Ganesh Chaturthi 2023: ಕಾಫಿನಾಡಲ್ಲಿದೆ ವಿಶೇಷ ಕಮಂಡಲ ಗಣಪತಿ, ಇಲ್ಲಿಗೆ ಹರಕೆ ಕಟ್ಟಿಕೊಂಡವರ ಬಾಳು ಬಂಗಾರ ಅಂತೆ
ಚಿಕ್ಕಮಗಳೂರು, ಸೆಪ್ಟೆಂಬರ್, 18: ಶಿವನ ಮಡದಿ ಪಾರ್ವತಿಗೂ ತಪ್ಪಿರಲಿಲ್ಲ ಶನಿಯ ಕಾಟ. ಆತನ ಕೆಂಗಣ್ಣಿಗೆ ಗುರಿಯಾದ ಪಾರ್ವತಿ ಶನಿದೋಷಕ್ಕೆಂದು ಭೂಮಂಡಲಕ್ಕೆ ಬಂದ ಮೃಗವಧೆ ಸ್ಥಳವಿರೋದು ಕಾಫಿನಾಡಿನ ಕೊಪ್ಪದಲ್ಲಿ. ಅದು ಧಾರ್ಮಿಕ ಇತಿಹಾಸಕ್ಕೆ ಸಾಕ್ಷಿಯಾದ ಸ್ಥಳ. ಪಾರ್ವತಿ ಸ್ನಾನಕ್ಕೆಂದು ಬ್ರಹ್ಮ ಬಾಣ ಬಿಟ್ಟು ಜಲವನ್ನು ಉಕ್ಕಿಸಿದ ಈ ಸ್ಥಳದಲ್ಲಿ ಇಂದಿಗೂ ನೀರು ಬತ್ತಿಲ್ಲ. ಕಾಲಕ್ರಮೇಣ ಬ್ರಾಹ್ಮಿ ನದಿಯ ಉಗಮದ ಸ್ಥಳವಾದ ಈ ಕಮಂಡಲ ಗಣಪತಿ ದೇಗುಲದಲ್ಲಿ ವಿಘ್ನೇಶ್ವರ ಪಾದದಡಿ ನೀರು ಉಕ್ತಿರೋದು ಮತ್ತೊಂದು ವಿಶೇಷ.
ಕಮಂಡಲ ಗಣಪತಿ ದೇಗುಲ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿದೆ. ಶಿವನ ಮಡದಿ ಪಾರ್ವತಿಗೆ ಶನಿ ಕಾಟ ಆರಂಭವಾದಾಗ ತಪ್ಪಸ್ಸು ಮಾಡುವುದಕ್ಕೆ ಭೂಮಂಡಲಕ್ಕೆ ಬಂದ ಸ್ಥಳ ಇದು. ಈ ದೇಗುಲದಿಂದ 18 ಕಿಲೋ ಮೀಟರ್ ದೂರದ ಮೃಗವಧೆ ಎಂಬಲ್ಲಿ ತಪ್ಪಸ್ಸು ಮಾಡಿದ ಪಾರ್ವತಿ ದೇವಿ, ತಪ್ಪಸ್ಸಿನ ಬಳಿಕ ವಿಘ್ನೇಶ್ವರನ ಪೂಜೆ ಮಾಡಲು ನೀರಿಲ್ಲ ಎಂದಾಗ ಬ್ರಹ್ಮ ಬಾಣ ಬಿಟ್ಟು ಪಾರ್ವತಿಯ ಪೂಜೆಗಾಗಿ ನೀರು ತರಿಸಿದ ಸ್ಥಳ ಇದು. ಅಂದಿನಿಂದಲೂ ಇಲ್ಲಿ ನೀರು ನಿಂತಿಲ್ಲ.

ಬ್ರಹ್ಮನ ಬಾಣದಿಂದ ಕಮಲದ ಹೂವಿನ ಆಕಾರದಲ್ಲಿ ಮೂಡಿದ ನೀರಿನ ಬುಗ್ಗೆ ಇಂದಿಗೂ ಅದೇ ಆಕಾರದಲ್ಲಿ ಹರಿಯುತ್ತಿರುವುದರಿಂದ ಕಾಲ ಕ್ರಮೇಣ ಕಮಂಡಲ ಗಣಪತಿ ದೇಗುಲವಾಯಿತು. ಬ್ರಾಹ್ಮಿ ನದಿಯ ಉಗಮ ಕೂಡ ಇದೇ ಅಂತೆ. ಮಳೆಗಾಲದಲ್ಲಿ ವಿಘ್ನೇಶ್ವರನ ಪಾದದ ತನಕವೂ ಉಕ್ಕುವ ನೀರು ಬೇಸಿಗೆಯಲ್ಲಿ ತುಸು ಕಡಿಮೆ ಹರಿಯುತ್ತೆ. ಆದರೆ ಇತಿಹಾಸದಿಂದಲೂ ನೀರು ಬತ್ತಿದ ಉದಾಹರಣೆಯೇ ಇಲ್ಲವಂತೆ.
ಇಲ್ಲಿನ ಮತ್ತೊಂದು ವಿಶೇಷವೆಂದರೆ, ಇಲ್ಲಿನ ಗಣೇಶ ಯೋಗ ಮುದ್ರೆ ಗಣಪ. ಚಕ್ಕಲು-ಬಕ್ಕಲು ಹಾಕಿಕೊಂಡು ಯೋಗಕ್ಕೆ ಕುಳಿತಿರುವ ಭಂಗಿಯಲ್ಲಿದ್ದಾನೆ ಇಲ್ಲಿನ ವಿಘ್ನ ವಿನಾಶಕ. ಇಂತಹ ಅತ್ಯಾಪರೂಪ ಮೂರ್ತಿ ಸಿಗುವುದು ತುಂಬಾ ವಿರಳವಂತೆ. ಈ ನೀರಲ್ಲಿ ಸ್ನಾನ ಮಾಡಿದರೆ ಶನಿ ದೋಷ ಪರಿಹಾರವಾಗುತ್ತದೆ, ಓದುವ ಮಕ್ಕಳು ಇಲ್ಲಿನ ತೀರ್ಥ ಕುಡಿದ್ರೆ ಜ್ಞಾಪನ ಶಕ್ತಿಯ ಜೊತೆ ಓದು ತಲೆಗೆ ಹತ್ತುತ್ತ ಅಂತಾರೆ ದೇವಾಲಯದ ಅರ್ಚಕರು.
ಯೋಗಮುದ್ರೆಯ ಗಣೇಶನಿಗೆ ಹರಕೆ ಕಟ್ಟಿಕೊಂಡರೆ ಬೇಡಿದ ಹರಕೆ ಈಡೇರುತ್ತಂತೆ. ಈ ದೇವಾಲಯಕ್ಕೆ ಬಂದ ಪ್ರತಿಯೊಬ್ಬ ಭಕ್ತರು ಮೃಗವಧೆ ಸ್ಥಳಕ್ಕೆ ಹೋಗಿ ಅಲ್ಲಿಂದ ಇಲ್ಲಿಗೆ ಬಂದು ಪೂಜೆ ಮಾಡಿಸಿದರೆ ಒಳ್ಳೆಯದಾಗುತ್ತದಂತೆ.
ಒಟ್ಟಾರೆ, ಹಲವಾರು ಧಾರ್ಮಿಕ ಇತಿಹಾಸಕ್ಕೆ ಸಾಕ್ಷಿಯಾಗಿರುವ ಕಾಫಿನಾಡಿನ ಈ ಸ್ಥಳ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರ ನೆಚ್ಚಿನ ತಾಣವಾಗಿದೆ. ಶೃಂಗೇರಿ ಹಾಗೂ ಹೊರನಾಡಿಗೆ ಬರುವ ಲಕ್ಷಾಂತರ ಪ್ರವಾಸಿಗರಲ್ಲಿ ಈ ಕ್ಷೇತ್ರದ ಮಹಿಮೆ ಗೊತ್ತಿರುವವರು ಇಲ್ಲಿಗೆ ಬರುವುದನ್ನು ಮರೆಯುವುದಿಲ್ಲ. ಸ್ಥಳಿಯರು ಕೂಡ ಇಲ್ಲಿಗೆ ಬಂದು ಅರ್ಧಗಂಟೆ ಕುಳಿತುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಕ್ಕಿಂತಾಗುತ್ತದೆ ಅಂತಾ ದಿನಂ ಪ್ರತಿ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.












Click it and Unblock the Notifications