ಒಡೆದಾಳುವ ನೀತಿ ಅನುಸರಿಸಿ ಹುಲಿ ಎನ್ನುತ್ತಿರುವವರು ನಿಜವಾದ ನರಿಗಳು- ಹೆಚ್.ಡಿ.ತಮ್ಮಯ್ಯ
ಚಿಕ್ಕಮಗಳೂರು, ಜೂನ್ 5: ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಗ್ರಂಥಗಳಲ್ಲಿ ಮೋಸ, ವಂಚನೆ ಅಥವಾ ಅನ್ಯಾಯವೆಸಗಿ ಸಮಾಜದಲ್ಲಿ ಬದುಕಿ ಎಂದು ಉಲ್ಲೇಖವಿಲ್ಲ. ಕೆಲವರು ಭಾವನೆಗಳಿಗೆ ಧಕ್ಕೆ ತರುವ ಮೂಲಕ ಒಡೆದಾಳುವ ನೀತಿ ಅನುಸರಿಸಿ ಕ್ಷೇತ್ರದಲ್ಲಿ ಹುಲಿ ಎನ್ನುತ್ತಿರುವವರು ನಿಜವಾದ ನರಿಗಳು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಉಪ್ಪಳ್ಳಿ ಸಮೀಪದ ಶಾದಿಮಹಲ್‌ನ ಉಪ್ಪಳ್ಳಿ ಸರ್ವಧರ್ಮ ನಾಗರೀಕರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಣ ಬಲದಿಂದ ಏನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರೀತಿಯಿಂದ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲಲು ಈ ಚುನಾವಣೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಭಾರತವು ದೇಶವು ಜಾತ್ಯಾತೀತ ದೇಶ. ಎಲ್ಲಾ ಸಮುದಾಯವನ್ನು ಒಗ್ಗೂಡಿಸಿಕೊಂಡು ಹೋಗಲೆಂದೇ ಡಾ.ಬಿ.ಆರ್.ಅಂಬೇಡ್ಕರ್ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಸಂವಿಧಾನ ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ಮರೆತು ಅಧಿಕಾರ ದರ್ಪದಿಂದ ಆಡಳಿತ ನಡೆಸಲು ಮುಂದಾದ ಪರಿಣಾಮ ರಾಜ್ಯದ ಜನತೆ ತಕ್ಕ ಉತ್ತರ ನೀಡಿ ಜಾತ್ಯಾತೀತ ನಿಲುವು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂದರು.
ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಮತದಾರರೊಂದಿಗೆ ಬದ್ಧತೆಯಿಂದ ಒಗ್ಗೂಡಿಕೊಂಡು ಕೆಲಸ ಮಾಡಲು ಮುಂದಾಗಲಾಗುವುದು. ಹಣ ಲೂಟಿ ಮಾಡುವ ಕೆಲಸಗಳಿಗೆ ಕಡಿವಾಣ ಹಾಕಿ ಗುಣಮಟ್ಟದ ಆಡಳಿತ ನೀಡುವ ಗುರಿ ಹೊಂದಲಾಗಿದೆ. ಅದೇ ರೀತಿ ಕೆಲವು ಮಂದಿಗೆ ನಿವೇಶನ ಹಕ್ಕುಪತ್ರ ನೀಡುವಲ್ಲಿ ವಿಳಂಭವಾದ ಹಿನ್ನೆಲೆಯಲ್ಲಿ ಅಂತಹ ಪರಿಗಣನೆಗೆೆ ತೆಗೆದುಕೊಂಡು ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ 'ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅಂಟಿಕೊಂಡಿದ್ದ ದುಷ್ಟಶಕ್ತಿಯನ್ನು ಹೊಡೆದೊಡಿಸಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯನ್ನು ಮರು ಕಳಿಸುವಂತೆ ಕಾಂಗ್ರೆಸ್ ಪಕ್ಷವು ಸಂಕಲ್ಪ ತೊಟ್ಟು ಯಶಸ್ಸು ಕಂಡಿದೆ. ಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿದರೆ ದುಸ್ಥಿತಿ ಕಟ್ಟಿಟ್ಟಬುತ್ತಿ. ಇದನ್ನರಿತು ಮುಂದಿನ ದಿನಗಳಲ್ಲಿ ಧರ್ಮ ಧರ್ಮಗಳ ನಡುವೆ ಕೆಡಕುಂಟು ಮಾಡುವುದನ್ನು ನಿಲ್ಲಿಸಿ ಸೌರ್ಹಾದತೆಯಿಂದ ಎಲ್ಲರೊಂದಿಗೆ ಬಾಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧವಾಗಿ ಬಿಜೆಪಿಯ ಹಲವಾರು ಮುಖಂಡರುಗಳು ಟೀಕೆ, ಟಿಪ್ಪಣೆಗಳನ್ನು ಸುರಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾಯಕರುಗಳು ಪ್ರತಿಯೊಬ್ಬರ ಖಾತೆಗೆ 15 ಲಕ್ಷ, ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸುತ್ತೇವೆ ಎಂದು ಹೇಳಿರುವ ಮಾತುಗಳನ್ನೇಕೆ ಉಳಿಸಿಕೊಳ್ಳುತ್ತಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಘೋಷಿಸಿ ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಿದೆ ಎಂದರು.
ವಿವಿಧ ಧರ್ಮ ಗುರುಗಳಾದ ನಂಜುಂಡಯ್ಯಪ್ಪ, ಇಸ್ಮಾಯಿಲ್ ಉಸ್ತಾದ್ ಹಾಗೂ ಫಾದರ್ ಶಾಂತಯ್ಯ ಮಾತನಾಡಿ, ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದ್ದ ವ್ಯಕ್ತಿಯನ್ನು ಮತದಾರರು ತ್ಯಜಿಸಿ, ಸಹಬಾಳ್ವೆಯೊಂದಿಗೆ ಬದುಕುವ ನಿಟ್ಟಿನಲ್ಲಿ ಪಟತೊಟ್ಟು ತಮ್ಮಯ್ಯ ಅವರನ್ನು ಆಯ್ಕೆಗೊಳಿಸಿದ್ದಾರೆ. ಶಾಸಕ ಎಂದರೆ ಜನಸೇವಕ. ಉತ್ತಮ ಜನಾಡಳಿತ ನೀಡಿದರೆ ಪ್ರತಿಯೊಬ್ಬರ ಹೃದಯದಲ್ಲಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ತಮ್ಮಯ್ಯನವರು ಹೆಚ್ಚು ಅಭಿವೃದ್ದಿ ಕೆಲಸ ಮಾಡಿ ಯಶಸ್ವಿಯಾಗಲಿ ಎಂದು ಶುಭಕೋರಿದರು.












Click it and Unblock the Notifications