ನಮ್ಮ ಹತ್ತಿರ ಯಾವ ನಿಂಬೆಹಣ್ಣು ಇಲ್ಲ, ಯಾವ ದೇವರು ಇಲ್ಲ-ಎಚ್.ಡಿ.ರೇವಣ್ಣ
ನಮ್ಮ ಹತ್ತಿರ ಯಾವ ನಿಂಬೆಹಣ್ಣು ಇಲ್ಲಾ, ಯಾವ ದೇವರು ಇಲ್ಲಾ. ನಮ್ಮ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ, ಈಶ್ವರ ಇವರು ಕಣ್ಣು ಬಿಟ್ಟರೆ ಎಲ್ಲರನ್ನೂ ಭಸ್ಮ ಮಾಡುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಹಾಸನ, ಫೆಬ್ರವರಿ 10: ಈ ಬಾರಿ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ನಿಂಬೆಹಣ್ಣು ವರ್ಕೌಟ್ ಆಗಲ್ಲ ಎನ್ನುವ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್‌ಗೆ ಅವರು ದೊಡ್ಡವರಿದ್ದಾರೆ, ಅವರಿಗೆ ಭಗವಂತ ಒಳ್ಳೆಯದು ಮಾಡಲಿ, ಅವರದ್ದು ಅರವತ್ತು ವರ್ಷದ್ದು ಹಳೆ ಬಸ್ ಇದೆ. ಆ ಹಳೆ ಬಸ್ ಎಲ್ಲೆಲ್ಲೋ ನಿಂತುಕೊಳ್ಳುವುದು ಬೇಡ. ಒಂದು ಹೊಸ ಬಸ್ ತೆಗೆದುಕೊಂಡು ಓಡಾಡಿ ಯಾರ್ಯಾರು ಬೇಕು ಅವರನ್ನು ಕಾಂಗ್ರೆಸ್‌ಗೆ ಹತ್ತಿಸಿಕೊಳ್ಳಲಿ ಎಂದರು.
ಎರಡು ವರ್ಷದಿಂದ ಈ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಮ್ಮ ಹತ್ತಿರ ಯಾವ ನಿಂಬೆಹಣ್ಣು ಇಲ್ಲಾ, ಯಾವ ದೇವರು ಇಲ್ಲಾ. ನಮ್ಮ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ, ಈಶ್ವರ ಇವರು ಕಣ್ಣು ಬಿಟ್ಟರೆ ಎಲ್ಲರನ್ನೂ ಭಸ್ಮ ಮಾಡುತ್ತದೆ. ನಮ್ಮ ಹತ್ರ ಎರಡು ದೇವರು ಇರುವವರೆಗೂ ಯಾರು ಏನು ಮಾಡಲು ಆಗಲ್ಲ. ಇವತ್ತೇನಾದರೂ ನಮಗೆ ರಾಜಕೀಯ ಶಕ್ತಿ ಕೊಟ್ಟಿದ್ದರೆ ಅದು ನಮ್ಮ ದೇವರು. ಜನ ಹಾಗೂ ನಮ್ಮ ದೇವರಿಂದ ನಾವು ಉಳಿದುಕೊಂಡಿದ್ದೇವೆ ಎಂದರು.

ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಲೇವಡಿ
ಶಾಸಕ ಪ್ರೀತಂ ಗೌಡ ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಲೇವಡಿ ಮಾಡಿದ್ದು, ನಾನು 18 ತಿಂಗಳ ಹಿಂದೆ ಹಾಕಿದ್ದ ಸವಾಲಿಗೆ ಇಷ್ಟು ದಿನ ಸಮಯ ತಗೊಂಡು ಈಗ ಪ್ರತಿಕ್ರಿಯಿಸಿದ್ದಾರೆ. 18 ತಿಂಗಳು ಉತ್ತರ ಕೊಡದೆ ಸುಮ್ಮನಿದ್ದರು. ಈಗ ಪಕ್ಷ ತೀರ್ಮಾನ ಮಾಡಿದರೆ ಡೆಲ್ಲಿಯಿಂದಾದರೂ ನಿಲ್ಲುತ್ತೇನೆ ಎಂದಿದ್ದಾರೆ. ದೆಹಲಿ ಅಲ್ಲ. ವಿಧಾನಸಭಾ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿದೆ. ನಾಮಿನೇಷನ್ ಫೈಲ್ ಮಾಡಿ ಆದ ಮೇಲೆ ನನ್ನ ವಿರೋಧಿ ಅಭ್ಯರ್ಥಿ ಯಾರಾಗುತ್ತಾರೆ ಆಗ ಚರ್ಚೆ ಮಾಡೋಣ ಎಂದರು.
ಪ್ರೀತಂಗೌಡ ಸವಾಲು ಸ್ವೀಕಾರ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಲು ನಾನು ಸಿದ್ಧ ಎಂದಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂಗೌಡ, ರೇವಣ್ಣ ನನ್ನ ವಿರುದ್ಧ ಸ್ಪರ್ಧೆ ಮಾಡಿದರೆ ನಾನು ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ನಾನು ನೆನ್ನೆ ಹೇಳಿರುವ ಮಾತಿಗೆ ಇಂದು ಬದ್ಧ, ಇಂದು ಹೇಳಿರುವ ಮಾತಿಗೆ ನಾಳೆಯೂ ಬದ್ಧ ಅದರಲ್ಲಿ ಚರ್ಚೆ ಏನಿದೆ. ಪ್ರೀತಂಗೌಡ ಹೊಸದಾಗಿ ರಾಜಕೀಯ ಮಾಡಿದರೆ ಯೋಚನೆ ಮಾಡಬಹುದಿತ್ತು. ನಾನು ನಿರಂತರವಾಗಿ ಐದು ವರ್ಷದಿಂದ ಹಾಸನ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ. ಅಭಿವೃದ್ಧಿ ಕೂಡ ಮಾಡುತ್ತಿದ್ದೇನೆ ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, ಹಾಸನದಿಂದ ಸ್ಪರ್ಧೆಗೆ ಸಿದ್ಧ ಎಂಬ ರೇವಣ್ಣ ಅವರ ಹೇಳಿಕೆಯನ್ನು ಸ್ವೀಕಾರನೂ ಮಾಡಲ್ಲ, ತಿರಸ್ಕಾರನೂ ಮಾಡಲ್ಲ. ಅವರ ಪಕ್ಷದಲ್ಲಿ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು ಸಂಜೆ ಒಂದು ನಿರ್ಧಾರ ಇರುತ್ತದೆ. ಅವರು ಮೊದಲು ನಿರ್ಧಾರ ಮಾಡಿ ಅಖಾಡಕ್ಕೆ ಬರಲಿ, ಆಮೇಲೆ ಏನೆಂದು ನಾನು ಪರದೆ ಮೇಲೆ ಫಲಿತಾಂಶ ತೋರಿಸುತ್ತೇನೆ ಎಂದರು.
ರೇವಣ್ಣ ಅವರು ಬಹಳ ಶಕ್ತಿವಂತರು, ಪ್ರಧಾನಿ ಆಗಿದ್ದವರ ಕುಟುಂಬದವರು, ಮಾಜಿ ಪ್ರಧಾನಿ ಅವರ ಮಗ, ನಾಲ್ಕು ಬಾರಿ ಸಚಿವರಾಗಿದ್ದವರು. ಒಬ್ಬ ಸಾಮಾನ್ಯ ಶಾಸಕ ಹಾಕಿದ ಸವಾಲಿಗೆ ಉತ್ತರ ಕೊಡಲು 18 ತಿಂಗಳು ತೆಗೆದುಕೊಂಡಿದ್ದಾರೆ. ದೇವಸ್ಥಾನಗಳಿಗೆ ಹೋಗಿ ಬಂದು ಸರ್ವೇ ಮಾಡಿಸಿರಬೇಕು. ಪಾಪ ಅವರಿಗೆ ರಾಜಕೀಯದ ಒತ್ತಡ ಇರುತ್ತದೆ, ಮನೆಯಲ್ಲೂ ಒತ್ತಡ ಜಾಸ್ತಿ ಇರುತ್ತದೆ. ಪಾಪಾ ನಮ್ಮ ರೇವಣ್ಣನ ಪರಿಸ್ಥಿತಿ ನಿಮಗೆ ಅರ್ಥ ಆಗಲ್ಲ. ಎಲ್ಲರೂ ಅವರಿಗೆ ಸ್ವಲ್ಪ ಸ್ಥೈರ್ಯ ತುಂಬಬೇಕು. ಕರ್ನಾಟಕದ ಬಗ್ಗೆ ಮಾತನಾಡಿ, ಹಾಸನದ ಬಗ್ಗೆ ಮಾತನಾಡಿ ಎಂದು ಅವರಿಗೆ ತಿಳಿ ಹೇಳುತ್ತಿರಬೇಕು ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications