ಚಿಕ್ಕಮಗಳೂರಿನಲ್ಲಿ ಖಾಸಗಿ ಶಾಲೆಗಳ ದರ್ಬಾರ್; ಈವರೆಗೆ ಬಂದ್ ಆದ ಸರಕಾರಿ ಶಾಲೆಗಳೆಷ್ಟು?
ಚಿಕ್ಕಮಗಳೂರು, ಆಗಸ್ಟ್, 24: ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 2011ರಿಂದ 105 ಕನ್ನಡ ಶಾಲೆಗಳು ಮುಚ್ಚಿವೆ. ಈ ವರ್ಷವೇ 26 ಶಾಲೆಗಳಿಗೆ ಬೀಗ ಹಾಕಿದ್ದಾರೆ. ಸರ್ಕಾರ ಮಧ್ಯಾಹ್ನ ಬಿಸಿಯೂಟ, ಮೊಟ್ಟೆ-ಹಾಲು, ಶೂ-ಸಾಕ್ಸ್ ಜೊತೆಗೆ ಪಬ್ಲಿಕ್ ಶಾಲೆ ಅಂತೆಲ್ಲಾ ಹತ್ತಾರು ಯೋಜನೆಗಳನ್ನ ಜಾರಿಗೆ ತಂದಿದೆ. ಆದರೂ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದಕ್ಕೆ ಹಿಂಜರಿಯುತ್ತಿದ್ದಾರೆ.
ಇದರಿಂದ ಕಾಫಿನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡುತ್ತಿರುವುದರಿಂದಲೇ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬಂದಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಡಿಡಿಪಿಐ ಮಾತ್ರ ನಾವು ಯಾವುದೇ ಶಾಲೆಯನ್ನು ಮುಚ್ಚಿಲ್ಲ. 1 ಮಗುವಿದ್ದರೂ ಶಾಲೆ ನಡೆಸುತ್ತೇವೆ. ಪೋಷಕರ ಇಂಗ್ಲೀಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗಳು ಮುಚ್ಚುತ್ತಿವೆ ಎಂದು ಹೇಳುತ್ತಿದ್ದಾರೆ.
ಪ್ರಸ್ತುತ 105 ಶಾಲೆಗಳ ಸ್ಥಿತಿಗತಿ ಅದೋಗತಿಗೆ ತಲುಪಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಸುಸಜ್ಜಿತ ಶಾಲಾ ಪರಿಸರ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಸುಸಜ್ಜಿತ ಅಡುಗೆ ಮನೆಗಳು, ಶೌಚಾಲಯಗಳ ಕಟ್ಟಡಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಪಾಳು ಬಿದ್ದಿವೆ. ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುವುದರಲ್ಲಿ ಸರ್ಕಾರದ ಪಾತ್ರವೂ ಪ್ರಮುಖ ಪಾತ್ರವಹಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡುತ್ತಿರುವುದರಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿನಲ್ಲಿವೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು.

ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹ
ಈ ವರ್ಷ 26 ಶಾಲೆಗಳಿಗೆ ಬೀಗ ಹಾಕಿದ್ದು, ಹೊಸದಾಗಿ 6 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಅಷ್ಟೇ ಅಲ್ಲ 10ಕ್ಕಿಂತ ಕಡಿಮೆ ಮಕ್ಕಳಿರುವ 60 ಶಾಲೆಗಳಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೂ ಬೀಗ ಹಾಕಿದರೂ ಆಶ್ಚರ್ಯವಿಲ್ಲ. ಹಾಗಾಗಿ ಸರ್ಕಾರ ಕೂಡಲೇ ಸರ್ಕಾರಿ ಶಾಲೆಗಳನ್ನ ಉಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಣ್ಣಾಮುಚ್ಚಾಲೆ ನಡೆಸ್ತಿದೆಯಾ ಸರ್ಕಾರ?
ಒಂದೆಡೆ ಸರ್ಕಾರಿ ಶಾಲೆಗೆ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಮತ್ತೊಂದೆಡೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಸರ್ಕಾರಗಳ ನಡೆಯಿಂದಲೇ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆಯಾ? ಎಂದು ಸರ್ಕಾರದ ವಿರುದ್ಧ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನದರೂ ಸರ್ಕಾರ, ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತದೆಯಾ ಅನ್ನುವುದನ್ನು ಕಾದುನೋಡಬೇಕಿದೆ.

ಸರ್ಕಾರದ ವಿರುದ್ಧ ಜನರು ಆಕ್ರೋಶ
ಈಗಾಗಲೇ ಕಾಫಿನಾಡಿನಲ್ಲಿ ಭಾರೀ ಮಳೆಯಿಂದಾಗಿ ಮನೆಗಳು ಸೇರಿದಂತೆ, ಶಾಲೆಯ ಕಟ್ಟಡಗಳು ಕೂಡ ಅವನತಿ ಹಂತಕ್ಕೆ ತಲುಪಿವೆ. ಇವುಗಳನ್ನು ದುರಸ್ತಿ ಮಾಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು. ಇದೀಗ ಸರ್ಕಾರಿ ಶಾಳೆಗಲು ಮುಚ್ಚುವ ಹಂತಕ್ಕೆ ತಲುಪಿದ್ದು, ಅಧಿಕಾರಿಗಳು ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ. ಜಿಲ್ಲೆಯಲ್ಲಿ 2011ರಿಂದ ಇಲ್ಲಿಯವರೆಗೂ 105 ಸರ್ಕಾರಿ ಶಾಲೆಗಳು ಮುಚ್ಚಿಹೋಗಿದ್ದು, ಜನರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ಕಟ್ಟಡಗಳನ್ನು ದುರಸ್ತಿ ಮಾಡಿಸದ ಕಾರಣ ಈ ದಾರಿಯನ್ನು ಅನುಸರಿಸಿದ್ದೇವೆ. ಹಾಗೂ ಸರ್ಕಾರ ಅಧಿಕಾರಿಗಳು ಸರ್ಕಾರಿ ಶಾಲೆಗಳು, ಹಾಗೂ ಖಾಸಗಿ ಶಾಲೆಗಳ ನಡುವೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಜಿಲ್ಲೆಯಲ್ಲಿ ಖಾಸಗಿ ಶಾಲೆಗಳದ್ದೇ ದರ್ಬಾರ್ ಎನ್ನುವಂತಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.

2011ರಿಂದ ಇಲ್ಲಿಯವರೆಗೂ ಮುಚ್ಚಿದ ಶಾಲೆಗಳು
ಬೀರೂರು - 8
ಚಿಕ್ಕಮಗಳೂರು -36
ಕಡೂರು - 4
ಮೂಡಿಗೆರೆ -12
ಕೊಪ್ಪ - 13
ಎನ್.ಆರ್. ಪುರ - 15
ಶೃಂಗೇರಿ - 13
ತರೀಕರೆ - 4
ಒಟ್ಟು - 105
Recommended Video












Click it and Unblock the Notifications