ಹಳುವಳ್ಳಿಯ ರಸ್ತೆ ಮಧ್ಯೆ ಎರಡ್ಮೂರು ಬಾರಿ ಕೆಟ್ಟುನಿಂತ ಆ್ಯಂಬುಲೆನ್ಸ್, ತುಂಬು ಗರ್ಭಿಣಿಯ ನರಳಾಟ, ಭುಗಿಲೆದ್ದ ಜನಾಕ್ರೋಶ
ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ದುರಸ್ತಿ ಮಾಡಿಕೊಂಡು ಹೊರಟರೆ ಸ್ವಲ್ಪ ದೂರದಲ್ಲಿ ತಾಂತ್ರಿಕ ದೋಷದಿಂದ ಮತ್ತೆ ನಿಂತಿದ್ದು, ಇದರಿಂದ ಗರ್ಭಿಣಿ ಮಹಿಳೆ ನರಳಾಡಿದ್ದಾಳೆ.
ಚಿಕ್ಕಮಗಳೂರು, ಫೆಬ್ರವರಿ, 13: ಸರ್ಕಾರಿ ಆ್ಯಂಬುಲೆನ್ಸ್ ನಡು ರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ತುಂಬು ಗರ್ಭಿಣಿಯೊಬ್ಬಳು ರಸ್ತೆ ಮಧ್ಯೆ ಸಾವು-ಬದುಕಿನ ಮಧ್ಯೆ ಹೋರಾಡಿದ ಘಟನೆ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಫಿನಾಡಿನಲ್ಲಿ ಸರ್ಕಾರಿ ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಕೆಟ್ಟು ನಿಂತ ಪರಿಣಾಮ ತುಂಬ ಗರ್ಭಿಣಿ ನಡು ರಸ್ತೆಯಲ್ಲಿ ಗಂಟೆಗಟ್ಟಲೆ ನರಳಾಡಿದ್ದಾಳೆ.
ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಶರಣ್ಯ ಎಂಬ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆ್ಯಂಬುಲೆನ್ಸ್ ಕೆಟ್ಟು ನಿಂತಿದೆ. ದುರಸ್ತಿ ಮಾಡಿಕೊಂಡು ಹೊರಟರೆ ಸ್ವಲ್ಪ ದೂರದಲ್ಲಿ ತಾಂತ್ರಿಕ ದೋಷದಿಂದ ಮತ್ತೆ ನಿಂತಿತ್ತು. ಈ ಮಧ್ಯೆ ರಸ್ತೆಯಲ್ಲಿನ ಗುಂಡಿಗೆ ಇಳಿದ ಆ್ಯಂಬುಲೆನ್ಸ್, ಪಂಚರ್ ಕೂಡ ಆಗಿದೆ. ಹೀಗೆ ಎರಡ್ಮೂರು ಬಾರಿ ಕೆಟ್ಟು ನಿಂತ ಆ್ಯಂಬುಲೆನ್ಸ್ ದುರಸ್ತಿಯಾಗುವಷ್ಟರಲ್ಲಿ ಸುಮಾರು 2 ಗಂಟೆಗಳೇ ಕಳೆದಿದೆ.

ತುಂಬು ಗರ್ಭಿಣಿಯ ನರಳಾಟ
ಇದರಿಂದ ತೀವ್ರ ಅಸ್ವಸ್ಥರಾದ ಶರಣ್ಯಳನ್ನು ಕಂಡು ಸ್ಥಳಿಯರು ಬಾಳೆಹೊನ್ನೂರಿಗೆ ಫೋನ್ ಮಾಡಿ ಬೇರೆ ಆ್ಯಂಬುಲೆನ್ಸ್ ಕರೆಸಿದ್ದಾರೆ. ನಂತರ ಆಕೆಯನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಪ್ಪ ಆಸ್ಪತ್ರೆಗೆ ದಾಖಲಾದ ಶರಣ್ಯ ಗಂಡು ಮಗುವಿಗೆ ಜನ್ಮ ನೀಡಿ ತಾಯಿ ಮಗು ಇದೀಗ ಆರೋಗ್ಯವಾಗಿದ್ದಾರೆ. ಜೀವ ಉಳಿಸುವ ಆ್ಯಂಬುಲೆನ್ಸ್‌ಗಳೇ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಜನಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಸ್ತೆ ಮಧ್ಯೆ ಕೆಟ್ಟು ನಿಂತ ಆ್ಯಂಬುಲೆನ್ಸ್
ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಸ್ಟೇರಿಂಗ್ ರಾಡ್ ಕಟ್ಟಾಗಿ ನಿಲ್ಲುತ್ತವೆ ಎಂದರೆ ಅವುಗಳು ಎಷ್ಟು ಹಾಳಾಗಿರಬಹುದು ಎಂದು ಜನಸಾಮಾನ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಬೇರೊಂದು ಆ್ಯಂಬುಲೆನ್ಸ್ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದೆ. ಅದೃಷ್ಟವಶಾತ್ ತಾಯಿ -ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಬೇರೊಂದು ಆ್ಯಂಬುಲೆನ್ಸ್ ಸಿಗದಿದ್ದರೆ ಏನಾದರೂ ಅನಾಹುತ ಸಂಭವಿಸಿದ್ದರೆ ಜವಾಬ್ದಾರಿ ಯಾರೆಂದು ಸ್ಥಳೀಯರು ಸರ್ಕಾರಕ್ಕೆ ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ, ಜನರಿಗೆ ಆಪತ್ತು
ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಈ ಆಂಬುಲೆನ್ಸ್ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಂತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಕೆಟ್ಟು ನಿಂತಿತ್ತು. ಆಗಲೂ ಕೂಡ ಬೇರೊಂದು ಆ್ಯಂಬುಲೆನ್ಸ್‌ನಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸಾಲದಕ್ಕೆ ಈ ಆಂಬುಲೆನ್ಸ್ ಹೊಸದು ಎಂದು ಹೇಳಲಾಗುತ್ತಿದೆ. ಹೊಸ ಆ್ಯಂಬುಲೆನ್ಸ್‌ಗಳು ಹೀಗೆ ಕೆಟ್ಟು ನಿಂತರೆ, ಅದರ ಸಾಮರ್ಥ್ಯದ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ.
ಒಟ್ಟಾರೆ, ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಸ್ಥಿತಿ ಕಂಡು ಜನ ನಗುತ್ತಿದ್ದಾರೆ. ರಾಜಕಾರಣಿಗಳು-ಅಧಿಕಾರಿಗಳು ಆಗಾಗ್ಗೆ ಹೊಸ-ಹೊಸ ಐಶಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಆದರೆ, ಬಡ ಜನರಿಗಾದರೆ ರಸ್ತೆ ಮಧ್ಯೆ ಮೂರ್ನಾಲ್ಕು ಬಾರಿ ಕೆಟ್ಟು ನಿಲ್ಲುವ ಆ್ಯಂಬುಲೆನ್ಸ್‌ಗಳನ್ನು ನೀಡುತ್ತಾರೆ. ಇದು ಯಾವ ಸೀಮೆ ನ್ಯಾಯ. ಇದನ್ನೆಲ್ಲಾ ಕಂಡ ಜನ, ಜನರಿಗಾಗಿ ಸರ್ಕಾರವೋ ಅಥವಾ ಸರ್ಕಾರ-ಅಧಿಕಾರಕ್ಕಾಗಿ ಜನರೋ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತಿವೆ ಎಂದು ಜನರು ಹೇಳುತ್ತಿದ್ದಾರೆ.












Click it and Unblock the Notifications