ಬಾದಾಮಿಯಿಂದ ಓಡಿ ಹೋದರು; ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಸಿದ್ದರಾಮಯ್ಯ ತಿರುಗೇಟು
ಚಿಕ್ಕಮಗಳೂರು, ಮೇ 6: 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನಕ್ಕೆ ಮೂರೇ ದಿನಗಳು ಬಾಕಿ ಉಳಿದಿದ್ದು, ಇದಕ್ಕೂ ಮುನ್ನ ಮತದಾರರ ಮನಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ಎಲ್ಲ ಸ್ವತಂತ್ರ ಅಭ್ಯರ್ಥಿಗಳು ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಇದೇ ಬುಧವಾರ, ಮೇ 10ರಂದು ನಡೆಯುವ ಮತದಾನದಲ್ಲಿ ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಯಾರು ಅಧಿಕಾರ ನಡೆಸಲಿದ್ದಾರೆ ಎಂಬುದರ ಭವಿಷ್ಯ ಬರೆಯಲಿದ್ದಾರೆ. ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ಯಾರು ಮತದಾರರ ಮನಸ್ಸು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು ಮತ್ತು ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ 2018ರಲ್ಲಿ ಗೆಲ್ಲಿಸಿದ ಬಾದಾಮಿಯಿಂದ ಸಿದ್ದರಾಮಯ್ಯ ಓಡಿ ಹೋಗಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
""ಬಾದಾಮಿಯಿಂದ ನಾನು ಓಡಿಹೋಗಿಲ್ಲ, ನಾನೇ ಬೇಡವೆಂದು ಸ್ಪರ್ಧಿಸಿಲ್ಲ. ಬಾದಾಮಿ ಕ್ಷೇತ್ರದ ಜನರು ನಾನೇ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದರು. ಐದಾರು ಬಾರಿ ನಮ್ಮ ಮನೆ ಬಳಿಗೆ ಬಂದು ಅಗ್ರಹಿಸಿದ್ದರು. ಆದರೆ ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ದೂರವಾಗುತ್ತದೆ ಎಂಬ ಕಾರಣಕ್ಕೆ ನಾನೇ ಸ್ಪರ್ಧೆ ಮಾಡಲಿಲ್ಲ,'' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಜನರ ಭಾವನೆಗಳು ಏನು ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅದೇ ಕಾರಣಕ್ಕೆ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಾದಾಮಿಯಲ್ಲಿ ನರೇಂದ್ರ ಮೋದಿ ಪರೋಕ್ಷವಾಗಿ ಟೀಕಿಸಿದ್ದರು.
ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯರನ್ನು ಇಲ್ಲಿನ ಜನ ಗೆಲ್ಲಿಸಿದರು. ಆದರೆ, ಅವರು ಗೆಲ್ಲಿಸಿದ ಜನರನ್ನು ತಿರಸ್ಕರಿಸಿ ಓಡಿಹೋಗಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು.
ಸಿದ್ದರಾಮಯ್ಯ ಅವರು ಈ ಬಾರಿ ಬಾದಾಮಿಯ ಬದಲಿಗೆ ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇಲ್ಲಿ ಬಿಜೆಪಿಯಿಂದ ವಿ. ಸೋಮಣ್ಣ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.

ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಕೊಲೆ ಮಾಡಲು ಹೇಸುವುದಿಲ್ಲ. ಅವರಿಗೆ ಸೈದ್ಧಾಂತಿಕವಾಗಿ ಎದುರಿಸಲು ಬರಲ್ಲ. ಅದಕ್ಕೆ ಈ ರೀತಿಯ ದಾರಿಯನ್ನು ತುಳಿಯುತ್ತಾರೆ ಎಂದು ಚಿಕ್ಕಮಗಳೂರು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆ ಸಂಚು ಆರೋಪದ ಕುರಿತಾದ ಆಡಿಯೋ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹಾಗೂ ಬಿಜೆಪಿ ಮುಖಂಡ ರವಿ ಎಂಬುವವರು ಮಾತನಾಡಿದ್ದಾರೆನ್ನಲಾದ ಆಡಿಯೋ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಆದರೆ, ಬಿಜೆಪಿ ಪಕ್ಷದ ನಾಯಕರು ಈ ಆಡಿಯೋ ನಕಲಿ ಎಂದು ಹೇಳುತ್ತಿದ್ದಾರೆ. ಇನ್ನು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications