ಮೂಡಿಗೆರೆ: ಸಾರಿಗೆ (KSRTC) ಬಸ್ ಪರ್ಚ್ ಕಟ್, ಪರದಾಡುತ್ತಿದ್ದ ಪ್ರಯಾಣಿಕರ ನೆರವಿಗೆ ಧಾವಿಸಿದ ಮೂಡಿಗೆರೆ ಶಾಸಕಿ
ಚಿಕ್ಕಮಗಳೂರು, ಸೆಪ್ಟೆಂಬರ್, 21: ಓವರ್ ಲೋಡ್‌ನಿಂದ ಸರ್ಕಾರಿ ಬಸ್‌ಮ ಪರ್ಚ್ ಕಟ್ ಆಗಿ ಸರ್ಕಾರಿ ಬಸ್ ರಸ್ತೆ ಮಧ್ಯೆ ನಿಂತು ಪ್ರಯಾಣಿಕರು ಪರದಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ಬುಧವಾರ (ಸೆಪ್ಟೆಂಬರ್ 21) ನಡೆದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಶಾಸಕಿ ನಯನಾ ಮೋಟಮ್ಮ ಪ್ರಯಾಣಿಕರಿಗೆ ಬೇರೆ ಬಸ್ ಕಲ್ಪಿಸುವ ಕೆಲಸವನ್ನು ಮಾಡಿದ್ದಾರೆ.
ಬೆಂಗಳೂರಿನಿಂದ ಹೊರನಾಡಿಗೆ ಹೋಗುತ್ತಿದ್ದ 60 ಸೀಟ್ ಸರ್ಕಾರಿ ಬಸ್‌ನಲ್ಲಿ 110ಕ್ಕೂ ಹೆಚ್ಚು ಜನ ಇದ್ದರು. ಅದರಲ್ಲಿ, ಧಾರ್ಮಿಕ ಕ್ಷೇತ್ರದ ಪ್ರವಾಸಕ್ಕೆ ಬಂದಿದ್ದ ಮಹಿಳೆಯರೇ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ. ಬಸ್ ಘಾಟಿ ರಸ್ತೆಯ ತಿರುವಿನಲ್ಲಿ ಓವರ್ ಲೋಡ್‌ನಿಂದ ಸಂಚರಿಸಲಾಗದೆ ಪರ್ಚ್ (ಬ್ಲೇಡ್) ಕಟ್ ಆಗಿ ಅಲ್ಲೇ ನಿಂತಿದೆ. ಇದರಿಂದ ಹತ್ತಾರು ಮಹಿಳೆಯರು ಇಳಿ ಸಂಜೆಯಲ್ಲಿ ರಸ್ತೆ ಮಧ್ಯೆಯೇ ಕಾಲ ಕಳೆದ ಘಟನೆ ಬುಧವಾರ (ಸೆಪ್ಟೆಂಬರ್ 21) ನಡೆದಿದೆ.

ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್‌ಗಳ ಸಂಖ್ಯೆ ತೀರಾ ಕಡಿಮೆ. ಬೆರಳೆಣಿಕೆಯಷ್ಟು ಬಸ್‌ಗಳಷ್ಟೇ ಇವೆ. ಬೇರೆ-ಬೇರೆ ಭಾಗದಿಂದ ಬಂದು ಕೊಟ್ಟಿಗೆಹಾರದಲ್ಲಿ ಕಾಯುತ್ತಿದ್ದ ಜನ ಬಸ್ ಬರುತ್ತಿದ್ದಂತೆ ತುಂಬಿಕೊಂಡಿದ್ದಾರೆ. ಕೊಟ್ಟಿಗೆಹಾರದಿಂದ ಸಾಕಷ್ಟು ಮಹಿಳೆಯರು ಬಸ್ ಹತ್ತಿದ ಪರಿಣಾಮ ಕೊಟ್ಟಿಗೆಹಾರದಿಂದ 12 ಕಿ.ಮೀ. ದೂರ ಹೋಗುತ್ತಿದ್ದಂತೆ ಬಸ್‌ನ ಪರ್ಚ್ ಕಟ್ ಆಗಿ ಅಲ್ಲೆ ನಿಂತಿದೆ. ಪರಿಣಾಮ ಬೇರೆ ಬಸ್ಸಿಲ್ಲದೆ ಜನ ರಸ್ತೆ ಬದಿ ಕೂತು ಕಾಯುತ್ತಿದ್ದರು.
ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ ರಸ್ತೆ ಬದಿ ಕೂತಿದ್ದ ಮಹಿಳೆಯರ ಕಷ್ಟ ಕೇಳಿ ಕೂಡಲೇ ಕೆ.ಎಸ್.ಆರ್.ಟಿ.ಸಿ. ಡಿಸಿಗೆ ಫೋನ್ ಮಾಡಿ ಕೂಡಲೇ ಬೇರೆ ಬಸ್ ಕಳಿಸುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಬಸ್ ಬರದಿದ್ದರೆ ನನಗೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋಗಿದ್ದಾರೆ.












Click it and Unblock the Notifications