Heavy Rain: ಮಳೆ ಅರ್ಭಟಕ್ಕೆ ಬಾಯಿ ಬಿಟ್ಟ ಭೂಮಿ- ಬದಲಾಯಿತು ಅಡಿಕೆ ತೋಟದ ನೋಟ- ರೈತ ಕಂಗಾಲು!
ಚಿಕ್ಕಮಗಳೂರು ಆಗಸ್ಟ್ 24: ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಇದ್ದಕ್ಕಿದ್ದ ಹಾಗೆ ಅಲ್ಲಲ್ಲಿ ಗುಡ್ಡ ನಿಧಾನವಾಗಿ ಕುಸಿಯುತ್ತಿರುವುದನ್ನು ಕಂಡು ಜನ ಭಯಭೀತರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರೆದಿದ್ದು ದೊಡ್ಡ ಅವಾಂತರವೇ ಸೃಷ್ಟಿ ಮಾಡಿದೆ. ಮಳೆ ಬೀಳುತ್ತಿದ್ದಂತೆ ಮತ್ತೆ ಮತ್ತೆ ತೋಟ ಕುಸಿಯುತ್ತಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ.
ತರೀಕೆರೆ ತಾಲೂಕಿನ ದೂಪದ ಖಾನ್ ಗ್ರಾಮದಲ್ಲಿ ಧಾರಾಕಾರ ಮಳೆಗೆ ನೆನೆದು ಇದ್ದಕ್ಕಿದ್ದ ಹಾಗೆ ಸ್ವಲ್ಪ ಸ್ವಲ್ಪವೇ ಅಡಕೆ ತೋಟ ಕುಸಿಯುತ್ತಿದೆ. ಅಲ್ಲದೆ ತೋಟದಲ್ಲಿ 10-15 ಅಡಿ ಕಂದಕ ಸೃಷ್ಟಿಯಾಗಿದೆ. ಭೂಮಿ ಕುಸಿತದಿಂದ ನೂರಾರು ಅಡಕೆ ಮರಗಳು ನೆಲಕ್ಕುರುಳಿ ಬಿದ್ದಿವೆ. ಗ್ರಾಮದ ಆಶಾ ಕೃಷ್ಣ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ಸಾಕಷ್ಟು ಮರಗಳು ನೆಲಕ್ಕೆ ಉರುಳಿದ್ದು ಇನ್ನಷ್ಟು ಮರಗಳು ಉರುಳಿ ಬೀಳುವ ಆತಂಕ ಎದುರಾಗಿದೆ. ಜೀವನಕ್ಕೆ ಆಧಾರವಾಗಿದ್ದ ತೋಟ ಕಣ್ಣೆದುರು ನಾಶವಾಗುತ್ತಿದ್ದು ಕುಟುಂಬ ಕಂಗಾಲಾಗಿ ಹೋಗಿದೆ.

ವಿಚಿತ್ರವಾಗಿ ಕುಸಿಯುತ್ತಿರುವ ಭೂಮಿ
ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ರಣ ಮಳೆಗೆ ಮಲೆನಾಡಿನ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮಳೆಯಿಂದ ಸೃಷ್ಟಿಯಾದ ಅವಾಂತರಗಳು ಜನರನ್ನು ನಲುಗಿಸಿ ಬಿಟ್ಟಿವೆ. ಮಳೆ ನಿಂತರು ಮಳೆ ಹಾನಿ ನಿಲ್ಲಲ್ಲ ಎಂಬಂತೆ ಜಿಲ್ಲೆಯಲ್ಲಿ ಅವಾಂತರಗಳು ಮಾತ್ರ ಮುಂದುವರಿಯುತ್ತಿವೆ.
ತರೀಕೆರೆ ತಾಲೂಕಿನ ಧೂಪದಖಾನಿನ ಕೃಷ್ಣ ಆಶಾ ಎಂಬುವವರಿಗೆ ಸೇರಿದ ಎರಡುವರೆ ಎಕರೆ ಕೃಷಿ ಅವರಿಗೆ ಸೇರಿದ ಭೂಮಿ ಕಳೆದೊಂದು ವಾರದಿಂದ ಕುಸಿಯುತ್ತಿದ್ದು ಜಮೀನಿನಲ್ಲಿ 15-20 ಅಡಿ ಕಂದಕ ಸೃಷ್ಟಿಯಾಗಿದೆ. ಅಲ್ಲದೇ ಭೂಮಿ ವಿಚಿತ್ರವಾಗಿ ಬಿರುಕು ಬಿಟ್ಟಿರುವ ಪರಿಣಾಮ ಫಸಲು ಬಿಟ್ಟಿದ್ದ ಅಡಿಕೆ ಮರಗಳು ನೆಲಕ್ಕೆ ಉರುಳಿವೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ.

2019ರ ಭೂಕುಸಿತ
2019ರಲ್ಲಿ ಸಂಭವಿಸಿದ ಭೂಕುಸಿತದಿಂದ ಇಡೀ ಮಲೆನಾಡು ತತ್ತರಗೊಂಡಿತ್ತು. ಆಗ ನೆಲೆ ಕಳೆದುಕೊಮಡವರು ಪುನರ್ವಸತಿಗೆ ಇನ್ನೂ ತಡಕಾಡುತ್ತಿದ್ದಾರೆ. ಅದ್ದರಿಂದ ಜೋರು ಮಳೆ ಬಂದರೆ ಜನ ಭಯಪಡುವ ಸ್ಥಿತಿ ಇದೆ. ಹೀಗಾಗಿ ಪ್ರವಾಹ, ಗುಡ್ಡ ಕುಸಿತ ರೀತಿಯ ಅಪಾಯ ಸಂಭವಿಸಬಹುದಾದ ಪ್ರದೇಶಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುತು ಮಾಡಿ ನಿಗಾ ವಹಿಸಿದೆ. ಶೃಂಗೇರಿ ತಾಲ್ಲೂಕಿನಲ್ಲೇ ಅತಿ ಹೆಚ್ಚು 87 ಪ್ರದೇಶಗಳನ್ನು ಗುರುತಿಸಿದ್ದು, ಎನ್,ಆರ್ ಪುರ ತಾಲ್ಲೂಕಿನಲ್ಲಿ 21 ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 17 ಪ್ರದೇಶಗಳನ್ನು ಗುರುತಿಸಲಾಗಿದೆ.
ಕರ್ನಾಟಕದಾದ್ಯಂತ ಇಂದು ಮಳೆ
ಇಂದು ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಆಗಸ್ಟ್ 24 ಶನಿವಾರದಂದು, ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿಗೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದೇಶದ ಎರಡು ತುದಿಗಳಲ್ಲಿ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಶನಿವಾರ ಉತ್ತರ ಭಾರತ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕಡಿಮೆ ಒತ್ತಡದಿಂದಾಗಿ ತ್ರಿಪುರಾದಲ್ಲಿ ಭಾರೀ ಮಳೆಯಾಗಿದ್ದು, ಇದರಿಂದಾಗಿ ರಾಜ್ಯವು ಸಾಕಷ್ಟು ಹಾನಿಯನ್ನು ಎದುರಿಸಬೇಕಾಯಿತು. ಮುಂದಿನ 24 ಗಂಟೆಗಳಲ್ಲಿ ಮಾನ್ಸೂನ್ ಟ್ರಫ್ ಸ್ವಲ್ಪ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಅಲ್ಲಲ್ಲಿ ಮಳೆಯಾಗಬಹುದು.












Click it and Unblock the Notifications