ನಮ್ಮಪ್ಪ, ನನ್ನಜ್ಜ, ಅವರಜ್ಜ ಎಲ್ಲರೂ ಹಿಂದೂ, ನಾನೂ ಕೂಡ ಹಿಂದೂ: ಕಾಂತಾರಾ ಸಿನಿಮಾ ಶೈಲಿಯಲ್ಲಿ ಸಿ.ಟಿ.ರವಿಗೆ ಸಿದ್ದು ಡೈಲಾಗ್
ಚಿಕ್ಕಮಗಳೂರು, ಮೇ, 06: ಸಿ.ಟಿ.ರವಿಯವರು ಕೆಲವು ದಿನಗಳ ಹಿಂದಷ್ಟೇ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಟೀಕಿಸಿದ್ದರು. ಇದಕ್ಕೆ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಸಿ.ಟಿ.ರವಿ ನನ್ನನ್ನು ಸಿದ್ರಾಮುಲ್ಲಾಖಾನ್ ಅಂತಾನೆ. ನಮ್ಮಪ್ಪ, ನನ್ನಜ್ಜ, ಅವರಜ್ಜ ಎಲ್ಲರೂ ಹಿಂದೂ, ನಾನೂ ಕೂಡ ಹಿಂದು ಎಂದು ತಿರುಗೇಟು ನೀಡಿದರು. ಇದನ್ನ ಗಮನಿಸಿದರೆ ಕಾಂತಾರ ಸಿನೀಮಾದಲ್ಲಿ ಬಾರ.. ಬಾರ.. ಬ್ಯಾವರ್ಸಿ ಎಂದು ಪೊಲೀಸ್ ಆಗಿ ನಟಿಸಿದ ಕಿಶೋರ್‌ಗೆ ನಟ ರಿಷಭ್ ಶೆಟ್ಟಿ ಡೈಲಾಗ್ ಹೊಡೆದಿರುವುದು ನೆನಪಿಗೆ ಬರುತ್ತದೆ.

ನಾನು ಮಹಾತ್ಮ ಗಾಂಧಿ, ವಿವೇಕನಾಂದ ಹೇಳಿದ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವನಾಗಿದ್ದೇನೆ. ಬಿಜೆಪಿಯವರಿಗೆ ಜಾತಿ-ಧರ್ಮ ವಿಚಾರವನ್ನು ಬಳಸಿಕೊಂಡು ಎತ್ತಿ ಕಟ್ಟುವುದೇ ಕೆಲಸವಾಗಿದೆ. ಹೇಳುವುದು ಮಾತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್. ಆದರೆ ಅವರು ಮಾಡುವುದೆಲ್ಲ ಅನಾಚಾರ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಬಾದಾಮಿಯಿಂದ ಓಡಿ ಹೋಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಬಾದಾಮಿಯಿಂದ ಓಡಿ ಹೋಗಿಲ್ಲ. ಅಲ್ಲಿನ ಜನ ಇಲ್ಲಿ ನಿಲ್ಲಬೇಕು ಅಂತಾ ಮನೆಗೆ ಬಂದು ಕೇಳಿದ್ದರು. ಐದಾರು ಬಾರಿ ಮನೆಗೆ ಬಂದು ಒತ್ತಾಯ ಮಾಡಿದ್ದರು. ಆದರೆ ನಾನು ದೂರ ಆಗುತ್ತದೆ ಅಂತಾ ಅಲ್ಲಿಗೆ ಹೋಗಲಿಲ್ಲ ಎಂದರು.
ಇನ್ನು ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ. ಅವರಿಗೆ ಸಿದ್ಧಾಂತಿಕವಾಗಿ ಎದುರಿಸಲು ಬರುವುದಿಲ್ಲ. ಅದಕ್ಕೆ ಈ ರೀತಿಯ ದಾರಿಯನ್ನು ತುಳಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ
ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ನಾಯಕರ ಪರವಾಗಿ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಹುಬ್ಬಳ್ಳಿಯಯಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ಸಹೋದರ, ಸಹೋದರಿಯರಿಗೆ ನಮಸ್ಕಾರ. ರಾಜ್ಯದ ಭವಿಷ್ಯ ಇನ್ನುಮುಂದೆ ಬದಲಾಗಲಿದೆ ಎಂದರು.
ಕರ್ನಾಟಕದ ಜನರು ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದೀರಿ. ಇಂದಿರಾ ಗಾಂಧಿಯವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನರು ಕೈಹಿಡಿದಿದ್ದರು. ಇದೇ ರೀತಿ 24 ವರ್ಷಗಳ ಹಿಂದೆ ನನಗೂ ಬಳ್ಳಾರಿ ಜನರು ಬೆಂಬಲಿಸಿದ್ದರು. ಈ ಬಾರಿಯೂ ಕರ್ನಾಟಕದ ಅಭಿವೃದ್ಧಿಗಾಗಿ ನೀವು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ತೊಲಗಿಸುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯವರು ದರೋಡೆಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಅವರಿಗೆ ಜನರೇ ಬುದ್ಧಿ ಕಲಸಲಿದ್ದಾರೆ. ಬಿಜೆಪಿಯವರು ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಜೇಬಲ್ಲಿವೆ ಎಂದು ಭಾವಿಸುತ್ತಾರೆ. ಮತ್ತೊಂದೆಡೆ ಬಿಜೆಪಿ ಸೋತರೆ ಜಗಳವಾಗುತ್ತದೆ ಎಂದು ಧಮ್ಕಿ ಹಾಕುತ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಆಶಿರ್ವಾದ ಸಿಗಲ್ಲ ಅಂತಾರೆ. ಆದರೆ ಕರ್ನಾಟಕದ ಜನರನ್ನು ಇಷ್ಟೊಂದು ಕೇವಲವಾಗಿ ಭಾವಿಸಬೇಡಿ. ಕರ್ನಾಟಕದ ಜನರು ಯಾರದ್ದೋ ಆಶಿರ್ವಾದವನ್ನು ಬಯಸುವುದಿಲ್ಲ. ಇಲ್ಲಿನ ಜನರಿಗೆ ತಮ್ಮ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸವಿದೆ. ಇಲ್ಲಿನ ಜನರು ಯಾರಿಗೂ ಹೆದರುವುದಿಲ್ಲ. ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications