BJP candidates list: ಮೂಡಿಗೆರೆ ಬಿಟ್ಟು ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ, ಮಾಹಿತಿ
ಚಿಕ್ಕಮಗಳೂರು, ಏಪ್ರಿಲ್, 12: ಕಾಫಿನಾಡಿನಲ್ಲಿ 2023ರ ವಿಧಾನಸಭಾ ಚುನಾವಣೆ ರಂಗೇರಿದ್ದು, ಈಗಾಗಲೇ ಮೂರು ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳು ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿವೆ. ಅತ್ಯಂತ ಕುತೂಹಲ ಕೆರಳಿಸಿದ್ದ ಬಿಜೆಪಿ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದೆ.
ನಿರೀಕ್ಷೆಯಂತೆ ಬಿಜೆಪಿಯಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸಿ.ಟಿ.ರವಿ, ಕಡೂರು ಕ್ಷೇತ್ರದಿಂದ ಬೆಳ್ಳಿ ಪ್ರಕಾಶ್, ತರೀಕೆರೆ ಕ್ಷೇತ್ರದಿಂದ ಡಿ.ಎಸ್.ಸುರೇಶ್, ಶೃಂಗೇರಿ ಕ್ಷೇತ್ರದಿಂದ ಡಿ.ಎನ್.ಜೀವರಾಜ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಅಧಿಕೃತಗೊಳಿಸಲಾಗಿದೆ.

ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
ಚುನಾವಣೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ಕಾಫಿನಾಡು ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪಕ್ಕಾ ಆಗಿತ್ತು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರು ಪಕ್ಕಾ ಆಗಿತ್ತು. ಶಾಸಕ ಸಿ.ಟಿ.ರವಿ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇದೀಗ ಐದನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಡೂರು ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬೆಳ್ಳಿ ಪ್ರಕಾಶ್, ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಡಿ.ಎಸ್.ಸುರೇಶ್ ಹೆಸರು ಘೋಷಣೆ ಆಗಿದ್ದು, ಬೆಳ್ಳಿ ಪ್ರಕಾಶ್ ಎರಡನೇ ಬಾರಿ ಹಾಗೂ ಡಿ.ಎಸ್.ಸುರೇಶ್ ಮೂರನೇ ಬಾರಿ ಅದೃಷ್ಟ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ
ಇನ್ನು ಮಲೆನಾಡಿನ ವಿದ್ಯಾ ದೇವತೆ ಶಾರದೆ ದೇವಿ ನೆಲಸಿರುವ ಶೃಂಗೇರಿ ಕ್ಷೇತ್ರದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೆಸರು ಘೋಷಣೆ ಯಾಗಿದ್ದು, 2018ರ ಚುನಾವಣೆಯಲ್ಲಿ ಅವರು ಅತ್ಯಂತ ಕಡಿಮೆ ಅಂತರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ವಿರುದ್ಧ ಸೋಲನುಭವಿಸಿದ್ದರು. ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಡಿ.ಎನ್.ಜೀವರಾಜ್ 2018ರಲ್ಲಿ ಸೋಲುಂಡು ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ನಾಲ್ಕು ಕ್ಷೇತ್ರಗಳಲ್ಲಿ ಕಾಫಿನಾಡಿನ ಜನತೆಯ ನಿರೀಕ್ಷೆಯಂತೆ ಅಭ್ಯರ್ಥಿಗಳ ಘೋಷಣೆ ಆಗಿದೆ.
ಬಿಜೆಪಿ ವಲಯದಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದು ಮೂಡಿಗೆರೆ ವಿಧಾನಸಭಾ ಕ್ಷೇತ್ರ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂ.ಪಿ.ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಒಂದು ಬಣ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರೆ, ಮತ್ತೊಂದು ಬಣ ಟಿಕೆಟ್ ಅವರಿಗೆ ನೀಡದಂತೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಪತ್ರ ಅಭಿಯಾನ ನಡೆಸಲಾಗಿತ್ತು. ಹೀಗೆ ಪರ-ವಿರೋಧದ ಹಿನ್ನೆಲೆಯಲ್ಲಿ ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರವನ್ನು ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ.
ಬಾಕಿ ಉಳಿದ ಮೂಡಿಗೆರೆ ಕ್ಷೇತ್ರ
ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ಬಾಕಿ ಉಳಿಸಿಕೊಂಡಿರುವ ಬಿಜೆಪಿ ಕೇಂದ್ರ ನಾಯಕರು, ಮುಂದಿನ ಪಟ್ಟಿಯಲ್ಲಿ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಲಿದ್ದಾರೆ ಅನ್ನುವುದನ್ನು ಕಾದುನೋಡಬೇಕಿದೆ. ಹಾಗೆಯೇ ಇದೀಗ ಎಲ್ಲರ ಚಿತ್ತ ಎರಡನೇ ಪಟ್ಟಿ ಬಿಡುಗಡೆ ಮೇಲೆ ನೆಟ್ಟಿದೆ.
ಬೇಸರಗೊಂಡ ವೈ.ಎಸ್.ವಿ ದತ್ತ
ಹಾಗೆಯೇ ಮತ್ತೊಂದೆಡೆ ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೇಸರಗೊಂಡಿದ್ದ ವೈ.ಎಸ್.ವಿ ದತ್ತ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಟವೆಲ್ ಗುರುತಿನಿಂದ ಸ್ಪರ್ಧೆಗಿಳಿಯುವುದಾಗಿ ಕಡೂರಿನಲ್ಲಿ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಸ್ವತಂತ್ರವಾಗಿ ನಿಲ್ಲುವಂತೆ ಅಭಿಮಾನಿಗಳು ಸೂಚನೆ ನೀಡಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ವೈ.ಎಸ್.ವಿ ದತ್ತ ಅವರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications