ದಂತೆ ರಜತ್ ಉಳ್ಳಾಗಡ್ಡಿಮಠ ಅವರ ಮನೆಗೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹುಬ್ಬಳ್ಳಿ ಪೊಲೀಸರು ಸಾಥ್ ನೀಡಿದರು.
ನಂತರ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ಅವರು, ರಜತ್ ಅವರ ಬಳಿ ಇರುವ ಪೆಂಡೆಂಟ್ ಮಾದರಿ ಚೈನ್ ಅನ್ನು ಪರಿಶೀಲನೆ ಮಾಡಿದ್ದೇವೆ. ಈಗಾಗಲೇ ಆ ಪೆಂಡೆಂಟ್ ವಶಕ್ಕೆ ತೆಗೆದುಕೊಂಡಿದ್ದೇವೆ. ಹೆಚ್ಚಿನ ತನಿಖೆಗಾಗಿ ಈ ಉಗುರನ್ನು ಎಫ್‌ಎಸ್‌ಐಎಲ್ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ವರದಿ ಬಂದ ನಂತರ ಈ ಕುರಿತು ಸ್ಪಷ್ಟನೆ ಸಿಗಲಿದೆ ಎಂದರು.
ಈ ಬಗ್ಗೆ ವರದಿ ಬರುವುದಕ್ಕೆ ಒಂದು ತಿಂಗಳು ಅವಧಿ ಬೇಕಾಗುತ್ತದೆ. ಒಂದು ವೇಳೆ ಅದು ನಿಜವಾದ ಹುಲಿ ಉಗುರು ಆದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ತನಿಖೆಗೆ ಸಹಕಾರ ನೀಡುವಂತೆ ರಜತ್ ಉಳ್ಳಾಗಡ್ಡಿಮಠ ಅವರಿಗೆ ಸೂಚಿಸಿದ್ದೇವೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್. ತಿಳಿಸಿದ್ದಾರೆ












Click it and Unblock the Notifications