ಚಿಕ್ಕಮಗಳೂರು; ಕಂಡ ಕಂಡಲ್ಲಿ ಕಸ ಹಾಕುವವರಿಗೆ ಯುವಕರ ಪಾಠ
ಚಿಕ್ಕಮಗಳೂರು, ಫೆಬ್ರವರಿ 06; ಮಧ್ಯರಾತ್ರಿ ಕಂಡಕಂಡಲ್ಲಿ ಕಸ ಹಾಕುವವರಿಗೆ ಸ್ಥಳೀಯ ಯುವಕರು ಮೈಚಳಿ ಬಿಡಿಸಿದ ಘಟನೆ ನಡೆದಿದೆ. ಕಾದು ಕುಳಿತು ಕಸ ಹಾಕಿದವರಿಂದಲೇ ಕಸ ಬಾಚಿಸಿದ ಯುವಕರ ತಂಡ ಬುದ್ಧಿವಾದ ಹೇಳಿ ಕಳಿಸಿದೆ.
ಚಿಕ್ಕಮಗಳೂರು ನಗರದ ಖಾಲಿ ಸೈಟು, ಲೈಟ್ ಕಂಬ, ರಸ್ತೆಯ ತಿರುವುಗಳಲ್ಲಿ ಮಧ್ಯರಾತ್ರಿ ಕಸ ಸುರಿಯಲಾಗುತ್ತಿತ್ತು. ಕಾದು ಕುಳಿತು ಇದನ್ನು ಪತ್ತೆ ಹಚ್ಚಿದ ಯುವಕರು ಕಸ ಹಾಕುತ್ತಿದ್ದವೆ ಕೈಯಿಂದಲೇ ಕಸವನ್ನು ತುಂಬಿಸಿದ್ದಾರೆ.
ನಗರದ 26ನೇ ವಾರ್ಡಿನಲ್ಲಿ ರಾತ್ರಿ ಸರಿ ಇದ್ದ ಏರಿಯಾದ ರಸ್ತೆ ಬದಿಗಳಲ್ಲಿ ಬೆಳಗಾಗುವುದರಲ್ಲಿ ಕಸ ತುಂಬಿರುತ್ತಿತ್ತು. ಯಾರು, ಯಾವಾಗ ಹಾಕುತ್ತಾರೆಂದು? ಸ್ಥಳೀಯರು ತಲೆಕೆಡಿಸಿಕೊಂಡಿದ್ದರು. ಕಸದ ರಾಶಿಯಿಂದಾಗಿ ಕೆಟ್ಟ ವಾಸನೆ ಕೂಡ ಬರುತ್ತಿತ್ತು. ನಗರದ ಸೌಂದರ್ಯವೂ ಹಾಳಾಗಿತ್ತು.

ಅದಕ್ಕಾಗಿ ನಗರದ ನಾಲ್ಕೈದು ಹುಡುಗರು ಮಧ್ಯರಾತ್ರಿವರೆಗೂ ಕಾದು ಕೂತು ಕಸ ಹಾಕುವವರನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೆ ಅಲ್ಲದೇ ಕಸ ಹಾಕಿದವರ ಕೈಯಿಂದಲೇ ಮಧ್ಯರಾತ್ರಿಯೇ ಕಸವನ್ನು ಬಾಚಿಸಿ ಬೆಳಗ್ಗೆ ಕಸದ ಗಾಡಿಯಲ್ಲಿ ಹಾಕುವಂತೆ ಸೂಚಿಸಿದ್ದಾರೆ.
ರಾತ್ರಿ ಇಲ್ಲಿ ಕಸ ತಂದು ಸುರಿಯುವ ಬದಲು ಬೆಳಗ್ಗೆ ಬೇಗ ಎದ್ದು ಪ್ರತಿದಿನ ಬರುವ ಕಸದ ಗಾಡಿಯಲ್ಲಿ ಕಸವನ್ನು ಹಾಕುವಂತೆ ಸೂಚಿಸಿದ್ದಾರೆ. ಇನ್ನು ಮುಂದೆ ಹೀಗೆ ರಸ್ತೆ ಬದಿ ಕಸ ಸುರಿಯುವುದು ಕಂಡು ಬಂದರೆ ಕಸವನ್ನು ತುಂಬಿಕೊಂಡು ಬಂದು ನಿಮ್ಮ ಮನೆಯ ಆವರಣದಲ್ಲಿ ಸುರಿಯೋದಾಗಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿಗೆ ನಗರದ ಮಲ್ಲಂದೂರು ರಸ್ತೆಯಲ್ಲಿ ಉಪ್ಪಳ್ಳಿಗೆ ಹೋಗುವ ಮಾರ್ಗದಲ್ಲಿ ಹಾಡಹಗಲೇ ಯುವಕನೋರ್ವ ಉಪ್ಪಳ್ಳಿ ಚಿತಾಗಾರ ಸಮೀಪದ ಯಗಚಿ ನದಿಗೆ ಸೇರುವ ಹಳ್ಳಕ್ಕೆ ಬೈಕಿನಲ್ಲೇ ಕೂತು ಕಸ ಎಸೆದು ಹೋಗುತ್ತಿದ್ದನು.

ಇದನ್ನು ಗಮನಿಸಿದ ಶಾಸಕ ಸಿ. ಟಿ. ರವಿ ಕಾರಿನಿಂದ ಕೆಳಗೆ ಇಳಿದು ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಹಳ್ಳದ ನೀರು ಯಗಚಿ ಜಲಾಶಯಕ್ಕೆ ಸೇರಲಿದೆ. ಮನೆ ಬಾಗಿಲಿಗೆ ಕಸದ ಗಾಡಿ ಬರಲಿದೆ. ಇಲ್ಲಿ ಏಕೆ ತಂದು ಹಾಕುತ್ತಿದ್ದೀಯಾ? ಎಂದು ಯುವಕನಿಗೆ ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡಿದ್ದರು.
ನಗರದ ಕಲ್ಯಾಣ ನಗರದ ಬಳಿಯೂ ಯುವಕ ರಸ್ತೆಗೆ ಕಸ ಸುರಿದ ಹೋಗುವುದನ್ನು ಗಮನಿಸಿದ ನಗರಸಭೆ ಆಯುಕ್ತ ಬಸವರಾಜ್ ಅವನ ಕೈನಲ್ಲೇ ಕಸ ತುಂಬಿಸಿ, ಇನ್ನು ಮುಂದೆ ಹೀಗೆ ರಸ್ತೆಯಲ್ಲಿ ಎಸೆದರೆ ಮನೆಗೆ ನೀಡಿರುವ ಮೂಲಭೂತ ಸೌಲಭ್ಯಗಳನ್ನ ಕಟ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಯುವಕರೊಬ್ಬರು ನಗರವನ್ನು ಸ್ವಚ್ಛವಾಗಿಸಲು ಲಕ್ಷ ಲಕ್ಷ ಹಣವನ್ನು ನಗರಸಭೆ ವ್ಯಯ ಮಾಡುತ್ತದೆ. ಹೀಗಿದ್ದರೂ ಸ್ಥಳೀಯರು ಈ ರೀತಿ ಮಾಡಿದ್ದು ನಮಗೆ ಬೇಸರ ತರಿಸಿತ್ತು, ಹಾಗಾಗಿ ಕಾದು ಕಸ ಹಾಕುವವರನ್ನು ಹುಡುಕಿ ಅವರಿಂದಲೇ ಕಸ ಬಾಚಿಸಿದ್ದೇವೆ. ಅಲ್ಲದೇ ಎಚ್ಚರಿಕೆ ನೀಡಿದ್ದೇವೆ ಎಂದರು.
ನಗರವನ್ನು ಸ್ವಚ್ಛ ವಾಗಿಸೋದು ನಮ್ಮ ಉದ್ದೇಶವಾಗಿದೆ. ನಾವು ಕೂಡ ಇದರ ಜವಾಬ್ದಾರಿ ಹೊರಬೇಕಿದೆ. ಪ್ರತಿಯೊಬ್ಬ ನಾಗರಿಕರು ಕೂಡ ಕಸವನ್ನು ನಗರಸಭೆ ಕಳಿಸುವ ಆಟೋಗಳಿಗೆ ಹಾಕಿ ನಗರವನ್ನು ಸ್ವಚ್ಛವಾಡಿಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.












Click it and Unblock the Notifications