ಕಾಫಿನಾಡಿನಲ್ಲಿ ಅಬ್ಬರಿಸಿದ ಬೊಬ್ಬೆರೆದ ಮಳೆರಾಯ, ಚರಂಡಿಯಂತಾದ ರಸ್ತೆಗಳು, ಪರದಾಟ
ಚಿಕ್ಕಮಗಳೂರು, ಮೇ, 25: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ಕೂಡ ವರುಣಾರ್ಭಟ ಮುಂದುವರೆದಿದ್ದು, ಅಬ್ಬರದ ಮಳೆ ಕಂಡು ನಗರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ನಗರದಲ್ಲಿ ಕೇಲವ ಅರ್ಧ ಗಂಟೆಯಿಂದ ಭಾರೀ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲ ನದಿಯಂತೆ ಮಾರ್ಪಟ್ಟಿವೆ. ಇನ್ನು ಕಚೇರಿ, ಜಮೀನುಗಳಿಗೆ ತೆರಳಿದ್ದ ಜನರಂತೂ ದಿಢೀರ್ ಸುರಿದ ಮಳೆಯಿಂದ ಮನೆಗೆ ಹೋಗದಂತೆ ಅರ್ಧ ದಾರಿಯಲ್ಲೇ ಸಿಲುಕಿಕೊಂಡು ಪರದಾಡಿದ ಘಟನೆಯೂ ನಡೆದಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣ ಇದ್ದರೂ ಕೂಡ ಮಳೆ ಆಗಿರಲಿಲ್ಲ. ಆದರೆ ಇಂದು ಮಾತ್ರ ದಿಢೀರನೇ ಆರಂಭವಾದ ಧಾರಾಕಾರ ಮಳೆಗೆ ಜನರು ಕಂಗಾಲಾಗಿದ್ದಾರೆ.

ಮನೆಗಳಿಗೆ ಅಪಾರ ಹಾನಿ
ಈಗಾಗಲೇ ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಿದ್ದು, ಇದರಿಂದ ಹಲವೆಡೆ ಅದೆಷ್ಟೋ ಜನ ಮನೆ, ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ನಿನ್ನೆ ತಡರಾತ್ರಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಮೂರು ಮನೆಗಳಿಗೆ ಅಪಾರ ಹಾನಿಯಾಗಿದೆ. ಇನ್ನು ಮನೆ ಕಳೆದುಕೊಂಡವರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಅದರಲ್ಲೂ ರೈತರಿಗೆ ಈ ಮಳೆ ಸಂತಸ ತಂದಿದ್ದರೆ, ಮತ್ತೆ ಕೆಲವೆಡೆ ಅನಾಹುತಗಳು ಸಹ ಸೃಷ್ಟಿಯಾಗಿವೆ. ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಇದರಿಂದ ಜನ ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಅಗಲೇರಿ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಈ ಹಿನ್ನೆಲೆ ಮೂರು ಮನೆಗಳಿಗೆ ಅಪಾರ ಹಾನಿ ಆಗಿದೆ. ಅಗಲೇರಿ ಮಂಗಳಮ್ಮ, ರತ್ನಮ್ಮ, ರಂಗಣ್ಣ ಎನ್ನುವವರ ಮೂರು ಮನೆಳಿಗೆ ಹಾನಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಳೆಯಿಂದ ಮನೆಯ ಅಂಚು, ಶೀಟ್‌ಗಗೆ ಹಾನಿಯಾಗಿದ್ದು, ಇದರಿಂದ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಆಹಾರ ಸಾಮಗ್ರಿ ಹಾಗೂ ಪೀಠೋಪಕರಣಗಳಿಗೂ ಹಾನಿ ಆಗಿದ್ದು, ಇದರಿಂದ ಮನೆ ಮಾಲೀಕರು ಕಂಗಾಲಾಗಿದ್ದಾರೆ. ಹಾಗೆಯೆ ಜಿಲ್ಲೆಯಲ್ಲಿ ಬೆಳಗ್ಗೆಯಲ್ಲ ಬಿಸಿಲಿನ ವಾತಾವರಣ ಮುಂದುವರೆಯುತ್ತಿದ್ದು, ರಾತ್ರಿ ಆಗುತ್ತಿದಂತೆ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಇಂದು ಸಹ ಜಿಲ್ಲೆಯಲ್ಲಿ ಮಳೆ ಆರ್ಭಟಿಸಲಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೆ ಮಳೆ ಹಾನಿ ಪ್ರದೇಶಕ್ಕೆ ಇದೀಗ ಶಾಸಕ ಹೆಚ್.ಡಿ.ತಮ್ಮಯ್ಯ ಭೇಟಿ ನೀಡಿ, ಹಾನಿಗೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಅಲ್ಲದೆ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡುವಂತೆ ತಹಶೀಲ್ದಾರ್ ಹಾಗೂ ರೆವೆನ್ಯೂ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದರು. ಮತ್ತು ಮನೆಗಳಿಗೆ ತುರ್ತಾಗಿ ಟಾರ್ಪಲ್ ವ್ಯವಸ್ಥೆ ಮಾಡಿವಂತೆ ಪಿಡಿಓಗೆ ಸೂಚಿಸಿದರು.












Click it and Unblock the Notifications