ಒಂದೇ ಗಂಟೆಯಲ್ಲಿ 1 ಎಕರೆ ಕಾಫಿತೋಟ ನೆಲಸಮ: ಕಳಸದಲ್ಲಿ ಅರಣ್ಯಾಧಿಕಾರಿಗಳ ದೌರ್ಜನ್ಯ
ಚಿಕ್ಕಮಗಳೂರು, ಸೆಪ್ಟೆಂಬರ್ 25 :40 ವರ್ಷಗಳ ಹಿಂದೆ ಸರ್ಕಾರವೇ ತಾತ್ಕಾಲಿಕ ಸಾಗುವಳಿ ಚೀಟಿ ನೀಡಿದ್ದ ಒಂದು ಎಕರೆ ಜಾಗದಲ್ಲಿ ಕಾಫಿ-ಮೆಣಸು ಬೆಳೆದುಕೊಂಡು ಜೀವನ ಸಾಗಿಸುತ್ತಿದ್ದ ಸಣ್ಣ ಹಾಗೂ ಬಡ ಕುಟುಂಬಗಳ ಮೇಲೆ ಅರಣ್ಯಾಧಿಕಾರಿಗಳು ದೌರ್ಜನ್ಯ-ದಬ್ಬಾಳಿಕೆ ಮೆರೆದಿರುವ ಆರೋಪ ಕೇಳಿಬಂದಿದೆ.
ಮಳೆ, ಕಾಡಾನೆ ಹಾವಳಿಯ ನಡುವೆ ಕಷ್ಟಪಟ್ಟು ಬೆಳೆದಿದ್ದ ಒಂದು ಎಕೆರೆ ಕಾಫಿಯನ್ನು ಅರಣ್ಯ ಅಧಿಕಾರಿಗಳು ಏಕಾಏಕಿ ಕಡಿದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸುಕುನ್ ಕೊಳಲು ಎಂಬ ಗ್ರಾಮದಲ್ಲಿ ನಡೆದಿದೆ.

ಸುಕುನ್ ಕೊಳಲು ಗ್ರಾಮದ ಸೋಮಯ್ಯ ಎಂಬುವರಿಗೆ ಸೇರಿದ ಬೆಳೆದು ನಿಂತಿದ್ದ ಒಂದು ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ಗಂಟೆಯಲ್ಲಿ ಕಡಿದು ನೆಲಸಮ ಮಾಡಿದ್ದಾರೆ. ತೋಟದಲ್ಲಿ ಯಾರು ಇಲ್ಲದಿದ್ದಾಗ ನುಗ್ಗಿದ ಅರಣ್ಯಾಧಿಕಾರಿಗಳು
ಕಾಫಿ, ಮೆಣಸು, ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಮನುಷ್ಯತ್ವವನ್ನು ಮರೆತು ಕಡಿದು ಹಾಕಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಯಾವುದೇ ನೋಟಿಸ್ ನೀಡದೇ, ಮಾಹಿತಿಯನ್ನು ಕೊಡದೆ ಮಕ್ಕಳಂತೆ ಸಾಕಿದ್ದ ಬೆಳೆಯನ್ನು ಕಡಿದು ನಾಶಪಡಿಸಿದ್ದಕ್ಕೆ ಬೆಳೆ ಕಡಿಯುವ ಬದಲು ನಮ್ಮನ್ನೇ ಕಡಿಯಬಹುದಿತ್ತು ಎಂದು ತೋಟದ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

1997ರಲ್ಲಿ ಸ್ಥಳೀಯ ತಹಶೀಲ್ದಾರರು ಸಾಗುವಳಿ ಮಾಡುವಂತೆ ನೀಡಿದ ಜಮೀನು ಇದು. ಆದರೆ, ಒಂದು ಕ್ಷಣ ಯೋಚನೆ ಮಾಡದೆ ಇಡೀ ತೋಟವನ್ನು ಕಡಿದು ಸರ್ವನಾಶ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬಡ ಕುಟುಂಬದ ಕಣ್ಣೀರಿಗೆ ಕಾರಣರಾಗಿದ್ದಾರೆ.
ವರ್ಷಾನುಗಟ್ಟಲೆ ಮಕ್ಕಳಂತೆ ಸಾಕಿ ಸಲಹಿ, ಫಲ ಬಿಡುತ್ತಿದ್ದ ಸಂದರ್ಭದಲ್ಲಿ ಕೊರಳು ಹಿಸುಕಿ ನಾಶ ಮಾಡಿದ್ದಾರೆ ಎಂದು ತೋಟದ ಮಾಲೀಕ ಕಾರ್ಮಿಕ ಮಹಿಳೆ ತೋಟದ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

ಇಡೀ ರಾಜ್ಯದಲ್ಲಿ ಅಕ್ರಮ ಒತ್ತುವರೆಗೆ ಮೊದಲ ಸ್ಥಾನ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಭಾವಿಗಳದ್ದೇ ಮೇಲುಗೈ. ಆದರೆ, ಜೀವನೋಪಾಯಕ್ಕಾಗಿ ಸರ್ಕಾರದಿಂದಲೇ ನೀಡಿದ ಭೂಮಿಯಲ್ಲಿ ತೋಟ ಮಾಡಿದ್ದ ಬಡ ಕುಟುಂಬದ ಒಂದು ಎಕರೆ ಮೇಲೆ ಅರಣ್ಯ ಇಲಾಖೆ ಮಾಡಿರುವ ದೌರ್ಜನ್ಯ ರೈತರನ್ನು ಕಂಗೆಡಿಸಿದೆ. ಇಲ್ಲಿನ ಏಳೆಂಟು ಕುಟುಂಬಗಳು ಸರ್ಕಾರವೇ ಕೊಟ್ಟ ಜಮೀನಿನಲ್ಲಿ ಸಾಗುವಳಿ ಮಾಡಿದ್ದಾರೆ. ಒಂದಿಂಚು ಭೂಮಿಯನ್ನೂ ಒತ್ತುವರಿ ಮಾಡಿಲ್ಲ. ಆದರೆ ಅಧಿಕಾರಿಗಳು ಹೇಳದೆ-ಕೇಳದೆ ಏಕಾಏಕಿ ಬಂದು ಇಡಿ ತೋಟವನ್ನು ಕಡಿದು ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.












Click it and Unblock the Notifications