ಚಿಕ್ಕಮಗಳೂರು: ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ ಎಲ್‌ಎಲ್‌ಸಿ ಭೋಜೇಗೌಡ ಬಹಿರಂಗ ಮತಯಾಚನೆ
ಚಿಕ್ಕಮಗಳೂರು, ಮೇ 1: ಎಚ್ಡಿ ಕುಮಾರಸ್ವಾಮಿ ಆಪ್ತ, ಜೆಡಿಎಸ್ ಮುಖಂಡ ಎಸ್ ಎಲ್ ಭೋಜೇಗೌಡ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯನಿಗೆ ಮತ ಹಾಕುವಂತೆ ಜೆಡಿಎಸ್ ಮುಖಂಡ ಎಸ್ ಎಲ್ ಭೋಜೇಗೌಡ ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಜೆಡಿಎಸ್ ಎಲ್‌ಎಲ್‌ಸಿ ಎಸ್.ಎಲ್ ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಉ ಮುಂದೆ ಕೂತು ಕಾಂಗ್ರೆಸ್ ಪರ ಬಹಿರಂಗ ಪ್ರಚಾರ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಕಾಂಗ್ರೆಸ್ ಪರ ಮತಯಾಚನೆ ಮಾಡಿರುವ ಭೋಜೇಗೌಡ, 'ಶಾಸಕ ಸಿ.ಟಿ. ರವಿ ಸೋಲಿಸಲು ಕಾಂಗ್ರೆಸ್‌ಗೆ ಮತ ಹಾಕಿ. ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಸಾಬರಾಗಿ ಹುಟ್ಟಿ ಎನ್ನುತ್ತಾರೆ. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುತ್ತಾ ಇಷ್ಟುದ್ದ ಬೆಳೆದವನನ್ನು ನೀವು ಸೋಲಿಸಬೇಕು' ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದ್ದರೆ, ಸಿದ್ದರಾಮಯ್ಯನಿಗೆ ಅವಮಾನ ಮಾಡಿದವನಿಗೆ ಬುದ್ಧಿ ಕಲಿಸಿ. ಹಾಲು ಮತದ ಕುಟುಂಬದಲ್ಲಿ ನೀವೆಲ್ಲ ಹುಟ್ಟಿದರೆ ಸಿದ್ದರಾಮಯ್ಯನವರ ಗೌರವ ಉಳಿಸಿ. ಇಲ್ಲ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದು ಚಿಕ್ಕಗೌಜ ಗ್ರಾಮದ ಗ್ರಾಮಸ್ಥರ ಜೊತೆ ಭೋಜೇಗೌಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಜೆಡಿಎಸ್ ಅಭ್ಯರ್ಥಿ ತಿಮ್ಮ ಶೆಟ್ಟಿ ಕಣದಲ್ಲಿದ್ದರೂ ಕೂಡ ಭೊಜೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯನಿಗೆ ಮತ ಹಾಕುವಂತೆ ಬೆಂಬಲ ಸೂಚಿಸಿ ಬಹಿರಂಗ ಪ್ರಚಾರ ಮಾಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಎಸ್.ಎಲ್ ಭೋಜೇಗೌಡ ಅವರು ಎಚ್.ಡಿ ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಭೋಜೇಗೌಡ ಬೆಂಬಲ ಸೂಚಿಸುತ್ತಿರುವುದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಸೋಲಿಸಲು ಕಾಂಗ್ರೆಸ್- ಜೆಡಿಎಸ್ ಒಂದಾಗಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿಕೊಟ್ಟಂತಾಗಿದೆ ಎನ್ನಲಾಗಿದೆ.












Click it and Unblock the Notifications