Heart Attack: ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಚಾಲಕನಿಗೆ ಹೃದಯಾಘಾತ, ಸಾವು
ಚಿಕ್ಕಮಗಳೂರು, ಡಿಸೆಂಬರ್ 03: ಕರ್ತವ್ಯದಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಸಗೊಡ್ ಗ್ರಾಮದಲ್ಲಿ ನಡೆದಿದೆ. ಕೊಪ್ಪಳದ ಕೂಕ್ನೂರ್ ಗ್ರಾಮದ ನಿವಾಸಿ ರವಿ ಲಮಾಣಿ (46) ಮೃತ ದುರ್ದೈವಿ.
ರವಿ ಲಮಾಣಿ ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದರು. ಇಂದು ಮೂಡಿಗೆರೆ ತಾಲೂಕಿನ ಮೂಡಿಗೆರೆ, ಗುತ್ತಿಹಳ್ಳಿ , ಹೆಸ್ಗೋಡ್ ಗ್ರಾಮದ ಮಾರ್ಗವಾಗಿ ಹೋಗುವಾಗ ರವಿ ಲಮಾಣಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಬಸ್ ಚಲಾಯಿಸುವಾಗಲೇ ಎದೆ ನೋವು ಹೆಚ್ಚಾಗಿದ್ದು, ಸಮಯಪ್ರಜ್ಞೆ ಮೆರೆದ ರವಿ, ರಸ್ತೆ ಮಧ್ಯೆ ಬಸ್ ನಿಲ್ಲಿಸಿದ್ದಾರೆ.

ಕೂಡಲೇ ಬಸ್‌ನಲ್ಲಿದ್ದ ನಿರ್ವಾಹಕ ಮತ್ತು ಇತರರು ರವಿ ಲಮಾಣಿಯನ್ನು ಸ್ಥಳದಿಂದ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಚಾಲಕ ರವಿ ಲಮಾಣಿ ಸಾವನ್ನಪ್ಪಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅರಣ್ಯ ಇಲಾಖೆಯಿಂದ ಎಡವಟ್ಟು ಕಾಡಾನೆ ಸಾವು
ಚಿಕ್ಕಮಗಳೂರು: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆಯಲ್ಲಿ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಾನೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಭೈರಾಪುರ ಸಮೀಪದ ಮೇಕನಗದ್ದೆಯಲ್ಲಿ ಅರಣ್ಯ ಇಲಾಖೆ ಶನಿವಾರ ಮಧ್ಯರಾತ್ರಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಿದ್ದಾರೆ. ಹೀಗಾಗಿ ಅಧಿಕಾರಿಗಳು ಕಾಡಾನೆಗೆ ಅರವಳಿಕೆ ನೀಡಿದ್ದಾರೆ. ಈ ಅರವಳಿಕೆ ಮಂಪರಿನಲ್ಲಿ ಕಾಡಾನೆ ಗುಡ್ಡದಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ನಡೆದಿದ್ದ ಕಾರ್ಯಾಚರಣೆಯಲ್ಲಿ ಇಟಿಫ್ ಸಿಬ್ಬಂದಿ ಕಾರ್ತಿಕ್ ಮೇಲೆ ದಾಳಿ ಮಾಡಿದ್ದ ಕಾಡಾನೆಗೆ ಸೆರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಶನಿವಾರ ಕಾರ್ಯಚರಣೆ ಆರಂಭಿಸಲಾಗಿತ್ತು. ಆದರೆ ಕಾರ್ಯಾಚರಣೆ ರಾತ್ರಿಯಾದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಒಂಟಿ ಸಲಗ ಸಾವಿಗೆ ಅರಣ್ಯಾಧಿಕಾರಿಗಳೇ ಹೊಣೆ ಎಂದು ಅರಣ್ಯ ಇಲಾಖೆಯ ವಿರುದ್ಧ ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications