Sringeri constituency; ಚುನಾವಣೆ ಗೆಲುವಿಗೆ ಮೂರು ಪಕ್ಷಗಳ ತಯಾರಿ
ತುಂಗಾ ನದಿಯ ದಂಡೆಯಲ್ಲಿರುವ ವಿದ್ಯಾದೇವತೆ ಶ್ರೀ ಶಾರದಾಂಬೆಯ ನೆಲೆವೀಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ. ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶ. ನಕ್ಸಲರು, ನಕ್ಸಲ್ ನಿಗ್ರಹ ಪಡೆಯ ಗುಂಡಿನ ಸದ್ದು ಜನರು ಕೇಳಿದ್ದು ಇದೆ. ಕೆಲವರು ಶಸ್ತ್ರ ಬಿಟ್ಟು ಶರಣಾಗಿ, ಕೆಲವರು ಎನ್‌ಕೌಂಟರ್‌ನಲ್ಲಿ ಸಾವು ಕಂಡು ನಕ್ಸಲ್ ಚಟುವಟಿಕೆ ರಾಜ್ಯದಲ್ಲಿ ಮುಗಿದ ಅಧ್ಯಾಯವಾಗಿದೆ. ಸರ್ಕಾರ ನಕ್ಸಲ್ ನಿಗ್ರಹ ಪಡೆಯ ಸಂಖ್ಯಾಬಲವನ್ನು ಕಡಿಮೆ ಮಾಡುವತ್ತ ಚಿಂತನೆ ನಡೆಸಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ಮತ್ತು ಚಿಕ್ಕಮಗಳೂರು ತಾಲೂಕಿನ ಸ್ವಲ್ಪ ಭಾಗವನ್ನು ಹೊಂದಿರುವ ಕ್ಷೇತ್ರ. 1952ರಲ್ಲಿ ಪ್ರಥಮ ಚುನಾವಣೆಯಲ್ಲಿ ತೀರ್ಥಹಳ್ಳಿ, ಕೊಪ್ಪ ಕ್ಷೇತ್ರದೊಂದಿಗೆ ಸೇರಿದ್ದ ಶೃಂಗೇರಿಯಲ್ಲಿ ಕಾಂಗ್ರೆಸ್‌ನ ಕಡಿದಾಳ್ ಮಂಜಪ್ಪ ಅವಿರೋಧವಾಗಿ ಆಯ್ಕೆಯಾದರು, ಮುಖ್ಯಮಂತ್ರಿಯಾದರು. 1957ರಲ್ಲಿ ಕೊಪ್ಪ, ಶೃಂಗೇರಿ, ಎನ್. ಆರ್. ಪುರ ಸೇರಿ ಶೃಂಗೇರಿ ಕ್ಷೇತ್ರವಾಯಿತು. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯು ಶೃಂಗೇರಿ ಕ್ಷೇತ್ರಕ್ಕೆ ಸೇರಿದೆ.

14 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್, 3 ಬಾರಿ ಜನತಾಪರಿವಾರ, 3 ಬಾರಿ ಬಿಜೆಪಿ ಗೆದ್ದಿದೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷೇತರರನ್ನು ಹೊರತುಪಡಿಸಿ ಎಲ್ಲಾ ಪಕ್ಷದಂದಲೂ ಒಕ್ಕಲಿಗರೇ ಕಣಕ್ಕಿಳಿಯುತ್ತಿದ್ದಾರೆ. ಸುಮಾರು 36 ಸಾವಿರ ಒಕ್ಕಲಿಗ, 33 ಸಾವಿರ ಬ್ರಾಹ್ಮಣ ಮತಗಳು ಶೃಂಗೇರಿ ಕ್ಷೇತ್ರದಲ್ಲಿವೆ. 2018ರ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿರುವ ಏಕೈಕ ಕ್ಷೇತ್ರವಿದು. ಇಲ್ಲಿ ಯಾವಾಗಲೂ ಬಿಜೆಪಿ ಮತ್ತು ಕಾಂಗ್ರೆಸ್ ಜಿದ್ದಾಜಿದ್ದಿ ನಡೆಯುತ್ತದೆ. ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಎಚ್. ಜಿ. ಗೋವಿಂದೇಗೌಡರ ನೇತೃತ್ವದಲ್ಲಿ ಮೂರು ಬಾರಿ ಗೆಲ್ಲುವ ಮೂಲಕ ಜನತಾದಳ ಜನರ ವಿಶ್ವಾಸಗಳಿಸಿತ್ತು. 2004ರ ಬಳಿಕ ಬಿಜೆಪಿ ವಶಕ್ಕೆ ಕ್ಷೇತ್ರ ಹೋಯಿತು. 2018ರಲ್ಲಿ ಮತ್ತೆ ಕಾಂಗ್ರೆಸ್ ವಶವಾಗಿದೆ ಶೃಂಗೇರಿ.
ಅಧಿಕ ಮಳೆಯಿಂದ ಆಗುವ ಹಾನಿ, ಮೂಲ ಸೌಕರ್ಯಗಳು, ಮಲೆನಾಡು ಕೃಷಿಕರ ಸಮಸ್ಯೆಗಳು, ಅಡಿಕೆ ಕೃಷಿಕರ ಸಮಸ್ಯೆ ಹೀಗೆ ಕ್ಷೇತ್ರದಲ್ಲಿ ಸಮಸ್ಯೆಗಳು ಇವೆ. ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಟಿ. ಡಿ. ರಾಜೇಗೌಡರಿಗೆ ಟಿಕೆಟ್ ಸಿಗುವುದು ಖಚಿವಾಗಿದೆ. ಹಾಗೇನು ಆಕಾಂಕ್ಷಿಗಳು ಇಲ್ಲವೆಂದೇನಲ್ಲ, ಟಿಕೆಟ್ ಬಯಸಿ ಕೆಪಿಸಿಸಿ ಕಚೇರಿಗೆ ಅರ್ಜಿಗಳು ಹೋಗಿವೆ. ಡಾ. ಆರತಿ ಕೃಷ್ಣ, ಬಿ. ಸಿ. ಗೀತಾ ಹಾಗೂ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಆದರೆ ಹಾಲಿ ಶಾಸಕರ ಕೋಟಾದಲ್ಲಿ ಟಿಕೆಟ್ ಸಿಗುವುದು ಖಚಿತ ಎಂದು ಟಿ. ಡಿ. ರಾಜೇಗೌಡರು ಚುನಾವಣೆ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಬಿಜೆಪಿಯಿಂದ ಮಾಜಿ ಶಾಸಕ ಡಿ. ಎನ್. ಜೀವರಾಜ್ ಅಭ್ಯರ್ಥಿಯಾಗುವುದು ಖಚಿತ. ಹಾಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಅಧಿಕಾರ ಇಲ್ಲದಿದ್ದರೂ ಪ್ರಭಾವ ಬಳಸಿ ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೂ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಕೊನೆ ವೇಳೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದರೂ ಹಾಲಿ, ಮಾಜಿ ಸಿಎಂ ಕಾಪಾಡುತ್ತಾರೆ ಎಂಬ ಭರವಸೆ ಜೀವರಾಜ್ ಅವರಲ್ಲಿದೆ. 2018ರ ಚುನಾವಣೆಯಲ್ಲಿ ಪಕ್ಷದೊಳಗಿನ ಒಳಮುನಿಸು ಜೀವರಾಜ್ ಸೋಲಿಗೆ ಕಾರಣವಾಗಿತ್ತು. ಈಗ ಎಲ್ಲರೂ ಸರಿಯಾಗಿದೆಯೇ? ನಾಯಕರೇ ಉತ್ತರ ಕೊಡಬೇಕು.
ಕಾಂಗ್ರೆಸ್ ಮತ್ತು ಬಿಜೆಪಿಗೆ ಟಕ್ಕರ್ ಕೊಡುವಂತೆ ಜೆಡಿಎಸ್ ಚುನಾವಣೆ ಸಿದ್ಧತೆ ಮಾಡುತ್ತಿದೆ. ಶೃಂಗೇರಿ ಶಾರದಾಂಬೆಗೆ ನಮಿಸದೇ ಎಚ್. ಡಿ. ದೇವೇಗೌಡರ ಕುಟುಂಬ ಯಾವುದೇ ಕಾರ್ಯಕ್ರಮ ಆರಂಭಿಸುವುದಿಲ್ಲ. ಬಿಫಾರಂಗಳಿಗೂ ದೇವಾಲಯದಲ್ಲಿ ಪೂಜೆ ನಡೆಯಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಉದ್ಯಮಿ, ಸಮಾಜ ಸೇವಕ ಸುಧಾಕರ್ ಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿದ್ದಾರೆ. ಆರೋಗ್ಯ ಮೇಳ, ಸಮಾಜ ಸೇವೆ ಮೂಲಕ ಗ್ರಾಮೀಣ ಜನರಲ್ಲಿ ಗುರುತಿಸಿಕೊಂಡಿದ್ದಾರೆ. ಯುವಕರ ನೆಚ್ಚಿನ ನಾಯಕ ಎನಿಸಿಕೊಂಡಿದ್ದಾರೆ.
ಚುನಾವಣಾ ಆಯೋಗ ಈ ವರ್ಷ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮತದಾರರನ್ನು ಹೊಂದಿದೆ. ಅಂಕಿ ಅಂಶಗಳ ಪ್ರಕಾರ ಕ್ಷೇತ್ರದ ಮತದಾರರ ಸಂಖ್ಯೆ 1,66,521. ಈ ಬಾರಿಯ ಚುನಾವಣೆಯಲ್ಲಿ ಮತಗಳು ವಿಭಜನೆಯಾದರೆ ಎಂಬ ಆತಂಕ ಮೂರು ಪಕ್ಷದಲ್ಲಿದೆ.












Click it and Unblock the Notifications