ಚಿಕ್ಕಮಗಳೂರು ಮಳೆ: ಶೃಂಗೇರಿಗೆ ಹೋಗುವ ಭಕ್ತರಿಗೆ ಸೂಚನೆಗಳು
ಚಿಕ್ಕಮಗಳೂರು, ಜುಲೈ 15: ಮುಂಗಾರು ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್ಭಟಿಸುತ್ತಿದೆ. ಮಳೆ ಹಲವಾರು ಕಡೆ ನಷ್ಟವನ್ನು ಉಂಟು ಮಾಡಿದೆ. ತುಂಗಾ ನದಿ ಅಪಾಯದ ಮಟ್ಟವನ್ನು ಮೀರಿದ್ದು, ಶೃಂಗೇರಿಗೆ ಭೇಟಿ ನೀಡುವ ಭಕ್ತರು, ಪ್ರವಾಸಿಗರಿಗೆ ಕೆಲವು ಸೂಚನೆ ನೀಡಲಾಗಿದೆ.
ಸೋಮವಾರ ಮುಂಜಾನೆಯಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಹಳ್ಳ-ಕೊಳ್ಳ, ಕೆರೆ-ಕಟ್ಟೆ, ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿ ಅಪಾಯದ ಮಟ್ಟವನ್ನು ಮೀರಿದೆ. ಮಳೆಯಿಂದಾಗಿ ಶೃಂಗೇರಿ ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಪಟ್ಟಣದ ಗಾಂಧಿ ಮೈದಾನದ ಪ್ಯಾರೇಲ್ ರಸ್ತೆಗೆ ತುಂಗಾ ನದಿ ನೀರು ನುಗ್ಗಿದೆ. ಅಲ್ಲದೇ ಕ್ಷಣ-ಕ್ಷಣಕ್ಕೂ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
ಶೃಂಗೇರಿ ಪಟ್ಟಣದ ಗಾಂಧಿ ಮೈದಾನವನ್ನು ನದಿ ನೀರು ಆವರಿಸಿದೆ. ಭಾನುವಾರ ರಾತ್ರಿಯಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.
Tunga river on roads in #Sringeri, it is pouring since morning over the catchment. https://t.co/09jQvbGhoj
— Naveen Reddy (@navin_ankampali) July 15, 2024
ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾಯದ ಮಟ್ಟವನ್ನು ಮೀರಿ ತುಂಗಾ ನದಿ ಹರಿಯುತ್ತಿದೆ. ಆದ್ದರಿಂದ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು, ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಳ್ಳುವ ಜನರು ಪ್ರವಾಸ ಮುಂದೂಡಿಕೆ ಮಾಡುವುದು ಉತ್ತಮ.
ಭಕ್ತರಿಗೆ ಸೂಚನೆ: ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿ ಅಪಾಯದ ಮಟ್ಟವನ್ನು ಮೀರಿದೆ. ಆದ್ದರಿಂದ ಶ್ರೀ ಶಾರದಾಂಬೆ ದರ್ಶನಕ್ಕೆ ಹೋಗುವ ಭಕ್ತರು ತುಂಗಾ ನದಿ ಸಮೀಪ ಹೋಗದಂತೆ, ಮಕ್ಕಳು, ವೃದ್ಧರ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ದೇವಾಲಯದ ಸಮೀಪದ ರಸ್ತೆಗೆ ಈಗಾಗಲೇ ತುಂಗಾ ನದಿ ನೀರು ನುಗ್ಗಿದೆ. ಅಲ್ಲದೇ ನಿರಂತರವಾಗಿ ಮಳೆಯಾಗುತ್ತಲೇ ಇರುವುದರಿಂದ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಆದ್ದರಿಂದ ನದಿ ದಂಡೆಯ ಸಮೀಪ ಜನರು ಹೋಗದಂತೆ ಮನವಿ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಚಾರ್ಮಾಡಿ ಕೊಟ್ಟಿಗೆಹಾರ, ಚಿಕ್ಕಮಗಳೂರು ನಗರ, ಕೊಪ್ಪ, ಎನ್ಆರ್ ಪುರ ಭಾಗಗಳಲ್ಲಿ ಜೋರಾದ ಗಾಳಿ ಸಹಿತ ಮಳೆಯಾಗುತ್ತಿದೆ. ಇದರಿಂದಾಗಿ ಹಲವು ಕಡೆ ಮರಗಳು ಬಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಹಲವು ಹಳ್ಳಿಗಳಿಗೆ ಹೋಗುವ ಮಾರ್ಗಗಳು ಬಂದ್ ಆಗಿವೆ.
ಮಳೆ, ಗಾಳಿ ಆರ್ಭಟಕ್ಕೆ ಬೃಹತ್ ಗಾತ್ರದ ಉರುಳಿ ಬಿದ್ದ ಘಟನೆ ಕೊಪ್ಪ ತಾಲೂಕಿನ ಹೆಗ್ಗಾರು ಕುಡಿಗೆ ಸಮೀಪ ನಡೆದಿದೆ. ಬೈಕ್ ಸವಾರೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಕಾರಣ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಎರಡು ಗಂಟೆಗಳಿಂದ ಬಂದ್ ಆಗಿದೆ.
ಸುರಿಯುವ ಮಳೆಯ ನಡುವೆಯೇ ಮರ ತೆರವುಗೊಳಿಸಲು ಹರಸಾಹಸ ಪಡಲಾಗುತ್ತಿದೆ. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಗಾಳಿ, ಮಳೆಗೆ ಮಲೆನಾಡಿನ ಹಲವು ಕಡೆ ಮರ ಬಿದ್ದ ಘಟನೆಗಳು ನಡೆದಿವೆ.












Click it and Unblock the Notifications